ಬೆಂಗಳೂರಲ್ಲಿ ಅಮುಲ್ ಹಾಲು & ಮೊಸರು ಮಾರಾಟ ಫಿಕ್ಸ್!
ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ #SaveNandini ಅಭಿಯಾನ ಟ್ರೆಂಡ್ ಆಗುತ್ತಿದೆ. ಜಗತ್ತಿನಾದ್ಯಂತ ಈ ವಿಚಾರ ಹರಡುತ್ತಿದ್ದು, ದೇಶ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಕೂಡ ಗುಜರಾತ್ ಮೂಲದ ಅಮುಲ್ ಸಂಸ್ಥೆ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಮತ್ತೊಂದೆಡೆ ಅಮುಲ್ (Amul) ಎಂಡಿ ಪ್ರಸಕ್ತ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದು, ಬೆಂಗಳೂರಲ್ಲಿ ಅಮುಲ್ ಹಾಲು & ಮೊಸರು ಮಾರಾಟಕ್ಕೆ ಮುಹೂರ್ತ ಫಿಕ್ಸ್ ಆಗಿದೆ.
ಆಂಧ್ರದ ಮದನಪಲ್ಲಿಯಿಂದ ಬೆಂಗಳೂರಿಗೆ ಹಾಲು, ಮೊಸರು ಸರಬರಾಜು ಆಗಲಿದೆ. ಇ-ಕಾರ್ಮಸ್ ಮೂಲಕ ಅಮುಲ್ ಹಾಲು ಮತ್ತು ಮೊಸರು ಮಾರಾಟ ಮಾಡುತ್ತೇವೆ. ನಂದಿನಿ ಅಥವಾ ಕರ್ನಾಟಕ ಹಾಲು ಉತ್ಪಾದಕರ ಜತೆ ಪೈಪೋಟಿ ನಡೆಸುವುದಿಲ್ಲ ಎಂದು ಅಮುಲ್ ಕಂಪನಿ ಎಂಡಿ ಜಯನ್ ಮೆಹ್ತಾ ತಿಳಿಸಿರುವುದಾಗಿ 'ಟಿವಿ9' ವರದಿ ಮಾಡಿದೆ. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಕೆಎಂಎಫ್ (KMF) ಮತ್ತು ಅಮುಲ್ ಕುರಿತಾದ ಕಿತ್ತಾಟಕ್ಕೆ ಮತ್ತೊಂದು ತಿರುವು ಸಿಕ್ಕಂತಾಗಿದೆ.

ಬೂತ್, ಮಳಿಗೆ ತೆರೆಯುವುದಿಲ್ಲ!
ಹಾಗೇ ಮಾತು ಮುಂದುವರಿಸಿರುವ ಅಮುಲ್ ಕಂಪನಿ ಎಂಡಿ, ಅಮುಲ್ ಹಾಗೂ ಕೆಎಂಎಫ್ ಸಂಬಂಧ ಚೆನ್ನಾಗಿದೆ. ನಂದಿನಿ ಹಾಲಿನ ಮಳಿಗೆ ರೀತಿ ಸ್ಟಾಲ್, ಬೂತ್ ಹಾಕುವುದಿಲ್ಲ ಎಂದು ಜಯನ್ ಮೆಹ್ತಾ ಸ್ಪಷ್ಟಪಡಿಸಿದ್ದಾರೆ. ಯಾರಿಗೆ ಅಮುಲ್ ಉತ್ಪನ್ನ ಬೇಕೋ ಅವರು ಇ-ಕಾರ್ಮಸ್ ಪ್ಲಾಟ್ಫಾರ್ಮ್ ಮೂಲಕ ಖರೀದಿ ಮಾಡಬಹುದು. ಬೆಂಗಳೂರಿಂದ 100 ಕಿಲೋ ಮೀಟರ್ ದೂರದ ಮದನಪಲ್ಲಿಯಲ್ಲಿ ಅಮುಲ್ ಪ್ಲಾಂಟ್ ಇದೆ. ಅಲ್ಲಿಂದ ಕಳುಹಿಸುತ್ತೇವೆ ವಿನಃ ನಂದಿನಿ ರೀತಿ ಬೂತ್, ಮಳಿಗೆ ತೆರೆಯುವುದಿಲ್ಲ ಎಂದಿದ್ದಾರೆ ಅಂತಾ ಜಯನ್ ಮೆಹ್ತಾ ಹೇಳಿಕೆ ಉಲ್ಲೇಖಿಸಿ 'ಟಿವಿ9' ವರದಿ ಮಾಡಿದೆ.
ಉರಿಯುವ ಬೆಂಕಿಗೆ ತುಪ್ಪ?
ಅಂದಹಾಗೆ ಅಮುಲ್ ಎಂಡಿ ಸ್ಪಷ್ಟನೆ ನೀಡಿದ್ದರೂ, ಪರಿಸ್ಥಿತಿ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಅದರಲ್ಲೂ ಬೆಂಗಳೂರಿನಲ್ಲಿ ಇ-ಕಾರ್ಮಸ್ ಪ್ಲಾಟ್ಫಾರ್ಮ್ ಮೂಲಕ ಅಮುಲ್ ಹಾಲು & ಮೊಸರು ಮಾರಾಟ ಮಾಡುವುದು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ಅಭಿಯಾನ ಮತ್ತಷ್ಟು ತೀವ್ರವಾಗುವ ಸಾಧ್ಯತೆ ದಟ್ಟವಾಗಿದೆ. ಈ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಂತೂ ಆಗಬಹುದು. ಈಗಾಗಲೇ ಜಗತ್ತಿನಾದ್ಯಂತ ನಂದಿನಿ ಉಳಿಸಿ ಅಭಿಯಾನಕ್ಕೆ ಕನ್ನಡಿಗರು ಬೆಂಬಲ ನೀಡುತ್ತಿದ್ದಾರೆ. ಮುಂದೆ ಅದು ಇನ್ನೂ ತೀವ್ರವಾದರೂ ಅಚ್ಚರಿ ಇಲ್ಲ.

ಬ್ಯಾಂಕ್‌ಗಳು ಹೋದವು.. ಈಗ ನಂದಿನಿ..?
ಕೆಲ ವರ್ಷಗಳ ಹಿಂದಷ್ಟೇ ವಿಲೀನದ ಹೆಸರಲ್ಲಿ ಕನ್ನಡಿಗರು ಕಟ್ಟಿ ಬೆಳೆಸಿದ್ದ ಬ್ಯಾಂಕ್‌ಗಳು ಯಾರದ್ದೋ ಪಾಲಾದವು. ಅದರಲ್ಲೂ ಎಸ್‌ಬಿಎಂ(SBM) ಮತ್ತು ಕರಾವಳಿಯ ಅತ್ಯುತ್ತಮ ಬ್ಯಾಂಕ್‌ಗಳು ವಿಲೀನದ ಹೆಸರಲ್ಲಿ ಮಾಯವಾದವು. ಭಾರತಕ್ಕೇ ಆರ್ಥಿಕ ಶಿಸ್ತಿನ ಪಾಠ ಮಾಡಿದ್ದ ಕನ್ನಡ ನಾಡಿನ ಕರಾವಳಿ ಭಾಗದಲ್ಲಿ ಕಟ್ಟಿದ್ದ ಅದೆಷ್ಟೋ ಬ್ಯಾಂಕ್‌ಗಳು ಭಾರಿ ಲಾಭದಲ್ಲಿದ್ದವು. ಆದರೆ ನಷ್ಟದಲ್ಲಿದ್ದ ಉತ್ತರ ಭಾರತದ ಬ್ಯಾಂಕ್‌ಗಳ ಜೊತೆ ವಿಲೀನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಕೆಎಂಎಫ್ ವಿಚಾರದಲ್ಲೂ ಇಂತಹದ್ದೇ ಮಾರುವೇಷದ ಆಟ ನಡೆಯುತ್ತಿದೆ ಎಂದು ಕನ್ನಡಿಗರು ರೊಚ್ಚಿಗೆದ್ದಿದ್ದಾರೆ.
ಒಟ್ಟಾರೆ ಹೇಳುವುದಾದರೆ ಕನ್ನಡಿಗರೇ ಕಟ್ಟಿರುವ ಸಂಸ್ಥೆಯನ್ನು ರಕ್ಷಿಸಲು ಕನ್ನಡಿಗರು ಪಣತೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಈ ವಿಚಾರದಲ್ಲಿ ಒಗ್ಗಟ್ಟಾಗಿದ್ದು, ಅಮುಲ್ ಅಬ್ಬರಕ್ಕೆ ಬ್ರೇಕ್ ಹಾಕಲು ಅಭಿಯಾನ ಆರಂಭಿಸಿದ್ದಾರೆ. ಆದರೆ ನಾವು ಬೆಂಗಳೂರಿಗೆ ಬಂದೇ ಬರುತ್ತೇವೆ ಎಂದು ಅಮುಲ್ ಎಂಡಿ ನೀಡಿರುವ ಸುಳಿವು ಮುಂದೆ ಯಾವ ತಿರುವು ನೀಡುತ್ತದೆ ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications