ಪ್ರತಾಪ್ ಸಿಂಹ ವಿಡಿಯೋ ಹೇಳಿಕೆ, ಮುಜುಗರ ತಪ್ಪಿಸಲು ಬಿಜೆಪಿ ಹೆಣಗಾಟ
"ಬಿಜೆಪಿ ಯುವ ಮೋರ್ಚಾ ಈಚೆಗೆ ಯಾವ ಪ್ರತಿಭಟನೆಗಳನ್ನು ಮಾಡಿದೆ? ಆಗ ಎಲ್ಲಾದರೂ ಟಿಯರ್ ಗ್ಯಾಸ್ ಪ್ರಯೋಗ ಮಾಡಿದ್ದರಾ ಅಥವಾ ಲಾಠಿ ಚಾರ್ಜ್ ಆಗಿದೆಯಾ? ಯುವ ಮೋರ್ಚಾದ ಪ್ರತಿಭಟನೆಗಳು ತುಂಬ ಆಕ್ರಮಣಕಾರಿಯಾಗಿರಬೇಕು ಎಂದಿದ್ದರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ. ಇನ್ನು ಮುಂದೆ ಆ ರೀತಿಯ ಪ್ರತಿಭಟನೆಗಳು ಮಾಡುವುದಾಗಿ ಹೇಳಿದ್ದೆ."
-ಹೀಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಮಾತನಾಡಿರುವ ವಿಡಿಯೋ ಎಲ್ಲೆಲ್ಲೂ ಹರಿದಾಡುತ್ತಿದೆ. ಕಳೆದ ಆಗಸ್ಟ್ ನಲ್ಲಿ ಅಮಿತ್ ಶಾ ಅವರು ಬೆಂಗಳೂರಿಗೆ ಭೇಟಿ ನೀಡಿದ್ದ ವೇಳೆ ನಡೆದಿದ್ದ ಸಂಭಾಷಣೆ ಬಗ್ಗೆ ಪ್ರತಾಪ್ ವಿಡಿಯೋ ಮಾಡಿ ಹಾಕಿದ್ದರು. ಈ ವಿಡಿಯೋ ಹಳೆಯದಾದರೂ ಮೈಸೂರು ಜಿಲ್ಲೆಯಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ನಡೆದ ಗಲಭೆ ಕಾರಣಕ್ಕೆ ಮತ್ತೆ ಜೀವ ಪಡೆದುಕೊಂಡಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವುದೇ ಬಿಜೆಪಿ ಉದ್ದೇಶ ಎಂದು ಆರೋಪಿಸಿ, ಕಾಂಗ್ರೆಸ್ ನ ನಾಯಕರು ಈ ವಿಡಿಯೋವನ್ನು ಪ್ರಚುರ ಪಡಿಸುತ್ತಿದ್ದಾರೆ. ಇದರಿಂದ ಬಿಜೆಪಿ ಭಾರೀ ಮುಜುಗರ ಎದುರಿಸುತ್ತಿದೆ. ಈ ವಿಡಿಯೋದಿಂದ ಪಕ್ಷಕ್ಕೆ ಆಗುತ್ತಿರುವ ವರ್ಚಸ್ಸಿನ ಹಾನಿಯನ್ನು ತಡೆಯಲು ಮುಂದಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಅಮಿತ್ ಶಾರನ್ನು ಸಮರ್ಥನೆ ಮಾಡಿಕೊಂಡಿದ್ದು, ಸಂಸದ ಪ್ರತಾಪ್ ಸಿಂಹ ಅವರು ಅಧ್ಯಕ್ಷರ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಂಡಂತಿದೆ ಎಂದು ಹೇಳಿದ್ದಾರೆ.
"ಅಮಿತ್ ಶಾ ಅವರ ಮಾತನ್ನು ಪ್ರತಾಪ್ ಸಿಂಹ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಸಮಸ್ಯೆಗಳನ್ನು ಯುವ ಮೋರ್ಚಾ ಮೂಲಕ ಆಕ್ರಮಣಕಾರಿಯಾಗಿ ಜನರ ಗಮನಕ್ಕೆ ತರಬೇಕು ಎಂದು ಅಮಿತ್ ಶಾ ಹೇಳಿದ್ದರು ಅಷ್ಟೇ" ಎಂದು ಯಡಿಯೂರಪ್ಪ ಹೇಳಿದ್ದಾರೆ.












Click it and Unblock the Notifications