Amit Shah's Formula: ಕಾಂಗ್ರೆಸ್ ವಿರುದ್ಧ ಲಿಂಗಾಯತ ಸಿಎಂ ಅಸ್ತ್ರ ಬಳಸಿ; ಬಿಜೆಪಿ ನಾಯಕರಿಗೆ ಅಮಿತ್ ಶಾ ಸೂತ್ರ
ಭಾರೀ ಜಿದ್ದಾಜಿದ್ದಿನಿಂದ ಕೂಡಿರುವ 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದ್ದು, ಸರಿಯಾಗಿ ಮುಂದಿನ ಒಂದು ತಿಂಗಳಿನೊಳಗೆ ಹೊಸ ಸರ್ಕಾರ ರಚನೆಯಾಗಲಿದೆ. ಅದಕ್ಕೂ ಮುನ್ನ ನಡೆಯಲಿರುವ ರಾಜಕೀಯ ಮೇಲಾಟಗಳ ನಡುವೆ ಚುನಾವಣೆಯಲ್ಲಿ ಯಾವ ಪಕ್ಷ ಬಹುಮತ ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಎಲ್ಲ ರಾಜಕೀಯ ಪಕ್ಷಗಳು ಮತ್ತು ನಾಯಕರು ಮತದಾರರನ್ನು ಓಲೈಸಿಕೊಳ್ಳಲು ಇನ್ನಿಲ್ಲದ ಕಸರತ್ತಿನಲ್ಲಿ ನಿರತರಾಗಿದ್ದಾರೆ. ಚುನಾವಣೆ ಗೆಲ್ಲಲು ಯಾವ ಅಸ್ತ್ರವನ್ನು ಪ್ರಯೋಗಿಸಬೇಕೋ ಅದೆಲ್ಲವನ್ನೂ ಮಾಡುತ್ತಿದ್ದಾರೆ. ಅದೇ ರೀತಿ ಸದ್ಯ ರಾಜ್ಯದಲ್ಲಿ ಲಿಂಗಾಯತ ಅಸ್ತ್ರ ಮತ್ತು ಪ್ರತ್ಯಸ್ತ್ರ ಸದ್ದು ಮಾಡುತ್ತಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಲಿಂಗಾಯತರ ಮತ ಪಡೆಯಲು ಲಿಂಗಾಯತ ಅಸ್ತ್ರವನ್ನು ಪ್ರಯೋಗಿಸುತ್ತಿವೆ. ಬಿಜೆಪಿಯಲ್ಲಿ ಲಿಂಗಾಯತ ಸಮುದಾಯ ಮತ್ತು ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಲಕ್ಷ್ಣಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಅವರನ್ನು ತೋರಿಸಿ ವಿಪಕ್ಷ ಕಾಂಗ್ರೆಸ್ ಟಾಂಗ್ ನೀಡುತ್ತಿದೆ.
ಮತ್ತೊಂದೆಡೆ ಆಡಳಿತರೂಢ ಬಿಜೆಪಿ ಪಕ್ಷ ಪ್ರತ್ಯುತ್ತರ ನೀಡಿದ್ದು, ಕಾಂಗ್ರೆಸ್‌ಗೆ ತಾಕತ್ತಿದ್ದರೆ ಲಿಂಗಾಯತ ಸಿಎಂ ಅಭ್ಯರ್ಥಿ ಘೋಷಿಸಲಿ. ಬಿಜೆಪಿ ಸರ್ಕಾರದಲ್ಲಿ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಲಾಗಿದೆ. ಮುಂದೆಯೂ ಬಿಜೆಪಿಯಲ್ಲಿ ಲಿಂಗಾಯತರೇ ಸಿಎಂ ಆಗಲಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಿದೆ.
ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಲಿಂಗಾಯತ ವಿಚಾರವಾಗಿ ನೇರಾನೇರ ಫೈಟ್ ನಡೆಯುತ್ತಿದ್ದು, ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಲಿಂಗಾಯತರ ಕಡೆಗಣನೆ ಆರೋಪದಿಂದ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಯಾಗಿತ್ತು. ಇದೀಗ ಲಿಂಗಾಯತ ವಿಚಾರವಾಗಿ ರಾಜ್ಯ ಬಿಜೆಪಿ ನಾಯಕರಿಗೆ ರಾಷ್ಟ್ರೀಯ ಬಿಜೆಪಿ ನಾಯಕ ಅಮಿತ್ ಶಾ ತಮ್ಮದೇ ಆದ ಸೂತ್ರವೊಂದನ್ನು ಹೇಳಿಕೊಟ್ಟಿದ್ದಾರೆ.

ಶುಕ್ರವಾರ ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಸಿದ ರಾಜ್ಯ ಬಿಜೆಪಿ ನಾಯಕರೊಂದಿಗಿನ ಸಭೆಯಲ್ಲಿ ಕೇಂದ್ರ ಗೃಹ ಸಚಿವರೂ ಆಗಿರುವ ಅಮಿತ್ ಶಾ, ಲಿಂಗಾಯತ ಕಡೆಗಣನೆ ಆರೋಪ ಎದುರಿಸಲು ರಾಜ್ಯ ನಾಯಕರಿಗೆ ಟಾಸ್ಕ್ ನೀಡಿದ್ದಾರೆ. ಈ ಲಿಂಗಾಯತ ಸಿಎಂ ದಾಳವನ್ನು ಚುನಾವಣೆ ಮುಗಿಯುವವರೆಗೂ ಬಳಸುವಂತೆ ತಾಕೀತು ಮಾಡಿದ್ದಾರೆ.
ಏನಿದು ಅಮಿತ್ ಶಾ ಲಿಂಗಾಯತ ಸಿಎಂ ತಂತ್ರ?
* ಲಿಂಗಾಯತರ ಕಡೆಗಣನೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ವಿರುದ್ಧ ಲಿಂಗಾಯತ ಸಿಎಂ ದಾಳವನ್ನು ಪ್ರಯೋಗಿಸುವಂತೆ ಅಮಿತ್ ಶಾ ತಿಳಿಸಿದ್ದಾರೆ.
* ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕಿಂತಲೂ ಬಿಜೆಪಿ ಪಕ್ಷವೇ ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದೆ. ಕಾಂಗ್ರೆಸ್‌ನ ಸಮಯಸಾಧಕ ಆಟಕ್ಕೆ ಲಿಂಗಾಯತ ಸಿಎಂ ಅಸ್ತ್ರದಿಂದಲೇ ತಿರುಗೇಟು ನೀಡಲು ಸಲಹೆ.

* ಈವರೆಗೆ ಮೂವರು ಲಿಂಗಾಯತ ನಾಯಕರನ್ನು ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಅಲ್ಲದೇ ಅತಿ ಹೆಚ್ಚು ಶಾಸಕರನ್ನು ಮಂತ್ರಿಗಳನ್ನಾಗಿ ಮಾಡಿರುವುದನ್ನು ಬಿಂಬಿಸಲು ಸಲಹೆ.
* ಬಿಜೆಪಿ ಲಿಂಗಾಯತ ನಾಯಕರಿಗೆ ಸೂಕ್ತ ಸ್ಥಾನಮಾನ, ಗೌರವ ನೀಡಲಾಗಿದೆ. ಕಳೆದ ಮೂರು ದಶಕಗಳಿಂದ ಕಾಂಗ್ರೆಸ್ ಒಬ್ಬರನ್ನೂ ಮುಖ್ಯಮಂತ್ರಿ ಮಾಡಲಿಲ್ಲ. 1989ರಲ್ಲಿ ಸಿಎಂ ಆಗಿದ್ದ ವೀರೇಂದ್ರ ಪಾಟೀಲರ ವಿಚಾರದಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಂಡಿತು ಎಂಬುದನ್ನು ಮತದಾರರಿಗೆ ತಲುಪಿಸಲು ಸೂಚಿಸಿದ್ದಾರೆ.
* ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಲಕ್ಷ್ಮಣ ಸವದಿ ಅವರು ಚುನಾವಣೆಯಲ್ಲಿ ಸೋತಿದ್ದರೂ ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಡಿಸಿಎಂ ಮಾಡಲಾಗಿತ್ತು. ಅದೇ ರೀತಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ, ವಿಪಕ್ಷ ನಾಯಕ, ಸ್ಪೀಕರ್ ಸೇರಿದಂತೆ ಎಲ್ಲಾ ಹುದ್ದೆಗಳನ್ನು ನೀಡಲಾಗಿದ್ದರೂ ದ್ರೋಹ ಮಾಡಿ ಹೋಗಿದ್ದಾರೆ ಎಂಬುದನ್ನು ಬಿಂಬಿಸಲು ಅಮಿತ್ ಶಾ ಟಾಸ್ಕ್ ನೀಡಿದ್ದಾರೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಕೊನೆಯ ದಿನಾವಾಗಿದೆ.












Click it and Unblock the Notifications