ಗಾಲಿ ಜನಾರ್ದನ ರೆಡ್ಡಿ ಬಿಜೆಪಿಗೆ ಸೇರ್ಪಡೆ: ಷರತ್ತುಗಳ ಕುರಿತು ರೆಡ್ಡಿ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 25: ಕೆಆರ್ಪಿಪಿ ಪಕ್ಷ ಸ್ಥಾಪಕ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಸೋಮವಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿ ಬಿಜೆಪಿ ಸೇರ್ಪಡೆಯಾದರು.
ಜನಾರ್ದನ ರೆಡ್ಡಿ ಅವರು ಬಿಜೆಪಿಯಲ್ಲಿ ತಮ್ಮ ಕೆಆರ್ಪಿಪಿ ಪಕ್ಷವನ್ನೂ ವಿಲೀನಗೊಳಿಸಿದ್ದಾರೆ. ಬಿಜೆಪಿ ಸೇರ್ಪಡೆ ಬಳಿಕ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನನಾಡಿದ ಜನಾರ್ದನ ರೆಡ್ಡಿ, ನನ್ನ ರಕ್ತದ ಕಣ ಕಣದಲ್ಲಿ ಬಿಜೆಪಿ ಇದೆ. ಯಾವುದೇ ಷರತ್ತು ಫಲಾಪೇಕ್ಷೆ ಇಲ್ಲದೆ ಬಿಜೆಪಿಗೆ ಸೇರ್ಪಡೆ ಆಗಿದ್ದೇನೆ. ವಿಜಯೇಂದ್ರ ಅವರ ಜೊತೆಗೆ ನಾನು ಸಾಮಾನ್ಯ ಕಾರ್ಯಕರ್ತನಾಗಿ ನಾನು ಪಕ್ಷಕ್ಕಾಗಿ ದುಡಿಯುತ್ತೇನೆ.ಮರಳಿ ತಾಯಿಯ ಮಡಿಲಿಗೆ ಬಂದಂತಾಗಿದೆ ಎಂದರು.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನ ಬಿಜೆಪಿ ಜೊತೆ ವಿಲೀನ ಮಾಡುತ್ತಿದ್ದೇನೆ. ನನ್ನ ಕಷ್ಟದ ಕಾಲದಲ್ಲಿ ನನ್ನ ಬೆನ್ನಿಗೆ ನಿಂತ ಎಲ್ಲಾ ಕಾರ್ಯಕರ್ತರಿಗೂ ವಂದನೆ ಸಲ್ಲಿಸುತ್ತೇನೆ, ನಾವೆಲ್ಲರೂ ಸೇರಿ ಬಿಜೆಪಿಗೆ ಸೇರ್ಪಡೆ ಆಗಿದ್ದೇವೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ, ವಿಶ್ವಗುರು ಪಾತ್ರಕ್ಕೆ ಕೆಲಸ ಮಾಡಿರೋ ಮೋದಿ ಅವರಿಗೆ ವಂದನೆಗಳು, ಅಮಿತ್ ಶಾ ಅವರು ದೆಹಲಿಗೆ ಆಹ್ವಾನಿಸಿ, ಬಾಹ್ಯ ಬೆಂಬಲ ಬೇಡ. ಬಿಜೆಪಿಗೆ ಬಂದು ಕೆಲಸ ಮಾಡಿ ಅಂತ ಆಹ್ವಾನ ನೀಡಿದರು. ಅವರ ಆಹ್ವಾನ ಸ್ವೀಕರಿಸಿ ಬಂದಿದ್ದೇನೆ, ಇದು ನನ್ನ ಪೂರತವ ಜನ್ಮದ ಪುಣ್ಯ ಎಂದು ಹೇಳಿದರು.
ಯಡಿಯೂರಪ್ಪ ಅವರು ಇಂದು ಇಲ್ಲಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಬಿಜೆಪಿಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಕ್ಯಾಬಿನೆಟ್ ನಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದರು. ಇಂದು ಅವರ ಸುಪುತ್ರ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಆಗಿದ್ದಾರೆ. ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರೋದು ನನ್ನ ಪುಣ್ಯ, ವಿಜಯೇಂದ್ರ ನೇತೃತ್ವದಲ್ಲಿ ಎಲ್ಲರೂ ಜೊತೆಗೂಡಿ ಕೆಲಸ ಮಾಡುತ್ತೇವೆ. ಯಾವುದೇ ಫಲಾಪೇಕ್ಷೆ ಇಲ್ಲದೆ, ಕೆಲಸ ಮಾಡುತ್ತೇವೆ. ಎಲ್ಲಾ ಏಳು, ಬೀಳುಗಳನ್ನ ನೋಡಿದ್ದೇನೆ ಎಂದು ಹೇಳಿದರು.
ಪಕ್ಷ ಯಾವುದೇ ಜವಾಬ್ದಾರಿ ನೀಡಿದ್ರು, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.ಸಾಮಾನ್ಯ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ, ನಾನು ನನ್ನ ಮನೆಗೆ ವಾಪಸ್ ಬಂದಿರೋ ಖುಷಿ ಇದೆ. ಕೆಲ ಕಾರಣದಿಂದ ಹೊರಗೆ ಹೋಗಿದ್ದೆ. 13 ವರ್ಷಗಳ ಬಳಿಕ ವಾಪಸ್ ಬಂದಿದ್ದೇನೆ ಅನಿಸುತ್ತಿಲ್ಲ, ಬೆಳಗ್ಗೆ ಹೋಗಿ, ಮಧ್ಯಾಹ್ನ ಬಂದಿದ್ದೇನೆ ಅನಿಸುತ್ತಿದೆ ಎಂದು ಜನಾರ್ದನ ರೆಡ್ಡಿ ಅವರು ಹೇಳಿದರು.
ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಲಿ ದೇಶ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಷರತ್ತು, ಫಲಾಪೇಕ್ಷೆ ಇಲ್ಲದೆ ಬಿಜೆಪಿಗೆ ಬಂದಿದ್ದೇನೆ. ಕಾರ್ಯಕರ್ತನಾಗಿ ದುಡಿಯುತ್ತೇನೆ. ನನ್ನ ಮನೆಗೆ ವಾಪಸ್ ಬಂದಂತಾಗಿದೆ. ನನ್ನ ರಕ್ತದ ಕಣಕಣದಲ್ಲಿ ಬಿಜೆಪಿ ಇತ್ತು. ಮತ್ತೆ ತಾಯಿ ಮಡಿಲಿಗೆ ಸೇರ್ಪಡೆ ಆಗಿದ್ದೇನೆ ಎಂದು ಹೇಳಿದರು.












Click it and Unblock the Notifications