Lok Sabha Elections 2024: ಲೋಕಸಮರಕ್ಕೆ ಕಮಲ-ದಳ ಮೈತ್ರಿ: ಬಿ ಎಸ್ ಯಡಿಯೂರಪ್ಪ ಹೇಳಿದಿಷ್ಟು!
ಬೆಂಗಳೂರು, ಸೆಪ್ಟೆಂಬರ್ 08: : 2024 ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಲಿದೆ ಎನ್ನುವ ಚರ್ಚೆಗಳು ಜೋರಾಗಿದ್ದು, ಇದೀಗ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡರು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಚರ್ಚೆ ನಡೆಸಿದ ಬಳಿಕ ಮೈತ್ರಿ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸುಳಿವೊಂದನ್ನು ಕೊಟ್ಟಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆಗೂ ಮುನ್ನಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಬಿಜೆಪಿ- ಜೆಡಿಎಸ್ ಮೈತ್ರಿಗೆ ಅಮಿತ್ ಶಾ ಒಪ್ಪಿದ್ದಾರೆ. ನಾಲ್ಕು ಸ್ಥಾನ ಬಿಟ್ಟುಕೊಡಲು ಅವರು ಹೇಳಿದ್ದಾರೆ. ಜೆಡಿಎಸ್ ಜೊತೆಗಿನ ಮೈತ್ರಿಯಿಂದ ನಮಗೆ ಶಕ್ತಿ ಬರುತ್ತೆ ಎಂದು ಯಡಿಯೂರಪ್ಪ ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲು ದೊಡ್ಡ ಪ್ರಮಾಣದ ಕಾರ್ಯಕರ್ತರ ಸೇರಿದ್ದಾರೆ. ಇಷ್ಟು ದಿನ ನಾನು ಶಾಂತವಾಗಿದೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ನನಗೆ ಸಂತೋಷ ತಂದಿದೆ. ಜೆಡಿಎಸ್ ಗೆ ನಾಲ್ಕು ಸೀಟ್ ಕೊಡಲು ಅಮಿತ್ ಶಾ ಒಪ್ಪಿಕೊಂಡಿದ್ದಾರೆ, ಜೆಡಿಎಸ್ ಜೊತೆಗಿನ ಮೈತ್ರಿಯಿಂದ ನಮ್ಮಗೆ ಶಕ್ತಿ ಬಂದಿದೆ. 25 ಕ್ಕೂ ಹೆಚ್ಚು ಸೀಟ್ ಗೆಲ್ಲಲು ನಮಗೆ ಸಹಾಯ ಆಗುತ್ತದೆ ಎಂದು ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯದಲ್ಲಿ ಜನ ವಿರೋಧಿ ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರಬಲವಾಗಿ ಹೋರಾಡಲು ವಿಪಕ್ಷಗಳ ಮಧ್ಯೆ ಮೈತ್ರಿ ಬಹಳ ಮುಖ್ಯವಾಗಿದೆ. ನಾವು ಒಗ್ಗಟ್ಟಾಗಿ ಸರ್ಕಾರ ವಿರುದ್ಧ ಹೋರಾಡುತ್ತೇವೆ ಎಂದು ಹೇಳಿದ್ದಾರೆ.
ಇತ್ತ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್, ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳನ್ನ ಗೆಲ್ಲಲು ಈಗಾಗಲೇ ಮಾಸ್ಟರ್ ಪ್ಲಾನ್ ನಡೆಸಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಮುಂದಾಗಿದೆ. ಈಗಾಗಲೇ ಜೆಡಿಎಸ್ ವರಿಷ್ಠ ದೇವೇಗೌಡರು ಲೋಕಸಭೆ ಚುನಾವಣೆ ಸಂಬಂಧ ದೆಹಲಿಯಲ್ಲಿ ಬಿಜೆಪಿ ವರಿಷ್ಠ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಅಲ್ಲದೇ ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹಗೊಂಡಿದ್ದು, ಅವರ ಕೋರ್ಟ್ ಕೇಸ್ ಗೆ ಸಂಬಂಧಿಸಿದಂತೆ ವಕೀಲರ ಭೇಟಿಗೆ ದೆಹಲಿಗೆ ತೆರಳಿದ್ದ ದೇವೇಗೌಡರು ಇದೇ ವೇಳೆ ರಹಸ್ಯವಾಗಿ ಅಮಿತ್ ಶಾ ಹಾಗೂ ಜೆ ಪಿ ನಡ್ಡಾ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications