
ಕರ್ನಾಟಕ: ಬಿಜೆಪಿ ಕಾರ್ಯಕಾರಿ ಸಮಿತಿ ಸಭೆ ಅಮಿತ್ ಶಾ ಭಾಗಿ ಸಾಧ್ಯತೆ
ಬೆಂಗಳೂರು, ಅಕ್ಟೋಬರ್ 05: ಬೆಂಗಳೂರು ಅರಮನೆ ಮೈದಾನದಲ್ಲಿ ಅಕ್ಟೋಬರ್ 7ರಂದು ಹಮ್ಮಿಕೊಳ್ಳಲಾಗಿರುವ ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ಹಲವೆಡೆ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಬಿಜೆಪಿಯ ನಿರ್ಣಾಯಕ ಸಭೆಯನ್ನು ಹಲವು ಬಾರಿ ಮುಂದೂಡಲಾಗಿತ್ತು. ಇದೀಗ ಸಭೆಯ ಆಯೋಜನೆ ದಿನಾಂಕ ನಿಗದಿ ಮಾಡಿದ್ದು, ಸಭೆಯಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವರ ಕಚೇರಿಯನ್ನು ಸಂಪರ್ಕಿಸಲಾಗಿದೆ. ಆದರೆ ಈ ಬಗ್ಗೆ ಯಾವುದು ಅಂತಿಮವಾಗಿಲ್ಲ. ರಾಜ್ಯದ ಆಹ್ವಾನಕ್ಕೆ ಅಮಿತ್ ಶಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಪಾದಯಾತ್ರೆಗೆ ಕೆರಳಿದ ಬಿಜೆಪಿಯಿಂದ ಅ.30ಕ್ಕೆ ಬೃಹತ್ ಒಬಿಸಿ ಜಾಗೃತಿ ಸಮಾವೇಶ
ಕೇಂದ್ರ ಗೃಹ ಸಚಿವರು ಸೇರಿದಂತೆ ಬಿಜೆಪಿಯ ಕರ್ನಾಟಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತಿತರರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ದೇಶಾದ್ಯಂತ ಕಾಂಗ್ರೆಸ್ ನಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಿಂದ ಪ್ರತಿಪಕ್ಷದ ಶಕ್ತಿ ಪ್ರದರ್ಶನವಾಗುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಕಾರ್ಯತಂತ್ರ ರೂಪಿಸಲು ಸಜ್ಜಾಗಿದೆ. ಅಲ್ಲದೇ ಕಾಂಗ್ರೆಸ್ ಪಾದಯಾತ್ರೆಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಸಹ ಗುರುವಾರ ಭಾರತ್ ಜೋಡೋದಲ್ಲಿ ನಾಯಕರೊಂದಿಗೆ ಹೆಜ್ಜೆ ಹಾಕಲಿದ್ದಾರೆ.
ಬಿಎಸ್‌ವೈ ಜತೆ ಸಿಎಂ ರಾಜ್ಯ ಪ್ರವಾಸ
ಇದರಿಂದಾಗಿ ಬಿಜೆಪಿಯು ಪಕ್ಷದ ಸರಣಿ ಸಮಾವೇಶಗಳು ಹಾಗೂ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಚಿಂತನೆ ನಡೆಸಿದೆ. ದಸರಾ ಮುಕ್ತಾಯಗೊಂಡ ನಂತರ ಯಡಿಯೂರಪ್ಪ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದಾದ್ಯಂತ ಪ್ರವಾಸ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ. ಈ ಬಗ್ಗೆ ಅವರೇ ಘೋಷಿಸಿದ್ದಾರೆ.

ಕಾಂಗ್ರೆಸ್‌ನ ಸರಣಿಯಾಗಿ ಹಮ್ಮಿಕೊಂಡ ಸಿದ್ದರಾಮೋತ್ಸವ, ಮೇಕೆದಾಟು ಪಾದಯಾತ್ರೆ, ಫ್ರೀಡಂ ಮಾರ್ಚ್, ಭಾರತ್ ಜೋಡೋ ಪಾದಯಾತ್ರೆಗಳಿಂದಾಗಿ ಬಿಜೆಪಿ ಎಚ್ಚೆತ್ತುಕೊಂಡಿದೆ. ಬಿಜೆಪಿಗೆ ಇರುವ ಬೆಂಬಲ ಮತ್ತು ಶಕ್ತಿ ಪ್ರದರ್ಶನಕ್ಕಾಗಿ ಕೇಸರಿ ಪಡೆ ಅಣಿಯಾಗುತ್ತಿದೆ. ಈ ನಿಟ್ಟಿನಲ್ಲಿ ಇದೇ ತಿಂಗಳಾಂತ್ಯಕ್ಕೆ ಅಕ್ಟೋಬರ್ 30ರಂದು ಕಲಬುರಗಿಯಲ್ಲಿ ಇತರೆ ಹಿಂದುಳಿದ ವರ್ಗಗಳ ಬೃಹತ್ ಒಬಿಸಿ ಸಮುದಾಯ ಜಾಗೃತಾ ಸಮಾವೇಶವನ್ನು ಬಿಜೆಪಿ ಹಮ್ಮಿಕೊಂಡಿದೆ. ಇದರಲ್ಲಿ ಸುಮಾರು ಐದು ಲಕ್ಷ ಜನರು ಭಾಗವಹಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.