ಕಿಚನ್‌ನಲ್ಲಿ ಟಿಕೆಟ್ ಫೈನಲ್ ಆಯ್ತಾ; ಕಾಂಗ್ರೆಸ್ ಟ್ವೀಟ್ ಬಾಣ!
ಬೆಂಗಳೂರು, ಮಾರ್ಚ್ 24; ಕೇಂದ್ರ ಗೃಹ, ಸಹಕಾರ ಸಚಿವ, ಬಿಜೆಪಿಯ ವರಿಷ್ಠ ನಾಯಕ ಅಮಿತ್ ಶಾ ಕರ್ನಾಟಕ ಪ್ರವಾಸದಲ್ಲಿದ್ದಾರೆ. ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆ ಹತ್ತಿರುವಾಗುತ್ತಿರುವ ಹಿನ್ನಲೆಯಲ್ಲಿ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಆದರೆ ರಾಜ್ಯ ಕಾಂಗ್ರೆಸ್ ಅಮಿತ್ ಶಾ ಭೇಟಿಯ ವೇಳೆ ಟಿಕೆಟ್ ಫಿಕ್ಸ್ ಆಯಿತಾ? ಎಂದು ಕೇಳಿ ಟ್ವೀಟ್ ಮಾಡಿ ಟೀಕೆ ಮಾಡಿದೆ.
ಶುಕ್ರವಾರ ಬೆಳಗ್ಗೆ ಅಮಿತ್ ಶಾ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದರು, ಉಪಹಾರ ಸವಿದರು. ಯಡಿಯೂರಪ್ಪ, ಬಿ. ವೈ. ವಿಜಯೇಂದ್ರ ಹೂ ಗುಚ್ಛ ನೀಡಿ ಅಮಿತ್ ಶಾ ಸ್ವಾಗತಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇಡ್ಲಿ, ಉಪ್ಪಿಟ್ಟು, ಪೊಂಗಲ್ ವ್ಯವಸ್ಥೆ ಮಾಡಲಾಗಿತ್ತು. ಉಪಹಾರ ಸಮಿಯುತ್ತಿರುವ ಅಮಿತ್ ಶಾಗೆ ಬಿ. ವೈ. ವಿಜಯೇಂದ್ರ ಚಟ್ನಿ ಬಡಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಕುರಿತು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ. ಅಲ್ಲದೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ನೀಡಿದ ಹೇಳಿಕೆಯೊಂದನ್ನು ಅದು ಉಲ್ಲೇಖ ಮಾಡಿದೆ.
ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ, 'ನಮ್ಮ ಪಕ್ಷದ ಟಿಕೆಟ್ ಕಿಚನ್ನಲ್ಲಿ ತೀರ್ಮಾನ ಆಗಲ್ಲ ಅಂದಿದ್ರಲ್ಲ ಮಾನ್ಯ ಸಿ. ಟಿ. ರವಿ ಅವರೇ ಇದೇನಿದು ನಿಮ್ಮ ಹೇಳಿಕೆಗೆ ವಿರುದ್ಧವಾಗಿ ಆಗ್ತಾ ಇದೆಯಲ್ಲ. ವಿಜಯೇಂದ್ರ ಅವರಿಗೆ ಟಿಕೆಟ್ ಫಿಕ್ಸ್ ಆಯ್ತಾ? ಯಡಿಯೂರಪ್ಪ ಮತ್ತು ಸಂತೋಷ್ ನಡುವಣ ಮೇಲಾಟದಲ್ಲಿ ಯಾರ ಕೈ ಮೇಲಾಯ್ತು? ಎಲೆಕ್ಷನ್ ಮುಗಿವವರೆಗೆ 'ಸಂತೋಷ' ಆಟ ನಡೆಯುವುದಿಲ್ಲ ಅಲ್ಲವೇ?' ಎಂದು ಕಾಂಗ್ರೆಸ್ ಕೇಳಿದೆ.

ಈ ಹಿಂದೆ BJP VS BJP ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಿಕೊಂಡು ಟ್ವೀಟ್ ಮಾಡುತ್ತಿದ್ದ ಕಾಂಗ್ರೆಸ್ 'ಸಂತೋಷ' ಕೂಟ ಎಂಬ ಪದ ಬಳಕೆ ಮಾಡುತ್ತಿತ್ತು. ಇಂದಿನ ಟ್ವೀಟ್‌ನಲ್ಲಿ ಸಹ ಅದನ್ನು ಬಳಕೆ ಮಾಡಿದೆ. ಎಲೆಕ್ಷನ್ ಮುಗಿವವರೆಗೆ 'ಸಂತೋಷ' ಆಟ ನಡೆಯುವುದಿಲ್ಲ ಅಲ್ಲವೇ?' ಎಂದು ಬಿ. ಎಸ್. ಸಂತೋಷ್ ಹೆಸರು ಹೇಳದೇ ಟೀಕೆ ಮಾಡಿದೆ.
ಕಾಂಗ್ರೆಸ್ ಟ್ವೀಟ್ ಮಾಡಿದ್ದು ಏಕೆ?; ಕಾಂಗ್ರೆಸ್ ಈ ಟ್ವೀಟ್ ಮಾಡಲು ಕಾರಣವಿದೆ. ಅದರಲ್ಲಿ ಕಿಚನ್ ಎನ್ನುವ ಪದವನ್ನು ಸಹ ಉದ್ದೇಶಪೂರ್ವಕವಾಗಿಯೇ ಬಳಕೆ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ. ಟಿ. ರವಿ ಬಳಕೆ ಮಾಡಿದ್ದ ಪದಕ್ಕೆ ಪ್ರತಿಕ್ರಿಯೆಯಾಗಿ ಇಂದು ಕಾಂಗ್ರೆಸ್ ಈ ಟ್ವೀಟ್ ಮಾಡಿದೆ.
ವಿಜಯಪುರದಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸಿ. ಟಿ. ರವಿ, "ಟಿಕೆಟ್ ಕೊಡುವ ವಿಚಾರದಲ್ಲಿ ಪಕ್ಷದ ಸಂಸದೀಯ ಮಂಡಳಿಯಲ್ಲಿ ತೀರ್ಮಾನವಾಗುತ್ತದೆ. ಕಿಚನ್ ಕೋಣೆಯಲ್ಲಿ ತೀರ್ಮಾನವಾಗುವ ಪರಿಪಾಟ ನಮ್ಮ ಪಕ್ಷದ್ದಲ್ಲ. ನಾಯಕರ ಮಕ್ಕಳೆಂಬ ಕಾರಣಕ್ಕೆ ಅವರಿಗೆ ಟಿಕೆಟ್ ಸಿಕ್ಕಲ್ಲ" ಎಂದು ಬಿ. ವೈ. ವಿಜಯೇಂದ್ರಗೆ ಟಿಕೆಟ್ ನೀಡುವ ವಿಚಾರದ ಕುರಿತುಹೇಳಿಕೆ ನೀಡಿದ್ದರು.
ಮತ್ತೊಂದು ಕಡೆ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಶಾಸಕ ಪ್ರೀತಂ ಗೌಡ, "ನಮ್ಮದು ಪ್ರಜಾಪ್ರಭುತ್ವ ಪಕ್ಷ ನನ್ನನ್ನು ನಾನೇ ಕ್ಯಾಂಡಿಡೇಟ್ ಅಂತ ಹೇಳಿಕೊಳ್ಳುವುದಕ್ಕೆ ನಾನು ದೊಡ್ಡ ಕುಟುಂಬದವನಲ್ಲ. ಕಿಚನ್, ಡೈನಿಂಗ್ ಟೇಬಲ್ ಮೇಲೆ ಕುಳಿತುಕೊಂಡು ಅಭ್ಯರ್ಥಿ ಘೋಷಣೆ ಮಾಡುವ ಪಕ್ಷ ನಮ್ಮದಲ್ಲ" ಎಂದು ಜೆಡಿಎಸ್ ಪಕ್ಷದ ಕುಟುಂಬ ರಾಜಕಾರಣವನ್ನು ಟೀಕಿಸಿದ್ದರು.












Click it and Unblock the Notifications