ರಾಜ್ಯಕ್ಕೆ ಮತ್ತೆ ಅಮಿತ್ ಶಾ: ಸಂಪುಟ ಬದಲಾವಣೆಯೇ ಅಥವಾ ಸರ್ಕಾರ ಪುನಾರಚನೆಯ ಚಿಂತನೆಯೆ?
ಬೆಂಗಳೂರು, ಏ.9: ವಿಸ್ತರಣೆಯಾಗದ ಸಚಿವ ಸಂಪುಟ ಮತ್ತು ರಾಜ್ಯಾಧ್ಯಕ್ಷರ ಬದಲಾವಣೆಯ ಚರ್ಚೆಯ ಮಧ್ಯೆಯೇ ಇದೇ ತಿಂಗಳ 16 ಮತ್ತು 17ರಂದು ಹೊಸಪೇಟೆಯಲ್ಲಿ ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆಯು ತೀವ್ರ ಕುತೂಹಲ ಕೆರಳಿಸಿದೆ.
ಕಾರ್ಯಕಾರಿಣಿ ಸಭೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬರುವುದು ಖಚಿತವಾಗಿತ್ತು. ಈ ಮಧ್ಯೆ ರಾಜ್ಯ ಬಿಜೆಪಿ ದೊಡ್ಡ ಸರ್ಜರಿ ಅಗತ್ಯ ಇರುವುದರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಕಾರ್ಯಕಾರಿಣಿ ಸಭೆಗೆ ಹಾಜರಾಗುತ್ತಾರೆ ಎಂದು ಹೇಳಲಾಗುತ್ತಿದೆ.
ಏಪ್ರಿಲ್ 1ರಂದು ನಡೆದಿದ್ದ ಸಿದ್ದಗಂಗಾ ಡಾ.ಶಿವಕುಮಾರ ಸ್ವಾಮಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಅಮಿತ್ ಶಾ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಸಭೆಯನ್ನೂ ನಡೆಸಿ ಹಳೆಯ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ರಾಜ್ಯ ಮುಖಂಡರಿಗೆ ಸೂಚನೆ ನೀಡಿ ಹೋಗಿದ್ದರು. ಹೀಗೆ 15 ದಿನಗಳ ಅವಧಿಯಲ್ಲಿಯೇ ಮತ್ತೊಮ್ಮೆ ರಾಜ್ಯಕ್ಕೆ ಬರುತ್ತಿರುವುದರ ಹಿಂದೆ ಹಲವು ಲೆಕ್ಕಾಚಾರಗಳು ಕಾಣಿಸುತ್ತಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ವಾರ ಎರಡು ದಿನಗಳ ದೆಹಲಿ ಪ್ರವಾಸ ಕೈಗೊಂಡಿದ್ದರೂ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆಗೆ ಕೇಂದ್ರ ನಾಯಕರ ಒಪ್ಪಿಗೆ ಪಡೆಯಲು ಸಾಧ್ಯವಾಗದೆ ಬರಿಗೈಲಿ ವಾಪಸ್ಸಾಗಿದ್ದಾರೆ. ಎರಡು ದಿನ ದೆಹಲಿಯಲ್ಲಿ ಸಿಎಂ ಇದ್ದರೂ ಸಿಗದ ಅಮಿತ್ ಶಾ ಮರುದಿನವೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಕಾರ್ಯಕಾರಣಿ ನಂತರ ಕೇವಲ ಸಚಿವ ಸಂಪುಟ ಬದಲಾವಣೆ ಆಗುತ್ತದೆಯೇ ಅಥವಾ ಇಡೀ ಸರ್ಕಾರವೇ ಬದಲಾಗಬಹುದೇ ಎಂಬ ಕುತೂಹಲವನ್ನೂ ಮೂಡಿಸಿದೆ.
ರಾಜ್ಯದಲ್ಲಿ ಸದ್ಯ ನಾಲ್ಕು ಸಚಿವ ಸ್ಥಾನಗಳು ಖಾಲಿ ಇದ್ದು, ಕೆಲವು ಹಿರಿಯ ಸಚಿವರನ್ನು ಕೈ ಬಿಡುವ ಮೂಲಕ ಕನಿಷ್ಠ 10-12 ಸಚಿವ ಸ್ಥಾನಗಳನ್ನು ಕಿರಿಯ, ಉತ್ಸಾಹಿ, ಪ್ರಾದೇಶಿಕ ಮತ್ತು ಜಾತಿವಾರು ಹಾಗೂ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರಿಗೆ ಆ ಸ್ಥಾನಗಳನ್ನು ನೀಡಬೇಕು ಎಂಬ ಪ್ರಸ್ತಾಪ ಇದೆ. ಇದೇ ಕಾರಣದಿಂದ ಮುಖ್ಯಮಂತ್ರಿ ಹಲವು ಬಾರಿ ಪ್ರಯತ್ನಿಸಿದರೂ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲು ಸಾಧ್ಯವಾಗಿಲ್ಲ.
ಇದೇ ವರ್ಷದ ಅಂತ್ಯದಲ್ಲಿ ಗುಜರಾತ್ ಚುನಾವಣೆ ಎದುರಾಗುತ್ತದೆ. ಅದರ ಬೆನ್ನಲ್ಲೇ ಕರ್ನಾಟಕದ ಚುನಾವಣೆ ಬರಬಹುದು. ದಕ್ಷಿಣ ಭಾರತದಲ್ಲಿ ಇರುವ ಏಕೈಕ ರಾಜ್ಯ ಎಂದರೆ ಬಿಜೆಪಿ. ಇಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿಯ ಎಲ್ಲ ನಾಯಕರೂ ಕರ್ನಾಟಕವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ ಎಲ್ಲ ಸಭೆಗಳಿಗೂ ಕೇಂದ್ರದ ಪ್ರತಿನಿಧಿಗಳು ಹಾಜರಾಗುತ್ತಿದ್ದಾರೆ.

ಇದುವರೆಗೆ ರಾಜ್ಯದಲ್ಲಿ ಕೇವಲ ಸಚಿವ ಸಂಪುಟ ವಿಸ್ತರಣೆ ಮತ್ತು ಸಂಪುಟದಲ್ಲಿ ಪುನಾರಚನೆಯ ಬದಲಾವಣೆಯ ಬಗ್ಗೆ ಚರ್ಚೆಯಲ್ಲಿತ್ತು. ಆದರೆ, ಈಗ ಮತ್ತೊಮ್ಮೆ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಯೂ ಆರಂಭವಾಗಿದ್ದು, ಅಮಿತ್ ಶಾ ಮತ್ತು ಜಗದೀಶ ಶೆಟ್ಟರ್ ಭೇಟಿ ಇದಕ್ಕೆ ಮುನ್ನುಡಿ ಬರೆದಂತಿದೆ.
ಉತ್ತರಾಖಂಡ ಮಾದರಿ?
ಉತ್ತರಾಂಖಡ ವಿಧಾನಸಭಾ ಚುನಾವಣೆಯಲ್ಲಿ ಇತ್ತೀಚೆಗೆ ಬಿಜೆಪಿ ಭರ್ಜರಿ ಜಯ ಗಳಿಸಿದೆ. ವಿಶೇಷ ಎಂದರೆ ಉತ್ತಾರಖಂಡದಲ್ಲಿ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಬಿಜೆಪಿ ಮೂವರು ಮುಖ್ಯಮಂತ್ರಿಗಳನ್ನು ಬದಲಾಯಿಸಿತ್ತು. ರಾಜ್ಯದಲ್ಲಿ ಬಹುತೇಕ ಮೂರು ವರ್ಷ ಅಧಿಕಾರ ನಡೆಸಿದ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾಯಿಸಿ ಕಳೆದ ಜುಲೈನಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಲಾಯಿತು. ಚುನಾವಣೆಗೆ ಪೂರ್ವದಲ್ಲಿ ಮತ್ತೊಮ್ಮೊ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ನಡೆದೇ ಇದೆ. ಹೀಗೆ ಉತ್ತರಾಖಂಡದ ಮಾದರಿಯನ್ನು ಕರ್ನಾಟಕದಲ್ಲಿಯೂ ಪ್ರಯೋಗ ಮಾಡಲಾಗುತ್ತದೆಯೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿದೆ.

ಸಚಿವಾಕಾಂಕ್ಷಿಗಳಲ್ಲಿ ತಳಮಳ:
ಹೊಸಪೇಟೆಯಲ್ಲಿ ನಡೆಯುವ ಕಾರ್ಯಕಾರಿಣಿ ನಂತರ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಕೇಂದ್ರ ವರಿಷ್ಠರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ತಳಮಳ ಉಂಟಾಗಿದ್ದು, ಎಲ್ಲರೂ ರಾಜ್ಯಕಾರ್ಯಕಾರಣಿ ಸಭೆಯತ್ತ ದೃಷ್ಟಿ ನೆಟ್ಟಿದ್ದಾರೆ. ಸಚಿವ ಸ್ಥಾನಕ್ಕಾಗಿ ಲಾಭಿ ಆರಂಭಿಸಿದ್ದಾರೆ. ಇನ್ನು ಸಚಿವ ಸ್ಥಾನ ಕಳೆದುಕೊಳ್ಳುವ ಆಂತಕ ಇರುವ ಕೆಲ ಹಿರಿಯ ಸಚಿವರೂ ಸಹ ತಮ್ಮ ಸ್ಥಾನ ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಆರಂಭಿಸಿದ್ದಾರೆ. ಯಾರಿಗೆ ಕಹಿ, ಯಾರಿಗೆ ಸಿಹಿ ಎಂಬುದನ್ನು ಕಾದುನೋಡಬೇಕು.












Click it and Unblock the Notifications