ಅಂಬಿ ರಾಜಕೀಯ ಪ್ರವೇಶ: ರಮ್ಯಾಗೆ ಸುಮಲತಾ ತರಾಟೆ
ಬೆಂಗಳೂರು, ಮಾರ್ಚ್ 4: ಮಾಜಿ ನಟಿ, ಮಂಡ್ಯ ಸಂಸದೆ ರಮ್ಯಾ ಅವರನ್ನು ಅಂಬರೀಷ್ ಅವರ ಪತ್ನಿ ಸುಮಲತಾ ಸಮಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತ, ಬೆಂಗಳೂರು/ ಸಿಂಗಪುರ ಆಸ್ಪತ್ರೆ ಅಂತ ನಾನು ನನ್ನ ಪತಿಯ ಆರೋಗ್ಯಕ್ಕಾಗಿ ಪರಿತಪಿಸುತ್ತಿರುವಾಗ ಅತ್ತ ಆ ಹುಡಗಿಯದ್ದೇನು ತರ್ಲೆ ಎಂದು ಸುಮಲತಾ ಕಿಡಿಕಾರಿದ್ದಾರೆ.
'ಅಯ್ಯೋ, ಅಂಬಿ ಅಂಕಲ್ ಅವರನ್ನು ರಾಜಕೀಯಕ್ಕೆ ಕರೆ ತಂದಿದ್ದೇ ನಮ್ಮ ತಂದೆ' ಎಂದು ಕೆಆರ್ ಪೇಟೆಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರ ಮುಂದೆ ಕೊಚ್ಚಿಕೊಂಡಿದ್ದರು. ಜತೆಗೆ, ಬೆಂಗಳೂರಿನ ವಿಕ್ರಂ ಹಾಸ್ಪೆಟಿಲಿನಲ್ಲಿ ಅಂಬಿ ಆರೋಗ್ಯ ವಿಚಾರಿಸಲೆಂದು ಬಂದಿದ್ದ ರಮ್ಯಾ,
ಆಸ್ಪತ್ರೆಯ ಎದುರು ಟಿವಿ ಕ್ಯಾಮರಾಗಳನ್ನು ಕಂಡವರೆ 'ಅಂಬಿ ಅಂಕಲಿಗೆ ಏನೂ ಆಗಿಲ್ಲ. ಅವರ ದೇಹದಲ್ಲಿ 12 ಲೀಟರ್ ನೀರು ತುಂಬಿಕೊಂಡಿತ್ತು. ಅದನ್ನೆಲ್ಲಾ ತೆಗೆದುಬಿಟ್ಟಿದ್ದಾರೆ. ಇನ್ನೂ 10 ಲೀಟರ್ ನೀರಿದೆ, ಅಷ್ಟೇ. ಅದನ್ನೂ ತೆಗೆದುಬಿಟ್ಟರೆ ನಿಮ್ಮ ಆರಾಧ್ಯ ದೈವ ಕ್ಷೇಮವಾಗಿ ಮನೆಗೆ ಹಿಂದಿರುಗುತ್ತಾರೆ' ಎಂದು ಹೇಳಿದ್ದರು.

ಸುಮಲತಾ ತೀವ್ರ ಅಸಮಾಧಾನ: ಮಂಡ್ಯ ಜಿಲ್ಲಾ ಕಾಂಗ್ರೆಸ್ಸಿಗರು
ಈ ಎರಡೂ ವಿಷಯಗಳು ಸುಮಲತಾ ಅವರ ಗಮನಕ್ಕೆ ಬಂದಿದ್ದು, ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ಸಿಗರು ತಿಳಿಸಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರೂ ನೀಡದ ಹೇಳಿಕೆಗಳನ್ನು ರಮ್ಯಾ ನೀಡುತ್ತಿದ್ದಾರೆ. ಈ ರೀತಿ ಮಾತನಾಡಲು ರಮ್ಯಾಗೆ ಅಧಿಕಾರ ಕೊಟ್ಟವರು ಯಾರು? ಎಂದು ಸುಮಲತಾ ಮೇಡಂ ತುಂಬಾ ಬೇಜಾರು ಮಾಡಿಕೊಂಡಿದ್ದಾರೆಂದು ಜಿಲ್ಲಾ ಕಾಂಗ್ರೆಸ್ಸಿಗರು ಹೇಳಿದ್ದಾರೆ.

ಅಂಬರೀಷರನ್ನು ರಾಜಕೀಯಕ್ಕೆ ಕರೆ ತಂದಿದ್ದು ದೇವೇಗೌಡ್ರು
ಇನ್ನು, ನಟ ಅಂಬರೀಷ್ ಅವರನ್ನು ರಾಜಕೀಯಕ್ಕೆ ಕರೆ ತಂದಿದ್ದೇ ರಮ್ಯಾ ತಂದೆ ಆರ್ ಟಿ ನಾರಾಯಣ್ ಅವರೇ' ಎಂಬ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲಾ ಕಾಂಗ್ರೆಸ್ ನಾಯಕರು ರಮ್ಯಾಗೆ ರಾಜಕೀಯ ಇತಿಹಾಸ ಗೊತ್ತಿಲ್ಲ. ಅಸಲಿಗೆ ಅಂಬರೀಷ್ ಅವರನ್ನು ರಾಜಕೀಯಕ್ಕೆ ಬರುವಂತೆ ಪ್ರೇರೇಪಿಸಿದ್ದು ಜೆಡಿಎಸ್ ನಾಯಕ ಎಚ್ ಡಿ ದೇವೇಗೌಡ ಅವರಲ್ವಾ? ಎಂದು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ರಮ್ಯಾರತ್ತ ಪ್ರಶ್ನೆ ಎಸೆದಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಗೆ ಪತ್ರ
ಜತೆಗೆ, ಅಂಬರೀಷ್ ಚಿಕಿತ್ಸೆ ಪಡೆಯುತ್ತಿರುವ ಹೊತ್ತಿನಲ್ಲಿ ಹೀಗೆಲ್ಲಾ ಇಲ್ಲಸಲ್ಲದ ಹೇಳಿಕೆ ನೀಡದಂತೆ ರಮ್ಯಾಗೆ ಸೂಚನೆ ನೀಡುವಂತೆಯೂ ಜಿಲ್ಲಾ ಕಾಂಗ್ರೆಸ್ಸಿಗರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಮಾಜಿ ನಟಿ ರಮ್ಯಾಗೆ ಬೇಕಿತ್ತಾ ಇದೆಲ್ಲಾ?
ಒಟ್ಟಿನಲ್ಲಿ ಸಂಸದೆಯಾಗಿ ಅಕಾಲಿಕ ಅವಧಿಗೆ ಆಯ್ಕೆಯಾಗಿರುವ ಮಾಜಿ ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರು ಮಂಡ್ಯ ಕ್ಷೇತ್ರಕ್ಕೆ ಕಾಲಿಟ್ಟಾಗಲಿಂದಾಯ್ತು ಸದಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಅನಗತ್ಯವಾಗಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು/ ಮುಖಂಡರ ಕೋಪಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದಾಗಿ ಅವರು ಸಂಸದೆಯಾಗಿ ಮಾಡುತ್ತಿರುವ ಅಷ್ಟೋ/ಇಷ್ಟೋ ಒಳ್ಳೆಯ ಕೆಲಸಗಳಿಗೂ ಸ್ವಯಂ ಕಲ್ಲುಹಾಕಿಕೊಳ್ಳುತ್ತಿದ್ದಾರೆ ಎಂದು ಮಂಡ್ಯದ ಜನತೆ ಮಾತನಾಡಿಕೊಳ್ಳೂತ್ತಿದ್ದಾರೆ.












Click it and Unblock the Notifications