ರಾಜ್ಯದ ನೂತನ ಡಿಜಿ-ಐಜಿಪಿಯಾದ ಅಲೋಕ್ ಮೋಹನ್; ಪ್ರವೀಣ್ ಸೂದ್‌ರಿಂದ ಅಧಿಕಾರ ಸ್ವೀಕಾರ
ಕರ್ನಾಟಕ ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕ (ಡಿಜಿ) ಹಾಗೂ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಆಗಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಮೋಹನ್ ಅವರು ಅಧಿಕಾರ ಸ್ವೀಕರಿಸಿದರು.
ಸೋಮವಾರ, ಮೇ 22ರಂದು ಬೆಂಗಳೂರಿನ ನೃಪತುಂಗ ರಸ್ತೆಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಅಲೋಕ್ ಮೋಹನ್ ಅವರಿಗೆ ನಿರ್ಗಮಿತ ಡಿಜಿ-ಐಜಿಪಿ ಪ್ರವೀಣ್ ಸೂದ್ ಅವರು ಬ್ಯಾಟನ್ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.

ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅಲೋಕ್ ಮೋಹನ್, "ರಾಜ್ಯದ ಡಿಜಿ-ಐಜಿಪಿಯಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿ ಇದೆ," ಎಂದು ಹೇಳಿದರು.
"ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಮಹಿಳೆ ಹಾಗೂ ಮಕ್ಕಳ ಸುರಕ್ಷತೆ, ಸೈಬರ್ ಕ್ರೈಂಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸ್ ಠಾಣೆಗೆ ಬರುವ ಎಲ್ಲ ದೂರುಗಳನ್ನು ಸ್ವೀಕರಿಸಬೇಕು. ಪೊಲೀಸರಿಗೆ ಇನ್ನೂ ಕೆಲವು ಟೆಕ್ನಿಕಲ್ ಟ್ರೈನಿಂಗ್ ನೀಡಲಾಗುವುದು".
"ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಕೂಡ ಮುಖ್ಯವಾಗಿದ್ದು, ಎಲ್ಲಿಯೂ ಸಂಚಾರ ದಟ್ಟಣೆ ಆಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಗಮನ ಹರಿಸಲಾಗುವುದು," ಎಂದು ನೂತನ ಡಿಜಿ-ಐಜಿಪಿ ಅಲೋಕ್ ಮೋಹನ್ ಹೇಳಿದರು.
"ರಾಜ್ಯದಲ್ಲಿ ಯಾವುದೇ ಸಂಘಟಿತ ಅಪರಾಧ ಪ್ರಕರಣಗಳನ್ನು ಸಹಿಸುವುದಿಲ್ಲ. ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳನ್ನು ಸಂಪೂರ್ಣವಾಗ ನಿರ್ಬಂಧಿಸುವುದು ನಮ್ಮ ಗುರಿಯಾಗಬೇಕು. ಮಾನವ ಹಕ್ಕುಗಳನ್ನು ಗೌರವಿಸಿ, ಜನರಿಗೂ ಈ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕು," ಎಂದು ತಿಳಿಸಿದರು.
ಬಿಹಾರ ಮೂಲದ ಡಾ. ಅಲೋಕ್ ಕುಮಾರ್ ಅವರು 1987ನೇ ಬ್ಯಾಚ್‌ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ರಾಜ್ಯದಲ್ಲಿ 36 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಗ್ನಿಶಾಮಕ ದಳ, ತುರ್ತು ಸೇವೆಗಳ ಡಿಜಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಅಷ್ಟೇ ಅಲ್ಲದೆ, ಕಾರಾಗೃಹ ಡಿಜಿಪಿ, ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತರಾಗಿ, ಎಸಿಬಿ ಎಡಿಜಿಪಿ ಸೇರಿದಂತೆ ಹಲವು ವಿಭಾಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ನೂತನ ಡಿಜಿ-ಐಜಿಪಿ ಅಲೋಕ್ ಮೋಹನ್ ಅವರು 2025ರ ಏಪ್ರಿಲ್‌ನಲ್ಲಿ ನಿವೃತ್ತಿಯಾಗಲಿದ್ದಾರೆ.












Click it and Unblock the Notifications