ಮಗುವನ್ನೇ ನದಿಗೆ ಎಸೆದ ತಾಯಿ, ಮುಂದೆ ಏನಾಯ್ತು?
ರಾಮನಗರ: ಆಧುನಿಕ ಕಾಲದಲ್ಲಿ ಸಂಬಂಧಕ್ಕೆ ಬೆಲೆ ಇಲ್ಲ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗ್ತಾನೆ ಇದೆ. ಅದರಲ್ಲೂ ಮನೆಯಲ್ಲಿ ಗಂಡನ ಜೊತೆ ಜಗಳಕ್ಕೆ ಇಡೀ ಕುಟುಂಬವೇ ನಾಶ ಮಾಡುವ ಹಂತಕ್ಕೆ ಕೆಲವರು ಹೋಗುತ್ತಾರೆ. ಇಂತಹದ್ದೇ ಒಂದು ಘಟನೆ ಈಗ ವರದಿಯಾಗಿ, ಸಂಚಲನ ಸೃಷ್ಟಿಸಿದೆ. ಮಹಾ ತಾಯಿ ಒಬ್ಬಳು ತನ್ನ ಮಗುವನ್ನೇ ಹತ್ಯೆ ಮಾಡಿದ್ದಾಳೆ ಎಂಬ, ಗಂಭೀರ ಆರೋಪ ಈಗ ಕೇಳಿಬಂದಿದೆ.
ಹೌದು ಕ್ಷುಲ್ಲಕ ಕಾರಣಕ್ಕೆ ಮಹಾ ತಾಯಿ ತನ್ನ ಕರಳು ಕುಡಿಯನ್ನೇ ಕಣ್ವ ನದಿಗೆ ಎಸೆದು ಕೊಂದ ಪೈಶಾಚಿಕ ಕೃತ್ಯ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಬಾಣಗಳ್ಳಿ ಗ್ರಾಮದಲ್ಲಿ ನಡೆದಿದೆ. ಚನ್ನಪಟ್ಟಣ ತಾಲೂಕು ಕಾಲಿಕೆರೆ ಗ್ರಾಮದ ಮಹಿಳೆ ವಿರುದ್ಧ ತನ್ನ ಮಗುವನ್ನೇ ಕೊಂದಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಆರೋಪಿ ಮಹಿಳೆ, ತನ್ನ ಒಂದೂವರೆ ವರ್ಷದ ಗಂಡು ಮಗುವನ್ನು ಕಣ್ವ ನದಿಗೆ ಎಸೆದು ಕ್ರೌರ್ಯ ಮೆರದಿದ್ದಾಳೆ ಅಂತಾ ಆರೋಪಿಸಲಾಗಿದೆ. ಮಹಿಳೆ ಹೆಸರನ್ನು ಭಾಗ್ಯ ಎಂದು ಗುರುತಿಸಲಾಗಿದೆ.

ಪುಟಾಣಿ ಮಗುವನ್ನು ನದಿಗೆ ಎಸೆದ ತಾಯಿ
ಅಂದಹಾಗೆ ಈ ಕೃತ್ಯ ಎಸಗಿರುವ ತಾಯಿ, ಬೇರೆ ಗ್ರಾಮಕ್ಕೆ ಮದುವೆ ಆಗಿ ಹೋಗಿದ್ರು. ಆದರೆ ಆರೋಪಿ ಭಾಗ್ಯ ತನ್ನ ಪತಿ ತೊರೆದು, ತಾಯಿ ಮನೆ ಕಾಲಿಕೆರೆ ಗ್ರಾಮಕ್ಕೆ ಬಂದಿದ್ದರು ಅಂತಾ ಹೇಳಲಾಗಿದೆ. ಕೊನೆಗೆ ತನ್ನ ತಾಯಿ ಜೊತೆಗೆ ಜಗಳ ಮಾಡಿಕೊಂಡ ಭಾಗ್ಯ ತನ್ನ ಒಂದೂವರೆ ವರ್ಷದ ಮಗು ಜೀವ ತೆಗೆದಿರುವ ಆರೋಪ ಕೇಳಿಬಂದಿದೆ. ಬಾಣಗಳ್ಳಿ ಹಾಗೂ ಕೊಂಡಾಪುರ ಗ್ರಾಮದ ಮಧ್ಯೆ ಇರುವ ಕಣ್ವ ಹೊಳೆಗೆ ಎಸೆದು ಹತ್ಯೆ ಮಾಡಿದ ಆರೋಪ ಈಗ ಕೇಳಿಬಂದಿದೆ. ಮಂಗಳವಾರ ಸಂಜೆ ಈ ಪೈಶಾಚಿಕ ಕೃತ್ಯ ನಡೆದಿದ್ದು, ಇಂದು ಮಗುವಿನ ಮೃತದೇಹ ಪತ್ತೆ ಆಗಿದೆ.
ತಾಯಿ ಜೊತೆ ಕಿರಿಕ್‌ಗೆ ಮಗು ಹತ್ಯೆ?
ಭಾಗ್ಯಗಳ ಹೀನ ಕೃತ್ಯಕ್ಕೆ ಸ್ಪಷ್ಟವಾದ ಮಾಹಿತಿ ಇನ್ನೂ ಸಿಕ್ಕಿಲ್ಲ. ತಾಯಿ ಜೊತೆಗೆ ವೈಯಕ್ತಿಕ ವಿಚಾರದಲ್ಲಿ ಜಗಳ ಆಡಿದ ಕಾರಣ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಣ್ವ ನದಿಯಲ್ಲಿ ಈ ಮಗುವಿನ ಮೃತ ದೇಹ ಪತ್ತೆಯಾದ ಸ್ಥಳಕ್ಕೆ ಡಿವೈಎಸ್ಪಿ & ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕ್ಕೂರು ಪೋಲಿಸರು ಕೇಸ್ ದಾಖಲಿಸಿಕೊಂಡು, ನಿರ್ದಯಿ ತಾಯಿ ಭಾಗ್ಯ ಎಂಬಾಕೆಯನ್ನ ಬಂಧಿಸಿದ್ದಾರೆ.

ಒಟ್ನಲ್ಲಿ ಮಕ್ಕಳೇ ಇಲ್ಲಾ ಅಂತಾ, ಸಂತಾನ ಭಾಗ್ಯಕ್ಕಾಗಿ ನರಳುವ ಜನರ ನಡುವೆ. ಕಂಡ ಕಂಡ ದೇವರಿಗೆ ಹರಕೆ ಹೊತ್ತು, ಕೊರಗುವ ಸಾವಿರಾರು ತಾಯಂದಿರ ಮಧ್ಯೆ. ಈಕೆಯ ಕೃತ್ಯ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ತಾಯಿಯೆ ತನ್ನ ಸ್ವಂತ ಮಗುವನ್ನ ನದಿಗೆ ಎಸೆದು ಸಾಯಿಸಿರುವ ಅಮಾನವೀಯ ಕೃತ್ಯಕ್ಕೆ ಸರ್ವಾಜನಿಕರು ಹಿಡಿ ಶಾಪ ಹಾಕಿದ್ದಾರೆ.












Click it and Unblock the Notifications