ಬಾಂಬ್ ಬ್ಲಾಸ್ಟ್ ಬೆದರಿಕೆ, ಬೆಂಗಳೂರು ಮತ್ತೆ ಗಢಗಢ!
ಬೆಂಗಳೂರಿನಲ್ಲಿ ಒಂದಲ್ಲ ಒಂದು ಅವಘಡ ನಡೆಯುತ್ತಲೇ ಇದೆ, ಅದರಲ್ಲೂ ಇತ್ತೀಚೆಗಷ್ಟೇ ಖಾಸಗಿ ಹೋಟೆಲ್‌ನಲ್ಲಿ ಬಾಂಬ್ ಸ್ಫೋಟ ಸಂಭವಿಸಿ ಇಡೀ ಬೆಂಗಳೂರು ನಡುಗಿ ಹೋಗಿದೆ. ಈ ಘಟನೆ ನಡೆದು ಇನ್ನೇನು ಕೆಲವೇ ದಿನಗಳು ಕಳೆದಿದ್ದು, ಇದೇ ಸಮಯದಲ್ಲಿ ಮತ್ತೊಮ್ಮೆ ಭೀಕರ ಬಾಂಬ್ ಬ್ಲಾಸ್ಟ್ ಬೆದರಿಕೆ ಪತ್ರ ನಡುಕ ಹುಟ್ಟಿಸಿದೆ. ಹಾಗಾದ್ರೆ ಇಂದು ಅಸಲಿಗೆ ನಮ್ಮ ಬೆಂಗಳೂರಿನಲ್ಲಿ ಆಗಿದ್ದು ಏನು?
ಹೌದು ಬೆಂಗಳೂರಿನ ಖಾಸಗಿ ಹೋಟೆಲ್‌ಗೆ ಬಾಂಬ್ ಬೆದರಿಕೆಯ ಪತ್ರ ಬಂದಿದೆ. ಹೋಟೆಲ್‌ಗೆ ಬಾಂಬ್ ಬೆದರಿಕೆ ಪತ್ರ ರವಾನೆ ಮಾಡಲಾಗಿದೆ. ಖಾಸಗಿ ಹೋಟೆಲ್‌ನಲ್ಲಿದ್ದ ಗ್ರಾಹಕರನ್ನ, ತಕ್ಷಣ ಹೊರಗಡೆ ಕಳಿಸಿ ಪರಿಶೀಲನೆ ನಡೆಸಿದ್ದಾರೆ ಜಾಲಹಳ್ಳಿ ಪೊಲೀಸ್ ಠಾಣೆ ಪೊಲೀಸ್ರು. ಎಚ್‌ಎಂಟಿ ಮೈದಾನ ಬಳಿ ಖಾಸಗಿ ಸುತ್ತಮುತ್ತ ಬಾಂಬ್ ಇಡಲಾಗಿದೆ ಎಂದು ಜಾಲಹಳ್ಳಿ ಪೊಲೀಸ್ ಠಾಣೆಗೆ ಅನಾಮಧೇಯ ಪತ್ರ ಒಂದು ಬಂದಿತ್ತು ಎಂದು ಆರೋಪವನ್ನ ಮಾಡಲಾಗಿದೆ. ಇತ್ತೀಚೆಗಷ್ಟೇ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ, ಬಾಂಬ್ ಸ್ಫೋಟ ಸಂಭವಿಸಿ ಇಡೀ ರಾಜ್ಯ ನಡುಗಿ ಹೋಗಿತ್ತು. ಇದೀಗ ನೋಡಿದರೆ ಮತ್ತೊಮ್ಮೆ ಬಾಂಬ್ ಬೆದರಿಕೆ ಪತ್ರ ಬಂದಿರುವುದು ನಡುಕ ಹುಟ್ಟಿಸಿದೆ.

ನಡುಗಿ ಹೋಯ್ತು ಬೆಂಗಳೂರು!
ಮತ್ತೊಂದು ಕಡೆ ಈ ರೀತಿಯಾಗಿ ಬಾಂಬ್ ಬೆದರಿಕೆ ಬಗ್ಗೆ ಪತ್ರ ಬರುತ್ತಿದ್ದಂತೆ ಆತಂಕವೂ, ತೀವ್ರ ಹೆಚ್ಚಾಗಿತ್ತು. ಬೆಂಗಳೂರಿನ ಜನ ಈ ಪತ್ರದಿಂದ ಒಂದಷ್ಟು ಆತಂಕಕ್ಕೆ ಒಳಗಾಗಿದ್ದರು. ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಈ ವಿಚಾರ ದೊಡ್ಡ ಮಟ್ಟದಲ್ಲೇ ಚರ್ಚೆಗೆ ವೇದಿಕೆ ಒದಗಿಸಿತ್ತು. ಅಲ್ಲದೆ ಆ ತಕ್ಷಣವೇ ಅಲರ್ಟ್ ಆಗಿದ್ದ ಪೊಲೀಸರು ಈ ಬಗ್ಗೆ ಕ್ರಮ ಕೈಗೊಂಡು ಪರಿಶೀಲನೆ ನಡೆಸಿದ್ದರು. ಆದರೆ ಯಾವುದೇ ಅನುಮಾನಸ್ಪದ ವಸ್ತುಗಳು ಪತ್ತೆ ಆಗಿಲ್ಲ ಎನ್ನಲಾಗಿದ್ದು, ಈ ಕುರಿತು ಪರಿಶೀಲನೆ ಮುಂದುವರಿದಿದೆ.
ಪದೇ ಪದೇ ಬಾಂಬ್ ಭಯ!
ಇನ್ನು ಕೆಲವು ದಿನಗಳ ಹಿಂದಷ್ಟೇ ಕರ್ನಾಟಕದ ರಾಜಧಾನಿ ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಮಧ್ಯಾಹ್ನದ ಹೊತ್ತಲ್ಲಿ ಬಾಂಬ್ ಸ್ಫೋಟವಾಗಿತ್ತು. ಭಾರಿ ಪ್ರಮಾಣದ ಜನಸಂಧಣಿ ಇರುವ ಜಾಗದಲ್ಲೇ ಆಗಂತುಕರು ಬಾಂಬ್ ಇಟ್ಟಿರುವ ಆರೋಪ ಕೇಳಿ ಬಂದಿತ್ತು. ಈ ಸ್ಫೋಟದ ಬಗ್ಗೆ ಈಗ ತನಿಖೆ ನಡೆಯುತ್ತಿದೆ. ಈ ಘಟನೆ ಇನ್ನೂ ಜನರ ಮನಸ್ಸಿನಲ್ಲೂ ಹಾಗೂ ಹೋಟೆಲ್ ಮಾಲೀಕರ ಮನಸ್ಸಿನಲ್ಲೂ ಅಚ್ಚಳಿಯದೆ ಹಾಗೇ ಉಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ಕಿಡಿಗೇಡಿಗಳು ಇಂತಹ ಕೃತ್ಯ ಎಸಗಿದ್ದಾರೆ ಎಂಬ ಆರೋಪಗಳು ಈಗ ಕೇಳಿಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ ಪೊಲೀಸರು.












Click it and Unblock the Notifications