ಆದಾಯ ಮುಚ್ಚಿಟ್ಟ ಪ್ರಕರಣ; ಹೈಕೋರ್ಟ್ ವಿಚಾರಣೆಗೆ ಸಂಸದ ಪ್ರಜ್ವಲ್ ರೇವಣ್ಣ ಹಾಜರ್
ಬೆಂಗಳೂರು, ಅ.12: ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಕೆ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಖುದ್ದು ಹಾಜರಾಗಿದ್ದರು.
ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಕೋರಿರುವ ಅರ್ಜಿಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಮಂಗಳವಾರ ಹೈಕೋರ್ಟ್‌ನ ಏಕಸದಸ್ಯಪೀಠದ ಎದುರು ಹಾಜರಾಗಿ, ಕಟಕಟೆಯಲ್ಲಿ ನಿಂತು ವಿಚಾರಣೆ ಎದುರಿಸಿದರು.
ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಯಗೊಂಡಿರುವ ಬಿಜೆಪಿಯ ಎ.ಮಂಜು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಈ ವೇಳೆ ನ್ಯಾಯಾಲಯದ ನಿರ್ದೇಶದನಂತೆ ವಿಚಾರಣೆ ಎದುರಿಸಿದ ಪ್ರಜ್ವಲ್ ರೇವಣ್ಣ, ಅರ್ಜಿದಾರರ ಪರ ವಕೀಲರ ಪ್ರಶ್ನೆಗಳಿಗೆ ಉತ್ತರಿಸಿದರು. ಸಂಸದರ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಅಕ್ಟೋಬರ್15ಕ್ಕೆ ಮುಂದೂಡಿದೆ.

'ಆದಾಯ ತೆರಿಗೆ ವಿವರಗಳಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ದಾಖಲೆ ಸುಳ್ಳು ಅಂಕಿ ಅಂಶಗಳಿಂದ ಕೂಡಿದೆ' ಎಂಬುದು ಅರ್ಜಿದಾರರ ಆರೋಪವಾಗಿದೆ.
ವಾರ್ನಿಂಗ್ ನೀಡಿತ್ತು: ನ್ಯಾಯಪೀಠ ಕಳೆದ ವಿಚಾರಣೆಯಲ್ಲಿ, ಮುಂದಿನ ವಿಚಾರಣೆಗೆ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗಲೇಬೇಕು, ಹಣ ಇದೆ ಎಂದು ವಕೀಲರನ್ನು ನೇಮಿಸಿಕೊಂಡು ಕೋರ್ಟ್‌ಗೆ ಹಾಜರಾಗುವುದನ್ನು ತಪ್ಪಿಸಿಕೊಂಡರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ವಾರ್ನ್ ಮಾಡಿತ್ತು.
ಅಲ್ಲದೆ, ಮುಂದಿನ ವಿಚಾರಣೆಗೆ ಅವರನ್ನು ಕೋರ್ಟ್ ನಲ್ಲಿ ಹಾಜರಿರಲು ಹೇಳಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಪರ ವಕೀಲರಿಗೆ ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿತು. ಅರ್ಜಿದಾರ ಪರ ವಕೀಲರು, ಪ್ರತಿವಾದಿ ಪ್ರಜ್ವಲ್ ರೇವಣ್ಣ ಹೇಗೆ ಅಕ್ರಮ ಎಸಗಿದ್ದಾರೆ,
ಅಕ್ರಮವಾಗಿ ಹೇಗೆ ಆಸ್ತಿ ಸಂಪಾದಿಸಿದ್ದಾರೆ, ಸರ್ಕಾರಿ ಜಮೀನು ಖರೀದಿಸಿದ್ದಾರೆ, ಆದಾಯ ತೆರಿಗೆ ವಂಚಿಸಿದ್ದಾರೆ, ಬೇನಾಮಿ ಆಸ್ತಿ ಗಳಿಸಿದ್ದಾರೆ ಎಂಬ ಬಗ್ಗೆ ಎಂಬ ಅಂಶಗಳ ಕುರಿತು ಪ್ರಶ್ನೆಗಳ ಮೂಲಕ ನ್ಯಾಯಪೀಠ ಹೇಳಿಕೆ ದಾಖಲು ಮಾಡಿಸಿದರು.
ಅರ್ಜಿದಾರರು, 'ಪ್ರಜ್ವಲ್ ರೇವಣ್ಣ ತಮ್ಮ ಆದಾಯ ತೆರಿಗೆ ವಿವರಗಳಿಗೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿರುವ ದಾಖಲೆ ಸುಳ್ಳು ಅಂಕಿ ಅಂಶಗಳಿಂದ ಕೂಡಿವೆ' ಎಂಬುದಾಗಿದೆ.

'ಒಂದು ವೇಳೆ ಈ ಪ್ರಕರಣದಲ್ಲಿ ನ್ಯಾಯಾಲಯ ಹಾಲಿ ಆಯ್ಕೆಯನ್ನು ಅನೂರ್ಜಿತಗೊಳಿಸಿದರೆ, ಅತಿ ಹೆಚ್ಚು ಮತ ಪಡೆದ ಎರಡನೇ ಅಭ್ಯರ್ಥಿಯಾದ ನನ್ನನ್ನೇ ಆಯ್ಕೆಯಾದ ಅಭ್ಯರ್ಥಿ ಎಂದು ಘೋಷಿಸಬೇಕು ಎಂಬ ಮಂಜು ಅವರ ಕೋರಿಕೆ ಸಮಂಜಸವಲ್ಲ' ಎಂದು ಪ್ರಜ್ವಲ್ ಪ್ರತ್ಯಾರೋಪ ಅರ್ಜಿಯಲ್ಲಿ ತಿಳಿಸಿದ್ದಾರೆ.
'ಮಂಜು ಅವರೂ ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ, ತಮ್ಮ ವಿರುದ್ಧದ ಆಸ್ತಿ ಘೋಷಣೆ ಬಗ್ಗೆ ನಾಮಪತ್ರದ ಜೊತೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ, ಕ್ರಿಮಿನಲ್ ಪ್ರಕರಣಗಳಿರುವುದನ್ನು ಮುಚ್ಚಿಟ್ಟಿದ್ದಾರೆ, ಆದ್ದರಿಂದ ಅವರ ಕೋರಿಕೆ ಪುರಸ್ಕರಿಸಬಾರದು' ಎಂದು ಮನವಿ ಮಾಡಿದ್ದಾರೆ.
ಆರೋಪವೇನು?: ಸಂಸದ ಪ್ರಜ್ವಲ್ ರೇವಣ್ಣ ಅಕ್ರಮವಾಗಿ ಆಸ್ತಿಗಳಿಸಿದ್ದಾರೆ. ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ್ದಾರೆ. ಹಲವು ಕಂಪನಿಗಳಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಆದರೆ, ಚುನಾವಣೆ ವೇಳೆ ನಾಮಪತ್ರ ಸಲ್ಲಿಸುವಾಗ ಇವುಗಳ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂಬುದು ಆರೋಪವಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಇದ್ದ ಆರೋಪವೇನು?: "ಪ್ರಜ್ವಲ್ ರೇವಣ್ಣ ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿ ಸುಳ್ಳು ಮಾಹಿತಿ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಘೋಷಣೆ ಮಾಡಿದ್ದಾರೆ. ಹಲವು ಕಂಪೆನಿಗಳಲ್ಲಿ ಪಾಲುದಾರಿಕೆ ಹೊಂದಿದ್ದರೂ ಅದನ್ನು ಪ್ರಮಾಣ ಪತ್ರದಲ್ಲಿ ನಮೂದಿಸಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಜೊತೆಗಿನ ಸಾಲದ ವ್ಯವಹಾರವನ್ನು ಮುಚ್ಚಿಟ್ಟಿದ್ದಾರೆ. ಸುಮಾರು 6 ಕೋಟಿ ಮೌಲ್ಯದ ಆಸ್ತಿ ಬಗ್ಗೆ ವಿವರ ನೀಡಿಲ್ಲ. ಈ ಬಗ್ಗೆ ಈ ಮುಂಚೆ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿತ್ತು" ಎಂದು ಮಂಜು ಹಾಗೂ ವಕೀಲ ದೇವರಾಜು ಆರೋಪಿಸಿದ್ದರು.
ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯಕ್ಕೂ ದೂರು ಸಲ್ಲಿಸಿ ತನಿಖೆಗೆ ಆಗ್ರಹಿಸಿದ್ದರು. ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಕೂಡಾ ಇದು ಆದಾಯ ತೆರಿಗೆ ಇಲಾಖೆ ತನಿಖೆಗೆ ಸೂಕ್ತವಾದ ಪ್ರಕರಣ ಎಂದು ವರದಿ ನೀಡಿದ್ದರು. ನಂತರ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ಪ್ರಜ್ವಲ್ ಪರ ಬಂದಿದೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಎ.ಮಂಜು, ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ದ 141,324 ಮತಗಳ ಅಂತರದಿಂದ ಪರಾಭವಗೊಂಡಿದ್ದರು.












Click it and Unblock the Notifications