ಡಿಕೆ ಶಿವಕುಮಾರ್ ಗೆ ಸಿಎಂ ಅವಮಾನ : ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ
ಮೈಸೂರು, ಜುಲೈ 20: ಮೈಸೂರಿನಲ್ಲಿ ನಿನ್ನೆ(ಶನಿವಾರ) ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಾಧನಾ ಸಮಾವೇಶ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮೊದಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಷಣ ಮಾಡಿ ತಕ್ಷಣ ಕಾರ್ಯಕ್ರಮದಿಂದ ತೆರಳಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡುವ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೆಸರನ್ನು ತೆಗೆದುಕೊಳ್ಳಲಿಲ್ಲ ಎನ್ನುವುದು ಬಾರಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಸ್ಪಷ್ಟನೆ ನೀಡಿದ್ದು, ನಾನು ದೆಹಲಿಗೆ ಹೋಗಬೇಕು ಎಂದು ಹೇಳಿ ಅವರು ವೇದಿಕೆಯಿಂದ ತೆರಳಿದ್ದರು. ನಮ್ಮಿಬ್ಬರ ನಡುವೆ ಒಡಕುಂಟು ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿಯವರು ಇದನ್ನ ಲಾಭ ಮಾಡಿಕೊಳ್ಳುವ ಭ್ರಮೆಯಲ್ಲಿದ್ದಾರೆ. ಸರ್ಕಾರದ ಸಾಧನೆಯ ಬಗ್ಗೆ ಸುಳ್ಳು ಹೇಳುವ ಬಿಜೆಪಿಯವರು ಎಂದಿಗೂ ಬಹಿರಂಗ ಚರ್ಚೆಗೆ ಬರುವುದಿಲ್ಲ. ಆದರೆ ನಾವು ಚರ್ಚೆಗೆ ಸದಾ ಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕಾರ್ಯಕ್ರಮದಲ್ಲಿ ಇರುವವರಿಗೆ ಸ್ವಾಗತ ಮಾಡುವುದು ಪರಿಪಾಠ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರು ಕಾರ್ಯಕ್ರಮದಲ್ಲಿ ಆ ವೇಳೆಯಲ್ಲಿ ಇರದಿದ್ದ ಕಾರಣ, ಅವರ ಹೆಸರನ್ನು ತೆಗೆದುಕೊಳ್ಳಲಿಲ್ಲವಾದ್ದರಿಂದ, ಇದರಲ್ಲಿ ಅವಮಾನ ಮಾಡುವ ಪ್ರಶ್ನೆಯಿಲ್ಲ. ಬಿಜೆಪಿಯವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ನನ್ನ ಹಾಗೂ ಡಿಸಿಎಂ ನಡುವೆ ಒಡಕುಂಟು ಮಾಡುವ ಉದ್ದೇಶದಿಂದ ಬಿಜೆಪಿಯವರು ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ಇದರಿಂದ ರಾಜಕೀಯ ಲಾಭವಾಗಬಹುದೆಂಬ ಭ್ರಮೆ ಬಿಜೆಪಿಯವರಿಗಿದ್ದು, ಇದು ಸದಾ ಭ್ರಮೆಯಾಗಿಯೇ ಇರಲಿದೆ ಎಂದರು.
ರಾಜ್ಯದ ಸಣ್ಣ ವ್ಯಾಪಾರಿಗಳಿಗೆ ಡಿಜಿಟಲ್ ಪೇಮೆಂಟ್ನಿಂದ ತೆರಿಗೆ ನೋಟೀಸ್ ನೀಡುತ್ತಿದೆ ಎಂಬ ಕೂಗೆದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಜಿಎಸ್ ಟಿ ಎಂಬುದನ್ನು ಕೇಂದ್ರ ಸರ್ಕಾರ ಮಾಡಿದ್ದು, ಜಿಎಸ್ ಟಿ ಕೌನ್ಸಿಲ್ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತದೆ. ಇದಕ್ಕೆ ರಾಜ್ಯಸರ್ಕಾರಗಳು ಜವಾಬ್ದಾರಿಯಿಲ್ಲ. ಆದಾಗ್ಯೂ ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ರಾಜ್ಯಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ನಿನ್ನೆ ನಡೆದ ಸಾಧನಾ ಸಮಾವೇಶ ಬಿಜೆಪಿಯವರಿಗೆ ಉತ್ತರ ನೀಡಿದೆಯೇ ಎಂಬ ಪ್ರಶ್ನೆಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಕ್ಕೆ ಎರಡು ವರ್ಷತುಂಬಿದ ಸಂದರ್ಭದಲ್ಲಿ ವಿಜಯನಗರದಲ್ಲಿ ನಡೆದ ಸಮಾವೇಶದಲ್ಲಿ ಸುಮಾರು 2 ಲಕ್ಷ ಜನ ಭಾಗವಹಿಸಿದ್ದರು. ಇದು ಸರ್ಕಾರಕ್ಕೆ ಜನರ ಬೆಂಬಲವನ್ನು ಸೂಚಿಸುತ್ತದೆ. ಬಿಜೆಪಿಯವರು ಕೇವಲ ಸುಳ್ಳು ಹೇಳುತ್ತಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯವರು ಅನುಕರಿಸುತ್ತಿದ್ದಾರೆ. ನಮ್ಮ ಸರ್ಕಾರ ಗ್ಯಾರಂಟಿಗಳಿಗಾಗಿ 52 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದರು.












Click it and Unblock the Notifications