BS Yediyurappa: 'ಲೋಕ' ಅಖಾಡಕ್ಕಿಳಿದ ರಾಜಾಹುಲಿ: ಗೆಲ್ಲುವ ಸ್ಥಾನಗಳ ಕುರಿತು ಮಹತ್ವದ ಹೇಳಿಕೆ ನೀಡಿದ ಬಿ ಎಸ್ ಯಡಿಯೂರಪ್ಪ
ಬೆಂಗಳೂರು, ಜನವರಿ 19: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಮಾಜಿ ಮುಖ್ಯಮಂತ್ರಿ ಹಾಗೂ ಪ್ರಭಾವಿ ಲಿಂಗಾಯತ ನಾಯಕ ಬಿ ಎಸ್ ಯಡಿಯೂರಪ್ಪ ಅವರು ಅಖಾಡಕ್ಕೆ ಧುಮುಕಲು ಸಿದ್ದತೆ ನಡೆಸಿದ್ದಾರೆ.
ಹೌದು, ಲೋಕಸಭಾ ಚುಣಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಮೂಲಕ ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸಲು ಪಣ ತೊಟ್ಟಿರುವ ರಾಜ್ಯ ಬಿಜೆಪಿ ಲೋಕಸಭಾ ಚುನಾವಣೆ ಹಿನ್ನೆಲೆ ಹಲವು ತಂತ್ರಗಾರಿಕೆಯನ್ನ ನಡೆಸಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಬಿಜೆಪಿ ಎಸ್‍ಟಿ ಮೋರ್ಚಾ ರಾಜ್ಯ ಮಟ್ಟದ ಸಮಾವೇಶದಲ್ಲಿ ಚುನಾವಣಾ ತಂತ್ರಗಾರಿಕೆ ಸೇರಿದಂತೆ ಹಲವು ವಿಚಾರಗಳನ್ನ ಬಿಜೆಪಿ ನಾಯಕರು ಚರ್ಚಿಸಿದ್ದಾರೆ.

ಲೋಕಸಭಾ ಚುನಾವಣೆ ಕುರಿತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮಾತನಾಡಿ, ರಾಜ್ಯದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲು ಶ್ರಮಿಸಬೇಕು ಹಾಗೂ ಎಸ್‍ಟಿ ಸಮುದಾಯ ಒಗ್ಗೂಡಿಸುವ ಕೆಲಸ ಮಾಡಿ ಎಂದು ಯಡಿಯೂರಪ್ಪ ಹೇಳಿದರು.
ಶತಮಾನಗಳಿಂದ ತುಳಿತಕ್ಕೆ ಒಳಗಾದ ಹಲವಾರು ವರ್ಗಗಳಲ್ಲಿ ಪರಿಶಿಷ್ಟ ಪಂಗಡವೂ ಒಂದು. ಸಾಮಾಜಿಕ ನ್ಯಾಯ ಒದಗಿಸಬೇಕಾದ ಕಾಂಗ್ರೆಸ್ ಸರಕಾರ ಈ ಸಮುದಾಯಗಳನ್ನು ಮತಬ್ಯಾಂಕಾಗಿ ಮಾಡಿಕೊಂಡಿತ್ತು ಎಂದು ಟೀಕಿಸಿದರು. ಎಸ್‍ಸಿ, ಎಸ್‍ಟಿ, ಹಿಂದುಳಿದ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಿತ್ತು. ಇದ್ಯಾವುದನ್ನೂ ಮಾಡದೇ ಅಭಿವೃದ್ಧಿ ವಂಚಿತರನ್ನಾಗಿ ಮಾಡಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಕಾರದಿಂದ ಮಾಡಲು ಆದೇಶ ಹೊರಡಿಸಿದ್ದೆ. ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿದ್ದಾಗ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಯಿತು ಎಂದು ನೆನಪಿಸಿದರು.

ಇನ್ನೂ ಈ ವೇಳೆ ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಉದ್ಘಾಟನೆ ಆಗುತ್ತಿದೆ. ಅಯೋಧ್ಯೆಯ ವಿಮಾನನಿಲ್ದಾಣಕ್ಕೆ ನರೇಂದ್ರ ಮೋದಿಜೀ ಅವರು ಮಹರ್ಷಿ ವಾಲ್ಮೀಕಿಯ ಹೆಸರು ಕೊಟ್ಟಿರುವುದು ಅಭಿನಂದನೀಯ. ಜಿಲ್ಲೆ ಮಾತ್ರವಲ್ಲದೆ ಹೋಬಳಿ ಮಟ್ಟದಲ್ಲೂ ವಾಲ್ಮೀಕಿ ಸಮುದಾಯ ಭವನಗಳ ನಿರ್ಮಾಣಕ್ಕೆ ಯಡಿಯೂರಪ್ಪ ಅವರು ಅನುದಾನ ನೀಡಿದ್ದನ್ನು ತಿಳಿಸಿದರು. ಕೃಷಿ ಭೂಮಿ ಖರೀದಿಗೆ ಹೆಚ್ಚು ಅನುದಾನ ನೀಡಿದ್ದಾರೆ ಎಂದು ವಿವರಿಸಿದರು.
ವಾಲ್ಮೀಕಿ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಘೋಷಿಸಿದ ಯಡಿಯೂರಪ್ಪ ಅವರನ್ನು ನಮ್ಮ ಸಮುದಾಯ ನೆನಪಿಡಬೇಕು. ನಮ್ಮ ಸಮುದಾಯ ಸದಾ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದೆ ಎಂದು ತಿಳಿಸಿದರು. ಬಸವರಾಜ ಬೊಮ್ಮಾಯಿಯವರೂ ಪ್ರತ್ಯೇಕ ಸಚಿವ ಸ್ಥಾನ, ಸಚಿವಾಲಯವನ್ನು ನೀಡಿದ್ದರು ಎಂದು ಹೇಳಿದರು.
ಮೊನ್ನೆ ನಡೆದ ಚುನಾವಣೆಯಲ್ಲಿ ಹಿನ್ನಡೆ ಆಗಿರಬಹುದು. ಕಳೆದ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಒಬ್ಬರೂ ವಾಲ್ಮೀಕಿ ಸಮುದಾಯದ ನಾಯಕರು ಗೆದ್ದಿಲ್ಲ. ಸಮುದಾಯ ಎಲ್ಲೋ ಒಂದು ಕಡೆ ದೂರ ಹೋದುದನ್ನು ತಾವು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಮೀಸಲಾತಿ ಪ್ರಮಾಣ ಹೆಚ್ಚಿಸದೆ ಇರುವುದು ಯಾರ ತಪ್ಪು ಎಂಬುದನ್ನು ಅರ್ಥ ಮಾಡಿಕೊಳ್ಳಿ. ಕಾಂಗ್ರೆಸ್ ಪಕ್ಷವು ನಮ್ಮ ಸಮುದಾಯಕ್ಕೆ ಏನನ್ನೂ ಮಾಡಲಿಲ್ಲ ಎಂದು ಟೀಕಿಸಿದರು.
ಯಡಿಯೂರಪ್ಪನವರು, ಬಿಜೆಪಿ ಮಾಡಿದ ಕೆಲಸ ಸದಾ ನೆನಪಿಡುವಂಥದ್ದು. ಸಮಾಜ ಕಟ್ಟುವ ಕೆಲಸ ಬಿಜೆಪಿಯಿಂದ ಆಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಮೀಸಲಾತಿ ಪ್ರಮಾಣ ಹೆಚ್ಚಳದ ಕೆಲಸವನ್ನು ಗಮನಿಸಿ ಎಂದು ಮನವಿ ಮಾಡಿದರು.












Click it and Unblock the Notifications