'ಕರ್ನಾಟಕದ ಎಲ್ಲಾ ಶಾಲೆಗಳು ಕಡ್ಡಾಯವಾಗಿ ಕನ್ನಡ ಕಲಿಸಬೇಕು'

ಬೆಂಗಳೂರು, ನವೆಂಬರ್ 1 : 'ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೇ 5ರಷ್ಟು ಮೀಸಲಾತಿ, ಖಾಸಗಿ ಕ್ಷೇತ್ರದ ಉದ್ಯಮಗಳಲ್ಲಿಯೂ ಸಿ ಮತ್ತು ಡಿ ವರ್ಗದ ನೌಕರರ ನೇಮಕಾತಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರರಷ್ಟು ಉದ್ಯೋಗ ಮೀಸಲಾತಿ' ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು

62ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕಾಶವಾಣಿಯಲ್ಲಿ ರಾಜ್ಯದ ಜನರನ್ನು ಉದ್ದೇಶಿಸಿ ಇಂದು ಬೆಳಗ್ಗೆ ಭಾಷಣ ಮಾಡಿದರು. ರಾಜ್ಯದ ಜನರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.

All schools in the state should teach Kannada says Siddaramaiah

'ಕರ್ನಾಟಕದ ನೆಲದಲ್ಲಿ ವಾಸಿಸುತ್ತಿರುವ ಎಲ್ಲರೂ ಕನ್ನಡಿಗರು ಎಂದು ನಾವು ತಿಳಿದುಕೊಂಡಿದ್ದೇವೆ ಮತ್ತು ಹಾಗೆಯೇ ನಡೆದುಕೊಂಡಿದ್ದೇವೆ. ಇದಕ್ಕಾಗಿಯೇ ಇದು ಕನ್ನಡ ರಾಜ್ಯದ ಉತ್ಸವ. ಕನ್ನಡಿಗರ ಉತ್ಸವ' ಎಂದು ಹೇಳಿದರು.

ಸಿದ್ದರಾಮಯ್ಯ ಭಾಷಣದ ವಿವರಗಳು ಇಲ್ಲಿವೆ...

* ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೇ 5 ಐದರಷ್ಟು ಮೀಸಲಾತಿ, ಖಾಸಗಿ ಕ್ಷೇತ್ರದ ಉದ್ಯಮಗಳಲ್ಲಿಯೂ ಸಿ ಮತ್ತು ಡಿ ವರ್ಗದ ನೌಕರರ ನೇಮಕಾತಿಯಲ್ಲಿ ಕನ್ನಡಿಗರಿಗೆ ನೂರಕ್ಕೆ ನೂರರಷ್ಟು ಉದ್ಯೋಗ ಮೀಸಲಾತಿ.

* ಸಿಬಿಎಸ್‍ಇ, ಐಸಿಎಸ್‍ಇ ಶಾಲೆಗಳು ಸೇರಿದಂತೆ ಎಲ್ಲಾ ಇಂಗ್ಲಿಶ್ ಮಾಧ್ಯಮದ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸುವ ಭಾಷಾ ನೀತಿ ಜಾರಿ, ಗ್ರಾಮೀಣ ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ನಡೆಸಲು ಕ್ರಮ.

* ಕನ್ನಡ ಎನ್ನುವುದು ನನಗೆ ರಾಜಕೀಯ ಅಲ್ಲ. ನಾನು ಹುಟ್ಟು ಕನ್ನಡ ಪ್ರೇಮಿ. ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ರಾಜಕೀಯ ಜೀವನ ಪ್ರಾರಂಭಿಸಿದ್ದ ನಾನು ಅಲ್ಲಿಂದ ಇಲ್ಲಿಯವರೆಗೆ ನಾಡು-ನುಡಿ ಬಗ್ಗೆ ರಾಜಿ ಮಾಡಿಕೊಂಡಿಲ್ಲ. ಭಾಷೆ, ನೆಲ, ಜಲಕ್ಕೆ ಸಂಬಂಧಿಸಿದ ಪ್ರಶ್ನೆ ಎದುರಾದಾಗ ನಮ್ಮೆಲ್ಲರದ್ದು ಒಂದೇ ಪಕ್ಷ.

* ರಾಷ್ಟ್ರೀಕೃತ, ಗ್ರಾಮೀಣ ಮತ್ತು ಷೆಡ್ಯೂಲ್ಡ್ ಬ್ಯಾಂಕಗಳ ಸಿಬ್ಬಂದಿ ಕಡ್ಡಾಯವಾಗಿ ಕನ್ನಡ ಕಲಿಯುವಂತೆ ಸೂಚಿಸಿ ಸುತ್ತೋಲೆ, ಚಲನಚಿತ್ರ ಮಂದಿರಗಳಲ್ಲಿ ಕನ್ನಡ ಸಿನೆಮಾ ಪ್ರದರ್ಶನ ಕಡ್ಡಾಯಗೊಳಿಸಿ ಆದೇಶ, ಗುಣಮಟ್ಟದ ಕನ್ನಡ ಸಿನಿಮಾಗಳಿಗೆ ಸಹಾಯಧನವನ್ನು 125 ಸಿನಿಮಾಗಳಿಗೆ ಹೆಚ್ಚಳ, ಕನ್ನಡೇತರರಿಗೆ ಕನ್ನಡ ಕಲಿಸಲು ಬೆಂಗಳೂರು ನಗರದಲ್ಲಿ ಕನ್ನಡ ಕಲಿಕಾ ಕೇಂದ್ರಗಳ ಪ್ರಾರಂಭ ಇವು ಇತ್ತೀಚೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಪ್ರಮುಖ ಕನ್ನಡಪರ ನಿರ್ಧಾರಗಳು.

* ಪ್ರತಿಯೊಂದು ರಾಜ್ಯದ ರಾಜ್ಯಭಾಷೆಯು ಆ ನೆಲದ ಸಾರ್ವಭೌಮ ಭಾಷೆ. ಇದನ್ನು ಸಂವಿಧಾನ ಅಂಗೀಕರಿಸಿದೆ. ಮತ್ತೊಂದು ಭಾಷೆ ಆ ನೆಲದ ಬದುಕಿನ ಮೇಲೆ ಆಧಿಪತ್ಯವನ್ನು ಮೆರೆಯುವುದು ಭಾಷಾವಾರು ಪ್ರಾಂತ್ಯ ರಚನೆಯ ನೀತಿಗೆ ವಿರುದ್ಧವಾದುದು. ಸಂವಿಧಾನವೂ ಇದನ್ನು ಒಪ್ಪುವುದಿಲ್ಲ. ಸ್ಥಳೀಯತ್ವವನ್ನು ಉಳಿಸಿಕೊಂಡೇ ಅರ್ಥಾತ್ ಸ್ಥಳೀಯ ಭಾಷೆಯ ಸ್ವಾಯತ್ತತೆಯನ್ನು ಉಳಿಸಿಕೊಂಡೇ ಅನ್ಯಭಾಷೆಗಳನ್ನು ಕಲಿಯುವುದಕ್ಕೆ ಅವಕಾಶ ಕೊಡಬೇಕಾದದ್ದು ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ ಸಂಹಿತೆ ಇದನ್ನೇ ನಮ್ಮ ಸರ್ಕಾರ ಪಾಲಿಸುತ್ತಾ ಬಂದಿದೆ.

Chief Minister Siddaramaiah

* ಇಂಗ್ಲಿಶ್ ಇಲ್ಲವೆ ಹಿಂದಿ ಭಾಷೆಗೆ ನಮ್ಮ ವಿರೋಧ ಖಂಡಿತ ಇಲ್ಲ. ಆದರೆ, ಕನ್ನಡದ ಬೆಲೆ ತೆತ್ತು ಬೇರೆ ಭಾಷೆಗಳ ಹೇರಿಕೆಯನ್ನು ನಾವು ಒಪ್ಪುವುದಿಲ್ಲ. ಮೆಟ್ರೋ ರೈಲ್ವೆ ನಿಲ್ದಾಣಗಳಲ್ಲಿ ಹಿಂದಿ ಭಾಷೆ ಹೇರಿಕೆ ವಿರುದ್ಧ ಕನ್ನಡ ಸಂಘಟನೆಗಳು ದನಿ ಎತ್ತಿದಾಗ ಸ್ಪಂದಿಸಿದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಜತೆ ವ್ಯವಹರಿಸಿ ಅಲ್ಲಿ ಕನ್ನಡ ಮತ್ತು ಇಂಗ್ಲಿಶ್ ದ್ವಿ-ಭಾಷಾ ನೀತಿ ಜಾರಿಗೊಳಿಸಿತು.

* ನಮ್ಮ ಸರ್ಕಾರ ರಾಜ್ಯಧ್ವಜ ಬೇಕೆಂಬ ಜನಾಭಿಪ್ರಾಯದ ಪರವಾಗಿಇದೆ. ಈ ಬೇಡಿಕೆಯನ್ನು ಮನ್ನಿಸಿ ಅದರ ಪರಿಶೀಲನೆಗಾಗಿ ತಜ್ಞರ ಸಮಿತಿಯನ್ನು ರಚಿಸಿದೆ. ಶೀಘ್ರದಲ್ಲಿಯೇ ಆ ಬಗ್ಗೆ ಅಧಿಕೃತ ನಿರ್ಧಾರ ಕೈಗೊಳ್ಳಲಾಗುತ್ತದೆ

* ಇಂದು ಕನ್ನಡ ಭಾಷೆ ಅಷ್ಟೇ ಅಲ್ಲ ಎಲ್ಲಾ ಪ್ರಾದೇಶಿಕ ಭಾಷೆಗಳು ಬಹುದೊಡ್ಡ ಆತಂಕಗಳನ್ನು ಎದುರಿಸುತ್ತಿವೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೂಡಾ ಮಗು ಯಾವ ಭಾಷೆಯಲ್ಲಿ ಕಲಿಯಬೇಕೆಂಬ ತೀರ್ಮಾನ ಪಾಲಕರಿಗೆ ಸೇರಿದ್ದು ಎಂಬ ತೀರ್ಪು ನೀಡಿದೆ. ಇದು ಕೇವಲ ಕನ್ನಡ ಭಾಷೆಗೆ ಮಾತ್ರವಲ್ಲ ನಮ್ಮ ಇಡೀ ಸಮಾಜದ ರಚನೆಗೆ ಬಂದಿರುವ ಕುತ್ತು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.

* ಸಂವಿಧಾನದ ಆಶಯದಂತೆ ಆರು ವರ್ಷದಿಂದ 14 ವರ್ಷ ವಯೋಮಾನದ ಮಕ್ಕಳಿಗೆ ಆ ಮಕ್ಕಳ ಒಳಿತಿಗಾಗಿ ಅಗತ್ಯವಾದ ಎಲ್ಲಾ ವಿವೇಚನಾಪೂರ್ವಕ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸೂಕ್ತ ಕಾನೂನು ರೂಪಿಸಿ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡಬೇಕಾಗಿರುವುದು ರಾಜ್ಯದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಮಾತೃ ಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ಜಾರಿಗೊಳಿಸಲು ರಾಷ್ಟ್ರವ್ಯಾಪೀ ಅಭಿಪ್ರಾಯ ರೂಪಿಸಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕೆಂಬುದು ಕೇಂದ್ರ ಸರ್ಕಾರಕ್ಕೆ ನಮ್ಮ ಸರ್ಕಾರದ ಒತ್ತಾಯವಾಗಿದೆ.

* ನಮ್ಮ ಸರ್ಕಾರವು ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರು, ಬುದ್ದಿಜೀವಿಗಳು, ಸಾಹಿತಿಗಳು ಹಾಗೂ ಕಾನೂನು ಪಂಡಿತರ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಆಯೋಜಿಸಿ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ತರಲು ಪ್ರಧಾನ ಮಂತ್ರಿ ಅವರಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ. ಆದರೆ, ಈ ಪತ್ರಗಳಿಗೆ ಈವರೆಗೂ ಪ್ರಧಾನಮಂತ್ರಿಯವರಿಂದ ಯಾವುದೇ ಸ್ಪಂದನೆ ದೊರೆತಿಲ್ಲ.

* ಕಲಿಕೆ ಎಂಬುದು ಕಲಿಯುವ ಮಕ್ಕಳ ಆಯ್ಕೆಯಾಗಿಲ್ಲ. ಬದಲಾಗಿ ಪಾಲಕ-ಪೋಷಕರ ಆಯ್ಕೆಯಾಗಿದೆ. ಆಂಗ್ಲ ಭಾಷಾ ಶಾಲೆಗಳಲ್ಲಿ ಕಲಿತರೆ ಮಾತ್ರ ಬದುಕು ಮತ್ತು ಭವಿಷ್ಯ ಎಂಬ ಹುಸಿ ನಂಬಿಕೆ ಪಾಲಕ-ಪೋಷಕರಲ್ಲಿ ಮನೆ ಮಾಡಿರುವುದು ಭಾಷಾ ಮಾಧ್ಯಮದ ಅನುಷ್ಠಾನಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

* ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ವಿಶ್ವ ವಿಖ್ಯಾತ ಇಂಜಿನಿಯರ್. ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿದ ಭಾರತ ರತ್ನ ಸಿ. ಎನ್. ಆರ್. ರಾವ್ ಅವರು ವಿಶ್ವ ವಿಖ್ಯಾತ ವಿಜ್ಞಾನಿ.

* ಕನ್ನಡ ಮಾಧ್ಯಮದಲ್ಲೇ ಕಲಿತ ನಾನೂ ಕೂಡಾ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ಆದಕಾರಣ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೆ ಅವಕಾಶಗಳಿಲ್ಲ, ಭವಿಷ್ಯವೇ ಇಲ್ಲ ಎಂಬ ಮಾತನ್ನು ನಾನು ಒಪ್ಪುವುದಿಲ್ಲ.

* ಇವೆಲ್ಲದರ ಬಗ್ಗೆಯೂ ಗಂಭೀರ ಚಿಂತನೆ ನಡೆಸಿರುವ ನಮ್ಮ ಸರ್ಕಾರ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಭಾಷೆಯನ್ನು ಒಂದು ವಿಷಯವನ್ನಾಗಿ ಬೋಧಿಸಲು ಐದು ಸಾವಿರ ಶಿಕ್ಷಕರಿಗೆ ದೀರ್ಘಾವಧಿ ತರಬೇತಿ ನೀಡಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ನಮ್ಮ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ.

* ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಮುಂದುವರೆಸುವುದರೊಂದಿಗೆ ನಲವತ್ತು ಲಕ್ಷಕ್ಕೂ ಹೆಚ್ಚು ಅಂಗನವಾಡಿ ಮಕ್ಕಳೂ ಸೇರಿದಂತೆ ಒಂದರಿಂದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ್ಯದ ಒಂದು ಕೋಟಿಗೂ ಹೆಚ್ಚು ಮಕ್ಕಳಿಗೆ ವಾರಕ್ಕೆ ಐದು ಬಾರಿ ಕುಡಿಯಲು ಹಾಲು ಕೊಡುವ ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದ ಮಕ್ಕಳಲ್ಲಿನ ಪೌಷ್ಠಿಕತೆ ವೃದ್ಧಿಸಿದೆ. ಹಾಜರಾತಿ ಪ್ರಮಾಣದಲ್ಲೂ ಗಣನೀಯ ಏರಿಕೆ ಉಂಟಾಗಿದೆ.

* ಒಂದರಿಂದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೂ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ಕಾಲು ಚೀಲ ಮತ್ತು ಬೂಟುಗಳನ್ನು ಒಳಗೊಂಡಂತೆ ಉಚಿತ ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಪಠ್ಯ ಪುಸ್ತಕಗಳ ವಿತರಣೆ ಮಾಡಲಾಗುತ್ತಿದೆ.

* ಆಧುನಿಕ ವಿಜ್ಞಾನವನ್ನು ನಮ್ಮ ಭಾಷೆಯಲ್ಲಿ ಕಲಿಸುವುದು ಹಾಗೂ ಕಲಿಯುವುದು ಸಾಧ್ಯ ಇಲ್ಲ ಎನ್ನುವುದು ಅವೈಜ್ಞಾನಿಕ ಅಭಿಪ್ರಾಯ. ಕನ್ನಡ ಭಾಷೆ ಬೆಳೆಯಬೇಕಾದರೆ ಬೇರೆ ಬೇರೆ ಜ್ಞಾನ ಶಿಸ್ತುಗಳಲ್ಲಿ ತೊಡಗಿಸಿಕೊಂಡ ಪಂಡಿತರು, ವಿದ್ವಾಂಸರು ಕನ್ನಡ ಭಾಷೆಯ ಬಗ್ಗೆ ಇಚ್ಚಾಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಜ್ಞಾನಕ್ಷೇತ್ರಕ್ಕೆ ಸಂಬಂಧಿಸಿದ ಹೊರ ಪರಿಭಾಷೆಯನ್ನು ಕಂಡು ಕೊಳ್ಳಬೇಕು ಕನ್ನಡದ ಜ್ಞಾನ ಸಂಪತ್ತು, ಕನ್ನಡ ಶಬ್ದ ಸಂಪತ್ತು ಮತ್ತಷ್ಟು ಬೆಳೆಯಬೇಕು.

* ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿರುವ ಅನೇಕ ವೈದ್ಯರು ಕನ್ನಡದಲ್ಲಿ ಬರೆಯುತ್ತಿದ್ದಾರೆ. ಆದರೆ ತಂತ್ರಜ್ಞರು, ಎಂಜಿನಿಯರ್‍ಗಳು, ವಕೀಲರು ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಕನ್ನಡದಲ್ಲಿ ತಂತ್ರಜ್ಞಾನವನ್ನು ಹೇಳಲಿಕ್ಕೆ ಬರುವುದಿಲ್ಲ ಎನ್ನುವ ಪೂರ್ವ ನಿರ್ಧರಿತ ಅಭಿಪ್ರಾಯದಿಂದ ಅವರು ಹೊರಬರಬೇಕು.

* ಇಲ್ಲಿಯ ವರೆಗಿನ ಕನ್ನಡದ ಅಭಿವೃದ್ಧಿ ಎದುರಿಸಿದ ತೊಡಕುಗಳು, ಮುಂದಿರುವ ಸವಾಲುಗಳು ಹಾಗೂ ಮುಂದೆ ಆಗಬೇಕಾಗಿರುವ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾದ ಮತ್ತು ಜನಪರವಾದ ಭಾಷಾ ನೀತಿಯೊಂದನ್ನು ರೂಪಿಸುವ ಅಗತ್ಯ ಇದೆ. ಆದ್ದರಿಂದ ಬದಲಾಗುತ್ತಿರುವ ಕಾಲಮಾನ ಹಾಗೂ ಬದಲಾಗುತ್ತಿರುವ ಅಗತ್ಯಗಳನ್ನು ನೆನಪಲ್ಲಿಟ್ಟು ಕೊಂಡು ಈ ನೀತಿಯನ್ನು ರೂಪಿಸಬೇಕಾಗುತ್ತದೆ.

* ರಾಜ್ಯ ಸರ್ಕಾರ ತನ್ನ ಆಡಳಿತದಲ್ಲಿ ಕನ್ನಡವನ್ನು ಬಳಸುವುದಕ್ಕೆ ಬದ್ಧವಾಗಿದೆ. ಮಂತ್ರಿಮಂಡಲದ ನಿರ್ಣಯಗಳು, ಮಂತ್ರಿಗಳ ಟಿಪ್ಪಣಿಗಳು, ವಿಧಾನ ಸಭೆಯ ಮುಂದೆ ಬರುವ ವಿಧೇಯಕಗಳು ಕನ್ನಡದಲ್ಲೇ ಇದ್ದುಬಿಟ್ಟರೆ ಕನ್ನಡ ಅನಿವಾರ್ಯವಾಗಿ ಆಡಳಿತದಲ್ಲಿ ನೆಲೆಗೊಳ್ಳುವಂತಾಗುತ್ತದೆ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ.

* ಕನ್ನಡವನ್ನು ಉಳಿಸಿ ಬೆಳೆಸುವುದು ಚುನಾಯಿತ ಸರ್ಕಾರದ ಕರ್ತವ್ಯ ಎನ್ನುವುದನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಆದರೆ, ಇದು ಸಾಧ್ಯವಾಗಬೇಕಾದರೆ ಕನ್ನಡಿಗರಾದ ತಮ್ಮೆಲ್ಲರ ಸಹಕಾರ ಅಗತ್ಯ. ಭಾಷೆ ಬೆಳೆಯಬೇಕಾದರೆ ಅದನ್ನು ಬಳಸಬೇಕಾಗುತ್ತದೆ.

* ಕನ್ನಡಿಗರೆಲ್ಲರೂ ದಿನನಿತ್ಯದ ವ್ಯವಹಾರದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುತ್ತೇವೆ ಎಂದು ಸಂಕಲ್ಪ ಮಾಡಿದರೆ ಕನ್ನಡದ ಸ್ಥಾನಮಾನ ಅಜರಾಮರವಾಗಿ ಉಳಿಯಲಿದೆ. ಆ ಸಂಕಲ್ಪವನ್ನು ತಾವು ಮಾಡುತ್ತೀರಿ ಎಂಬ ನಂಬಿಕೆ ಮತ್ತು ವಿಶ್ವಾಸ ನನ್ನಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+