ಇನ್ಮುಂದೆ ರಾಜ್ಯದಲ್ಲಿ ನಡೆಯೋದು ರಾಜಕಾರಣಿಗಳ ಜಾತ್ರೆ!
ಬೆಂಗಳೂರು, ಅಕ್ಟೋಬರ್ 09; ಇದುವರೆಗೆ ದಸರಾ ಸಂಭ್ರಮದಲ್ಲಿ ಮಿಂದೆದ್ದು, ಆನೆಗಳ ಮೆರವಣಿಗೆ ನೋಡಿದವರು ಇನ್ನು ಮುಂದೆ ರಾಜಕಾರಣಿಗಳ ಜಾತ್ರೆಯನ್ನು ನೋಡಬೇಕಾದ ಅನಿವಾರ್ಯತೆ ಬಂದೊದಗಿದೆ. ಕಾರಣ ಇನ್ನು ಆರು ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
ನಿಜ ಹೇಳಬೇಕೆಂದರೆ ರಾಜಕಾರಣಿಗಳಿಗೆ ಚುನಾವಣೆಗೆ ತಯಾರಿ ನಡೆಸಲು ಮುಂದೆ ಇರುವ ದಿನಗಳು ಏನೇನು ಸಾಲದಾಗಿದೆ. ಏಕೆಂದರೆ ಇದುವರೆಗೆ ತಮ್ಮ ಕ್ಷೇತ್ರವನ್ನೇ ಮರೆತು ಹೊದ್ದು ಮಲಗಿದವರೆಲ್ಲರೂ ಚುನಾವಣೆ ಹತ್ತಿರವಾಗುತ್ತಿರುವುದು ಅರಿವಾಗುತ್ತಿದ್ದಂತೆಯೇ ಮೈಕೊಡವಿಕೊಂಡು ಎದ್ದು ಕುಳಿತಿದ್ದಾರೆ. ಜತೆಗೆ ಮುಂದಿನ ಚುನಾವಣೆಗೆ ಮತ್ತೆ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಂಡು ಚುನಾವಣೆಯಲ್ಲಿ ಗೆಲ್ಲುವುದರತ್ತ ದೃಷ್ಟಿ ನೆಟ್ಟಿದ್ದಾರೆ.
ಹೀಗಾಗಿಯೇ ಹೆಚ್ಚಿನ ನಾಯಕರಿಗೆ ತಮ್ಮ ಕ್ಷೇತ್ರದ, ರಾಜ್ಯದ ಜನರ ಬಗ್ಗೆ ಕಳಕಳಿ ಬಂದಂತೆ ಕಾಣಿಸುತ್ತಿದೆ. ಮುಂದಿನ ದಿನಗಳಲ್ಲಿ ಅವರೆಲ್ಲರ ಉದ್ದೇಶಗಳು ಮತಸೆಳೆಯುವುದೇ ಆಗಿರುವುದರಿಂದ ಅದು ನಾಟಕೀಯವಾಗಿಯೂ, ಓಲೈಕೆಯ ಪ್ರತಿರೂಪವಾಗಿ, ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುವ ಕಿಡಿನುಡಿಯಾಗಿ ಅವರ ವರ್ತನೆ, ಮಾತುಗಳು ಕೇಳಿ ಬಂದರೂ ಅಚ್ಚರಿ ಪಡಬೇಕಾಗಿಲ್ಲ.

ಮತಪಡೆಯುವುದಷ್ಟೇ ಮೂಲ ಉದ್ದೇಶ
ರಾಜಕಾರಣದಲ್ಲಿ ಮತಪಡೆಯುವುದಷ್ಟೇ ಮೂಲ ಉದ್ದೇಶವಾಗಿರುವುದರಿಂದ ಅದನ್ನು ಪಡೆಯುವುದು ಹೇಗೆ ಎಂಬ ಬಗ್ಗೆ ನಾಯಕರು ಚಿಂತೆಗೆ ಬಿದ್ದಿದ್ದಾರೆ. ಉತ್ತಮ ಆಡಳಿತ, ಪ್ರಾಮಾಣಿಕ, ಜನನಾಯಕ ಎಂಬ ಕಾರಣದಿಂದ ಮತ ಪಡೆಯುವ ಜನನಾಯಕರ ಸಂಖ್ಯೆ ತೀರಾ ಕಡಿಮೆಯಿರುವುದರಿಂದ ತಾವು ಶಾಸಕರಾಗಿ ಆಯ್ಕೆಯಾದ ಬಳಿಕ ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ಅಭಿವೃದ್ಧಿ ಕಾರ್ಯಗಳು ಮಾಡದ ಕಾರಣ ತಮ್ಮ ಸಾಧನೆಯನ್ನು ತೋರಿಸಿ ಮತಪಡೆಯುವುದು ಬಹಳಷ್ಟು ಶಾಸಕರಿಗೆ ಸಾಧ್ಯವಾಗದ ಮಾತಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಜನರಿಂದ ಮತಪಡೆಯಲು ಯಾವ ತಂತ್ರ ಮಾಡಬೇಕು ಎಂಬುದರ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸದಿಂದ ನನಗೆ ಜನರು ಮತನೀಡುತ್ತಾರೆ ಎಂಬ ನಂಬಿಕೆ ಕಳೆದುಕೊಂಡವರು ಅದರಾಚೆಗೆ ಮತಪಡೆಯಲು ಏನೇನು ತಂತ್ರ ಮಾಡಬಹುದು ಎಂಬುದರ ಬಗ್ಗೆ ಲೆಕ್ಕಾಚಾರಗಳನ್ನು ಮಾಡುತ್ತಿದ್ದಾರೆ.

ರಾಜಕೀಯ ನಾಯಕರಿಂದ ಶಕ್ತಿ ಪ್ರದರ್ಶನ
ಇದೆಲ್ಲದರ ನಡುವೆ ಪಕ್ಷಗಳು ವಿವಿಧ ಬಗೆಯ ಮೆರವಣಿಗೆ, ಯಾತ್ರೆ, ಪ್ರಚಾರ ಸಮಾವೇಶವನ್ನು ಹಮ್ಮಿಕೊಳ್ಳುವ ಮೂಲಕ ಶಕ್ತಿ ಪ್ರದರ್ಶನಕ್ಕಿಳಿಯಲಿವೆ. ಆಯಾಯ ಸಮುದಾಯದ ನಾಯಕರು ತಮ್ಮ ಸಮುದಾಯವನ್ನು ಒಟ್ಟುಗೂಡಿಸಿ ತಮ್ಮ ಸಾಮರ್ಥ‍್ಯವೇನು ಎಂಬುದನ್ನು ತೋರಿಸುವ ಕಾರ್ಯಕ್ಕೆ ಮುಂದಾಗಲಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಹಳ್ಳಿಗಳಿಂದ ಆರಂಭವಾಗಿ ನಗರಗಳ ತನಕ ಸಭೆ, ಸಮಾವೇಶ, ಮೆರವಣಿಗೆ ನಡೆಯಲಿದ್ದು, ಅದರ ಬಿಸಿ ಜನಸಾಮಾನ್ಯರ ಮೇಲೆ ತಟ್ಟುವುದಂತು ಖಚಿತ.
ಇವತ್ತಿನ ಪರಿಸ್ಥಿತಿಯಲ್ಲಿ ಚುನಾವಣೆ ಹತ್ತಿರವಿರುವಾಗಲೇ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ಹಲವು ರೀತಿಯ ಮುಜುಗರಗಳನ್ನು ಎದುರಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಅದರಿಂದ ಹೊರಗೆ ಬರುವುದು ಈಗ ಸವಾಲಾಗಿದೆ. ಸಾಮಾನ್ಯವಾಗಿ ಆಡಳಿತ ಪಕ್ಷ ಜನಸ್ನೇಹಿ ಆಗಿದ್ದರೆ ಮತ್ತು ಅದು ಮಾಡಿದ ಅಭಿವೃದ್ಧಿ ಕಾರ್ಯಗಳು ಕಟ್ಟಕಡೆಯ ವ್ಯಕ್ತಿಗೆ ತಲುಪಿದೆ ಎನ್ನುವುದಾದರೆ ಅದರ ಬಗ್ಗೆ ಸಮಾವೇಶ ನಡೆಸಿ ಜನತೆಗೆ ಹೇಳಬೇಕಾದ ಅಗತ್ಯತೆ ಇರುವುದಿಲ್ಲ.

ಕೈ ಬತ್ತಳಿಕೆಯಲ್ಲಿ ಚುನಾವಣಾ ಅಸ್ತ್ರ
ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಸರ್ಕಾರ ಮಾಡಿರುವ ಕಾರ್ಯಗಳನ್ನು ಕೋಟ್ಯಂತರ ರೂ. ಖರ್ಚು ಮಾಡಿ ಕಾರ್ಯಕ್ರಮ ಆಯೋಜಿಸಿ ಆ ವೇದಿಕೆಯಲ್ಲಿ ಹೇಳಬೇಕಾದ ಅನಿವಾರ್ಯತೆ ಬಂದಿರುವುದು ದುರಂತವೇ ಸರಿ. ತಮ್ಮ ಆಡಳಿತಾವಧಿಯ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆಯನ್ನು ಗೆಲ್ಲುವ ವಿಶ್ವಾಸ ಆಡಳಿತ ಪಕ್ಷವಾದ ಬಿಜೆಪಿಯಲ್ಲಿ ಇಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಜನರಲ್ಲಿ ನಿರೀಕ್ಷೆಗಳು ಉಳಿದಿಲ್ಲ
ವಿರೋಧ ಪಕ್ಷ ಕಾಂಗ್ರೆಸ್ ಆರೋಪಿಸುತ್ತಿರುವ 40 ಪರ್ಸೆಂಟ್ ಕಮೀಷನ್ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಆ ವಿಚಾರ ಮುಂದಿನ ಚುನಾವಣೆವರೆಗೂ ಕಾಂಗ್ರೆಸ್ ಬತ್ತಳಿಕೆಯಲ್ಲಿ ಚುನಾವಣಾ ಅಸ್ತ್ರವಾಗಿ ಉಳಿಯುವುದಂತು ಖಚಿತ. ಜತೆಗೆ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಜನರಲ್ಲಿದ್ದ ನಿರೀಕ್ಷೆ ಹುಸಿಯಾಗಿದೆ. ಅಲ್ಲದೇ ರಾಜ್ಯದಲ್ಲಿ ಎಲ್ಲ ಪಕ್ಷಗಳ ಆಡಳಿತವನ್ನು ನೋಡಿದ ಜನರಲ್ಲಿ ನಿರೀಕ್ಷೆಗಳಂತು ಇಲ್ಲ ನಿರಾಸೆಯಷ್ಟೆ ಉಳಿದಿದೆ.












Click it and Unblock the Notifications