ಶಾಸಕರ ರಾಜೀನಾಮೆ ಅಂಗೀಕಾರ ವಿಳಂಬ, ಸುಪ್ರೀಂನಲ್ಲಿ ವಿಚಾರಣೆ
Recommended Video
ನವದೆಹಲಿ, ಜುಲೈ 11: ಕರ್ನಾಟಕದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಅಸ್ತಿತ್ವ ಹಾಗೂ ಬಿಜೆಪಿಯ ಹೊಸ ಸರ್ಕಾರ ಉದಯಕ್ಕೆ ನಿರ್ಣಾಯಕವಾಗಬಲ್ಲ ನಿರ್ಣಯವನ್ನು ತೆಗೆದುಕೊಂಡಿರುವ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ರೆಬೆಲ್ ಶಾಸಕರು ಸುಪ್ರೀಂಕೋರ್ಟಿನಲ್ಲಿ ದೂರು ಸಲ್ಲಿಸಿದ್ದಾರೆ. ರಾಜೀನಾಮೆ ಅಂಗೀಕಾರ ಮಾಡದೆ ವಿಳಂಬ ಮಾಡುತ್ತಿರುವ ಸ್ಪೀಕರ್ ವಿರುದ್ಧ ಸಲ್ಲಿಸಿರುವ ಅರ್ಜಿಯ ವಿಚಾರಣೆ ಜುಲೈ 11ರಂದು ಬೆಳಗ್ಗೆ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ.
13 ಶಾಸಕರ ರಾಜೀನಾಮೆಯನ್ನು ಪರಿಶೀಲಿಸಿದ್ದು, ಈ ಪೈಕಿ 8 ಶಾಸಕರದ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂದು ರಮೇಶ್ ಕುಮಾರ್ ಅವರು ಹೇಳಿರುವುದು ಭಿನ್ನಮತೀಯ ಶಾಸಕರಿಗೆ ಅಸಮಾಧಾನ ಉಂಟು ಮಾಡಿದೆ.
ಕ್ರಮಬದ್ಧವಾದ ರಾಜೀನಾಮೆಗಳನ್ನು ಕೂಡಾ ಸ್ಪೀಕರ್ ರಮೇಶ್ ಕುಮಾರ್ ಅವರು ಅಂಗೀಕರಿಸಿಲ್ಲ, ಉಳಿದ ರಾಜೀನಾಮೆಗಳನ್ನು ತಿರಸ್ಕರಿಸಲು ಸೂಕ್ತ ಕಾರಣ ಕೂಡಾ ನೀಡದೆ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಆರೋಪಿಸಿ ರಮೇಶ್ ಕುಮಾರ್ ವಿರುದ್ಧ ಅತೃಪ್ತ ಶಾಸಕರು, ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ಗುರುವಾರ(ಜುಲೈ 11) ದಂದು ಸಿಜೆಐ ರಂಜನ್ ಗೊಗಾಯ್ ಅವರಿರುವ ನ್ಯಾಯಪೀಠದ ಮುಂದೆ ಅರ್ಜಿ ವಿಚಾರಣೆಗೆ ಬರಲಿದೆ. ಅತೃಪ್ತರ ಪರ ಮುಕುಲ್ ರೋಹ್ಟಗಿ ಅವರು ವಾದಿಸಲಿದ್ದಾರೆ.

ರಾಜೀನಾಮೆ ಪತ್ರ ಪರಿಶೀಲಿಸಿದ ನಂತರ ವಿಧಾನಸೌದದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್, ಐವರು ಶಾಸಕರ ರಾಜೀನಾಮೆ ಕ್ರಮಬದ್ಧವಾಗಿವೆ, 13 ಜನ ಶಾಸಕರು ನನ್ನ ಕಚೇರಿ ಕಾರ್ಯದರ್ಶಿಗೆ ರಾಜೀನಾಮೆ ಕೊಟ್ಟಿದ್ದಾರೆ. ನಾನು ಕಚೇರಿಯಿಂದ ಮನೆಗೆ ತೆರಳಿದ ಬಳಿಕ ಶಾಸಕರು ಬಂದಿದ್ದಾರೆ. ಸೋಮವಾರದಂದು ನಾನು ಕಚೇರಿಗೆ ಬಂದಿರಲಿಲ್ಲ ಎಂದು ಹೇಳಿದರು.
ಯಾರ ರಾಜೀನಾಮೆ ಕ್ರಮಬದ್ಧವಾಗಿಲ್ಲ: ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್, ನಾರಾಯಣ ಗೌಡ, ರಾಮಲಿಂಗಾರೆಡ್ಡಿ, ಗೋಪಾಲಯ್ಯ ಅವರ ರಾಜೀನಾಮೆ ಪತ್ರ ಕ್ರಮಬದ್ಧವಾಗಿದ್ದು, ಉಳಿದ 8 ಜನ ಶಾಸಕರ ರಾಜೀನಾಮೆ ರೂಲ್ಸ್ 202ರ ಪ್ರಕಾರ ಕ್ರಮಬದ್ಧವಾಗಿಲ್ಲ.ಸಂವಿಧಾನ ಬದ್ಧವಾಗಿ ನಾನು ಕಾನೂನು ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳುತ್ತಿದ್ದೇನೆ. ಈ ಬಗ್ಗೆ ರಾಜ್ಯಪಾಲರಿಗೆ ಪತ್ರದ ಮೂಲಕ ತಿಳಿಸುತ್ತೇನೆ ಎಂದು ರಮೇಶ್ ಕುಮಾರ್ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications