ಕ್ಷೇಮವಾಗಿ ಸಿಂಗಪುರ ತಲುಪಿದ ನಟ ಅಂಬರೀಷ್
ಬೆಂಗಳೂರು, ಮಾ.1:ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಟ ಅಂಬರೀಷ್ ಅವರು ಇದೀಗತಾನೆ ಕ್ಷೇಮವಾಗಿ ಸಿಂಗಪುರ ತಲುಪಿದ್ದಾರೆ. ನಟ ಅಂಬರೀಷ್ ಅವರು ಕನಿಷ್ಠ 2 ವಾರ ಕಾಲ ಇಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಬೆಳಗಿನ ಸುದ್ದಿ: ನಟ ರಜನಿಕಾಂತ್ ಅವರ ಖಡಕ್ ಸಲಹೆಯ ಮೇರೆಗೆ ಸಚಿವ ಅಂಬರೀಷ್ ಅವರು ಹೆಚ್ಚಿನ ಚಿಕಿತ್ಸೆಗಾಗಿ ಇಂದು ಬೆಳಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ತಮ್ಮ ಪರಿವಾರದ ಸಮೇತ ಸಿಂಗಪುರಕ್ಕೆ ತೆರಳಿದರು.

ಹಿರಿಯ ನಟ ಅಂಬರೀಷ್ (61) ಅವರ ಜತೆಗೆ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಹಾಗೂ ವಿಕ್ರಂ ಆಸ್ಪತ್ರೆಯ ಇಬ್ಬರು ವೈದ್ಯರ ತಂಡ ಇಂದು ಬೆಳಗಿನ ಜಾವ ವಿಶೇಷ ವಿಮಾನದಲ್ಲಿ ಸಿಂಗಪುರದ ಮೌಂಟ್ ಎಲಿಜಬತ್ ಆಸ್ಪತ್ರೆಗೆ ರವಾನೆಯಾಗಿದ್ದಾರೆ. ಭಾರತೀಯ ಕಾಲಮಾನ ಇಂದು ಬೆಳಗ್ಗೆ 10.00ಕ್ಕೆ ಸಿಂಗಪುರ ತಲುಪಲಿದ್ದಾರೆ, ಅಂದರೆ ಸಿಂಗಪುರದಲ್ಲಿ ಸ್ಥಳೀಯ ಕಾಲಮಾನ ಬೆಳಗ್ಗೆ 11.30 ಗಂಟೆಗೆ ತಲುಪಲಿದ್ದಾರೆ.
ವಿಮಾನವೇರುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ನಟಿ ಸುಮಲತಾ ಅವರು ಅಂಬಿಯ ಅಭಿಮಾನಿಗಳ ಹಾರೈಕೆ, ಅವರು ಸಲ್ಲಿಸುತ್ತಿರುವ ಪೂಜೆ ಪುನಸ್ಕಾರದಿಂದಾಗಿ ಅವರು ಗುಣಮುಖರಾಗಿ ವಾಪಸ್ ಬರುತ್ತಾರೆ ಎಂಬ ಅಚಲ ನಂಬಿಕೆಯಿಂದ ತಾವು ಸಿಂಗಪುರಕ್ಕೆ ಅಂಬಿಯನ್ನು ಕರೆದೊಯ್ಯುತ್ತಿರುವಾಗಿ ಹೇಳಿದರು. ಇದೇ ವೇಳೆ ಸುಳ್ಳು ವದಂತಿಗಳಿಗೆ ಆಸ್ಪದ ಕೊಡದೆ, ಶಾಂತಿಯಿಂದ ಇರಬೇಕು ಎಂದು ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದರು.
ಎಷ್ಟೇ ದಿನವಾದರೂ ಪರವಾಗಿಲ್ಲ ಸಂಪೂರ್ಣ ಚೇತರಿಸಿಕೊಂಡ ಮೇಲಷ್ಟೇ ಅಂಬಿಯನ್ನು ವಾಪಸ್ ಕರೆದುಕೊಂಡು ಬರುವುದಾಗಿಯೂ ಸುಮಲತಾ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಕನ್ನಡಿಗರ ಅಚ್ಚುಮೆಚ್ಚಿನ ನಟ, ಮಂಡ್ಯದ ಗಂಡು ಕ್ಷೇಮವಾಗಿ ಹಿಂದಿರುಗಲಿ ಎಂಬುದು ನಮ್ಮ-ನಿಮ್ಮೆಲ್ಲರ ಹಾರೈಕೆ.













Click it and Unblock the Notifications