BK Hariprasad: ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ಬಿಕೆ ಹರಿಪ್ರಸಾದ್ ಅವರಿಗೆ ಎಐಸಿಸಿ ನೋಟಿಸ್
ಕರ್ನಾಟಕ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಆಗಾಗ್ಗೆ ನಾಯಕರ ಮಾತುಗಳ ಮೂಲಕ ಜಗಜ್ಜಾಹೀರಾಗುತ್ತಿದೆ. ಹಲವು ಕಾಂಗ್ರೆಸ್ ನಾಯಕರು ಕೆಲವು ಬಾರಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ, ಎಂಎಲ್‌ಸಿ ಬಿಕೆ ಹರಿಪ್ರಸಾದ್ ಅವರು ಹಲವು ಬಾರಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಅವರು ನಂತರ ಸಚಿವ ಸ್ಥಾನ ಪಡೆಯಲು ವಿಫಲವಾಗಿದ್ದರು, ಅಂದಿನಿಂದ ಕೂಡ ಹಲವು ನಾಯಕರ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ಕೊಟುತ್ತಿದ್ದಾರೆ.

ಕಳೆದ ಶನಿವಾರ ಸಿದ್ದರಾಮಯ್ಯ ವಿರುದ್ಧ ಬಿಕೆ ಹರಿಪ್ರಸಾದ್ ಪರೋಕ್ಷವಾಗಿ ಟೀಕೆ ಮಾಡಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಎಐಸಿಸಿ ಶಿಸ್ತು ಸಮಿತಿ ಬಿಕೆ ಹರಿಪ್ರಸಾದ್ ಅವರಿಗೆ ಶೋಕಾಶ್ ನೋಟಿಸ್ ಜಾರಿ ಮಾಡಿದ್ದು, 10 ದಿನಗಳ ಒಳಗಾಗಿ ಉತ್ತರ ಕೊಡುವಂತೆ ಸೂಚಿಸಿದೆ.
ಪರೋಕ್ಷವಾಗಿ ಟೀಕಿಸಿದ್ದ ಹರಿಪ್ರಸಾದ್
ಹಲವು ದಿನಗಳಿಂದ ಬಿಕೆ ಹರಿಪ್ರಸಾದ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡುತ್ತಿದ್ದಾರೆ. ಶನಿವಾರ ಕೂಡ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, "ಹಿಂದಿನ ಯಾವ ಸಿಎಂಗಳೂ ಕೂಡ ಜಾತಿ ರಾಜಕಾರಣ ಮಾಡಲಿಲ್ಲ. ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಜಾತಿ ರಾಜಕಾರಣ ಮಾಡಲಿಲ್ಲ. ಈಗ ಪಂಚೆ ಹಾಕಿಕೊಂಡು ದುಬಾರಿ ವಾಚ್ ಕಟ್ಟಿಕೊಂಡು, ಖಾಕಿ ಚಡ್ಡಿ ಹಾಕಿ ಸಮಾಜವಾದಿ ಎಂದರೆ ಆಗಲ್ಲ" ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.
ನಾನು ಮೂರು ಬಾರಿ ಚುನಾವಣೆಯಲ್ಲಿ ಸೋತಿರಬಹುದು ಆದರೆ ಇನ್ನೂ ಸತ್ತಿಲ್ಲ, ಸೈಟನ್ನು ಕಳ್ಳತನದಲ್ಲಿ ಮಾರುವವರು ನನ್ನ ಬಗ್ಗೆ ಮಾತನಾಡುತ್ತಾರೆ. ಸ್ವಾಭಿಮಾನ ಬಿಟ್ಟು ಸಹನೆ ಕಳೆದುಕೊಂಡಿಲ್ಲ. ದೇವರಾಜ ಅರಸು ಅವರ ಕಾರಿನಲ್ಲಿ ಕೂತ ಮಾತ್ರಕ್ಕೆ ಅರಸು ಆಗಲ್ಲ, ಅವರ ಚಿಂತನೆ ಹೊಂದಿರಬೇಕು ಎಂದಿದ್ದರು.
ನಾನು ಸಿಎಂ ಆಗುತ್ತೇನೆ ಎಂದು ಯಾರೂ ಕೂಡ ಕನಸು ಕಾಣಬೇಡಿ. ಈಡಿಗ, ಬಿಲ್ಲವ, ನಾಮಧಾರಿ ಸಮುದಾಯದವರು ಕರ್ನಾಟದಲ್ಲಿ ಮಾತ್ರವಲ್ಲ ಎಲ್ಲಾ ರಾಜ್ಯದಲ್ಲಿ ಇದ್ದಾರೆ. ದೇವರಾಜ ಅರಸು ಅವರನ್ನು ಹೊಗಳುವ ನಾವು ಅವರ ಮೊಮ್ಮಗನಿಗೆ ಯಾವ ಅಧಿಕಾರ ಕೂಡ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಸದ್ಯ ಬಿಕೆ ಹರಿಪ್ರಸಾದ್ ಅವರಿಗೆ ನೋಟಿಸ್ ನೀಡುವ ಮೂಲಕ ಕಾಂಗ್ರೆಸ್ ರಾಜ್ಯ ರಾಜಕಾರಣದಲ್ಲಿ ಇರುವ ಅಸಮಾಧಾನವನ್ನು ಹತ್ತಿಕ್ಕಲು ಮುಂದಾಗಿದೆ. ಇದಕ್ಕೆ ಬಿಕೆ ಹರಿಪ್ರಸಾದ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications