ಅಂಚೆ ಕಛೇರಿಯಲ್ಲಿ ಖಾತೆ ತೆರೆಯಲು ಮಹಿಳೆಯರ ನೂಕು ನುಗ್ಗಲು!
ಬೆಂಗಳೂರು, ಮೇ 29: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಅಂಚೆ ಕಛೇರಿಯಲ್ಲಿ ಖಾತೆ ತೆರೆಯಲು ಮಹಿಳೆಯರು ಸಾಲುಗಟ್ಟಿ ನಿಂತಿದ್ದಾರೆ. ನೂರಾರು ಜನರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಖಾತೆಯನ್ನು ತೆರೆಯುತ್ತಿದ್ದಾರೆ.
ರಾಜಕೀಯ ಪಕ್ಷವೊಂದು ಚುನಾವಣಾ ಸಂದರ್ಭದಲ್ಲಿ ನೀಡಿದ ಅಶ್ವಾಸನೆಯಂತೆ ಜೂನ್ ತಿಂಗಳಿನಿಂದ ಅಂಚೆ ಇಲಾಖೆಯ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ. ಬರುತ್ತದೆ ಎಂದು ನಂಬಿಕೊಂಡು ಮಹಿಳೆಯರು ಖಾತೆಯನ್ನು ಆರಂಭಿಸುತ್ತಿದ್ದಾರೆ.

ಬೆಂಗಳೂರಿನ ಪ್ರಧಾನ ಅಂಚೆ ಕಛೇರಿಯಲ್ಲಿ ಎರಡು ದಿನಗಳಿಂದ ಮುಂಜಾನೆಯೇ ಮಹಿಳೆಯರು ಖಾತೆ ತೆರೆಯಲು ಆಗಮಿಸುತ್ತಿದ್ದಾರೆ. ನೂರಾರು ಮಹಿಳೆಯರು ಆಗಮಿಸುತ್ತಿದ್ದು, ಅವರನ್ನು ನಿಯಂತ್ರಣ ಮಾಡಲು ಸಿಬ್ಬಂದಿಗಳು ಟೋಕನ್ ವ್ಯವಸ್ಥೆ ಜಾರಿಗೊಳಿಸಿದ್ದಾರೆ.
700 ಮಹಿಳೆಯರ ಭೇಟಿ: ರಾಜಭವನದ ಸಮೀಪ ಇರುವ ಅಂಚೆ ಕಛೇರಿಗೆ ಪ್ರತಿದಿನ ಐಪಿಪಿಬಿ ಖಾತೆ ಸುಮಾರು 50-60 ಜನರು ಆಗಮಿಸುತ್ತಿದ್ದರು. ಆದರೆ ಲೋಕಸಭೆ ಚುನಾವಣೆ ಮುಗಿದ ಬಳಿಕ ಪ್ರತಿದಿನ 700 ಜನರು ಖಾತೆಯನ್ನು ತೆರೆಯುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ಮತದಾನ ಮುಗಿದ ಬಳಿಕ ಮಹಿಳೆಯರು ಐಪಿಪಿಬಿ ಖಾತೆ ತೆರೆಯುತ್ತಿದ್ದು, ಅವರನ್ನು ನಿಯಂತ್ರಣ ಮಾಡುವುದು ಸಿಬ್ಬಂದಿಗೆ ಸವಾಲಾಗಿದೆ. ಆದ್ದರಿಂದ ಟೋಕನ್ ವ್ಯವಸ್ಥೆ ಜಾರಿಗೊಳಿಸಿದ್ದೇವೆ ಎಂದು ಸಿಬ್ಬಂದಿ ಹೇಳಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಐಪಿಪಿಬಿ ಖಾತೆಯನ್ನು ತೆರೆಯಿರಿ. ಜೂನ್ ತಿಂಗಳಿನಿಂದ ಪ್ರತಿ ತಿಂಗಳು 2 ಸಾವಿರ ರೂ. ಹಣ ಖಾತೆಗೆ ಜಮಾ ಆಗುತ್ತದೆ ಎಂದು ಕೆಲವು ಅಭ್ಯರ್ಥಿಗಳು, ಅವರ ಬೆಂಬಲಿಗರು ಹೇಳಿದ್ದಾರೆ. ಇದರಿಂದಾಗಿ ಖಾತೆ ತೆರೆಯಲು ಮಹಿಳೆಯರು ಮುಗಿ ಬಿದ್ದಿದ್ದಾರೆ.
ಮಹಿಳೆಯರು ತಮ್ಮ ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡಿ ಐಪಿಪಿಬಿ ಖಾತೆಯನ್ನು ತೆರೆಯಬಹುದು. ಅದಕ್ಕಾಗಿ ಬೆಂಗಳೂರಿನ ಪ್ರಧಾನ ಅಂಚೆ ಕಛೇರಿಗೆ ಆಗಮಿಸಬೇಕಿಲ್ಲ ಎಂದು ಸಿಬ್ಬಂದಿಗಳು ತಿಳಿಸುತ್ತಿದ್ದಾರೆ. ಕಛೇರಿ ಹೊರಗೆ ಸಾಲುಗಟ್ಟಿ ನಿಂತ ಮಹಿಳೆಯರನ್ನು ನಿಯಂತ್ರಣ ಮಾಡಲು ಪೊಲೀಸರ ಸಹಾಯವನ್ನು ಸಹ ಕೇಳಲಾಗಿದೆ.
ದಿನಕ್ಕೆ 500ಕ್ಕೂ ಅಧಿಕ ಐಪಿಪಿಬಿ ಖಾತೆಗಳನ್ನು ತೆರಯುತ್ತಿರುವುದರಿಂದ ಬೆಂಗಳೂರಿನ ಪ್ರಧಾನ ಅಂಚೆ ಕಛೇರಿಯಲ್ಲಿ 7 ಜನ ಸಿಬ್ಬಂದಿಗಳನ್ನು ಇದಕ್ಕಾಗಿಯೇ ನಿಯೋಜನೆ ಮಾಡಲಾಗಿದೆ. ಕಛೇರಿ ಅವಧಿ ಮುಗಿದ ಬಳಿಕವೂ ಕೆಲವು ಗಂಟೆಗಳ ಕಾಲ ಸಿಬ್ಬಂದಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು ನಗರದಲ್ಲಿರುವ ಎಲ್ಲಾ ಅಂಚೆ ಕಛೇರಿಗಳಲ್ಲೂ ಜನರು ಐಪಿಪಿಬಿ ಖಾತೆಗಳನ್ನು ತೆರೆಯುವ ಸೌಲಭ್ಯವಿದೆ. ಆದರೆ ಮಹಿಳೆಯರು ಏಕೆ ಪ್ರಧಾನ ಅಂಚೆ ಕಛೇರಿಗೆ ಆಗಮಿಸುತ್ತಿದ್ದಾರೆ? ಎಂಬುದು ತಿಳಿಯುತ್ತಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.
ಜನರು ಬಯಸಿದರೆ ಐಪಿಪಿಬಿ ಖಾತೆಗಳನ್ನು ತೆರೆಯುವುದು ನಮ್ಮ ಕೆಲಸ. ನಾವು ಖಾತೆ ತೆರೆಯಲು ನಿರಾಕರಿಸುತ್ತಿಲ್ಲ. ಆದರೆ ಇದಕ್ಕಾಗಿ ಪ್ರಧಾನ ಅಂಚೆ ಕಛೇರಿಗೆ ಆಗಮಿಸಬೇಕಿಲ್ಲ ಎಂದು ಸಿಬ್ಬಂದಿ ಮನವಿ ಮಾಡಿದ್ದಾರೆ.
ಐಪಿಪಿಬಿ ಖಾತೆ ತೆರೆಯಲು ಕ್ಯೂ ನಿಂತಿದ್ದ ಟ್ಯಾನರಿ ರಸ್ತೆಯ ನಿವಾಸಿ ಪುಷ್ಪಾ, ನಮಗೆ ಪ್ರಧಾನ ಅಂಚೆ ಕಛೇರಿಗೆ ಹೋಗಿ ಖಾತೆ ತೆರೆಯಿರಿ ಎಂದು ಹೇಳಿದ್ದಾರೆ. ಆದ್ದರಿಂದ ಆಗಮಿಸಿದ್ದೇವೆ. ಬೆಳಗ್ಗೆಯಿಂದ ನಿಂತಿದ್ದೇವೆ, ಸಿಬ್ಬಂದಿ ಯಾವಾಗ ಪ್ರಕ್ರಿಯೆ ಮುಗಿಸುತ್ತಾರೆಯೋ ತಿಳಿದಿಲ್ಲ ಎಂದರು.












Click it and Unblock the Notifications