ಲಕ್ಷ್ಮಣ್ ಸವದಿ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಬಿಜೆಪಿಗರ ಸಭೆ ಕರೆದ ಧಮೇಂದ್ರ ಪ್ರಧಾನ್: ಹೈವೋಲ್ಟೇಜ್ ಚರ್ಚೆ
ಬೆಂಗಳೂರು, ಏಪ್ರಿಲ್ 14: ಅಥಣಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಲಕ್ಷಣ್ ಸವದಿ ಕಾಂಗ್ರೆಸ್ ಸೇರ್ಪಡೆಗೆ ಮುಂದಾದ್ದರಿಂದ ಉಳಿದ ನಾಯಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿರುವ ಬಿಜೆಪಿ ಈಗ ಪಕ್ಷದ ಎಲ್ಲ ನಾಯಕರ ಸಭೆ ಕರೆದಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿರುವುದರಿಂದ ಹಲವಾರು ನಾಯಕರು ತಮ್ಮ ಕ್ಷೇತ್ರಗಳಲ್ಲಿ ಟಿಕೆಟ್ ಕಳೆದುಕೊಂಡಿದ್ದಾರೆ. ಹೀಗಾಗಿ ಕರ್ನಾಟಕ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹೀಗಾಗಿ ಹಲವಾರು ನಾಯಕರು ರಾಜೀನಾಮೆ ನೀಡಿ ಬೇರೆ ಪಕ್ಷ ಸೇರುತ್ತಿದ್ದಾರೆ. ಮತ್ತೆ ಕೆಲವರು ನಿವೃತ್ತಿ ಘೋಷಿಸಿದ್ದಾರೆ.

ಈ ನಿಟ್ಟಿನಲ್ಲಿ ಪಕ್ಷದಿಂದ ಹಲವಾರು ನಾಯಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲು ಮುಂದಾಗಿರುವ ಬಿಜೆಪಿ ಹೈಕಮಾಂಡ್ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜ್ಯದ ಎಲ್ಲ ನಾಯಕ ಸಭೆಯನ್ನು ಬೆಳಗಾವಿಯಲ್ಲಿ ಕರೆದಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಎದ್ದಿರುವ ಬಂಡಾಯದ ಬೆಂಕಿಗೆ ನೀರು ಹಾಕಲು ಮುಂದಾಗಿದ್ದಾರೆ.
ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಸಿಗುವ ಮೊದಲೇ ಕೆಎಸ್ ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದರು. ಬಳಿಕ ಹುಬ್ಬಳ್ಳಿ ಧಾರವಾಢ ಸೆಂಟ್ರಲ್‌ನಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಜಗದೀಶ್ ಶೆಟ್ಟರ್ ಅವರು ನಾನು 30 ವರ್ಷದಿಂದ ಬಿಜೆಪಿಗಾಗಿ ದುಡಿದಿದ್ದೇನೆ. ಆದರೆ ಪಕ್ಷದ ಹೈಕಮಾಂಡ್ ನನ್ನನ್ನು ಈ ರೀತಿ ನಡೆಸಿಕೊಳ್ಳುತ್ತದೆ ಎಂದುಕೊಂಡಿರಲಿಲ್ಲ ಎಂದು ಹೇಳಿದ್ದರು.
ಬಳಿಕ ಟಿಕೆಟ್ ಪಡೆದೆ ತೀರುವ ಹಠಕ್ಕೆ ಬಿದ್ದಿದ್ದ ಅವರು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದಲ್ಲದೆ ಪುತ್ತೂರು ಸುಳ್ಳದಿಂದ ಸಚಿವ ಅಂಗಾರ ಕೂಡ ತಮ್ಮ ಕ್ಷೇತ್ರದಲ್ಲಿ ತಮಗೆ ಟಿಕೆಟ್ ತಪ್ಪಿದ್ದರಿಂದ ರಾಜಕೀಯದಿಂದ ದೂರ ಸರಿದು ಪಕ್ಷದ ಪರ ಕೆಲಸ ಮಾಡದಿರಲು ನಿರ್ಧಾರ ಮಾಡಿದ್ದರು.

ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ಅನಿಲ್ ಬೆನಕೆ ಬೆಂಬಲಿಗರು ಮಂಗಳವಾರ ತಡರಾತ್ರಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿ ಉತ್ತರ ಕ್ಷೇತ್ರದಿಂದ ಲಿಂಗಾಯತ ಡಾ.ರವಿ ಪಾಟೀಲ್ ಅವರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ಕಣಕ್ಕಿಳಿಸಿರುವುದು ಮರಾಠಾ ಸಮುದಾಯಕ್ಕೆ ಸೇರಿದ ಬೆನಕೆ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಬಾರಿ ಬಿಜೆಪಿ ಟಿಕೆಟ್ ಕೈತಪ್ಪಿರುವುದಕ್ಕೆ ಉಡುಪಿ ಶಾಸಕ ರಘುಪತಿ ಭಟ್ ಕೂಡ ಕಣ್ಣೀರಿಟ್ಟಿದ್ದಾರೆ. ಪಕ್ಷ ನನ್ನನ್ನು ಹೀಗೆ ನಡೆಸಿಕೊಳ್ಳುತ್ತದೆ ಎಂದುಕೊಂಡಿರಲಿಲ್ಲ, ಪಕ್ಷ ನಡೆಸಿಕೊಂಡ ರೀತಿ ಬೇಸರ ತಂದಿದೆ ಎಂದು ಹೇಳಿದ್ದಾರೆ. ಉಡುಪಿಯಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದೇನೆ ಮತ್ತು ಬಿಜೆಪಿಯಿಂದ ಇಲ್ಲಿ ಯಾರು ನಿಂತರೂ ಗೆಲ್ಲಲಿದ್ದಾರೆ ಅಂತಹ ಸ್ಥಿತಿ ನಿರ್ಮಾಣ ಮಾಡಿದ್ದೇನೆ. ಪಕ್ಷಕ್ಕೆ ಈಗ ನನ್ನ ಅವಶ್ಯಕತೆ ಇಲ್ಲ ಎಂಬುದು ತೋರಿಸುತ್ತಿದ್ದಾರೆ. ಅಮಿತ್ ಶಾ ಬೇಡ, ರಾಜ್ಯ ನಾಯಕರು ಅಥವಾ ಜಿಲ್ಲಾಧ್ಯಕ್ಷರು ಕರೆ ಮಾಡದೇ ಇರುವುದು ಬೇಸರ ತಂದಿದೆ ಎಂದು ಹೇಳಿದ್ದರು.
ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದೆ ಅತೃಪ್ತರಾಗಿರುವ ನಾಯಕರನ್ನು ಮನವೊಲಿಸುವ ಪ್ರಯತ್ನದಲ್ಲಿ ಬಿಜೆಪಿಯ ಹಿರಿಯ ನಾಯಕರು ತೊಡಗಿಸಿಕೊಂಡಿದ್ದು ಭಿನ್ನಾಭಿಪ್ರಾಯವನ್ನು ಶಮನಗೊಳಿಸಲಾಗುತ್ತದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ಮಂಗಳೂರಿನಲ್ಲಿ ಹೇಳಿದ್ದರು.
ಅಸಮಾಧಾನ ಸಹಜವಾಗಿ ಆಗುತ್ತದೆ. ಅಸಮಾಧಾನ ಇರುವವರ ಮನವೊಲಿಸುತ್ತೇವೆ, ಪಕ್ಷದಲ್ಲಿನ ಅಸಮಾಧಾನ ಸರಿಪಡಿಸಲಾಗುತ್ತಿದೆ, ಕಾರ್ಯಕರ್ತರು ಬಲಿಷ್ಠರಾಗಿದ್ದು, ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ, ಬಹುತೇಕ ಕಡೆ ಪಕ್ಷದ ಭಿನ್ನಾಭಿಪ್ರಾಯ ಶಮನವಾಗಲಿದೆ. ''ಹೈಕಮಾಂಡ್ ಅತೃಪ್ತರ ಜೊತೆ ಮಾತನಾಡುತ್ತಿದೆ. ಎಲ್ಲ ನಾಯಕರ ಜತೆ ಮಾತನಾಡಿದ್ದೇನೆ, ಶೀಘ್ರವೇ ಭಿನ್ನಾಭಿಪ್ರಾಯ ಬಗೆಹರಿಯುವ ವಿಶ್ವಾಸವಿದೆ. ಲಕ್ಷಣ ಸವದಿ ಹಿರಿಯರಾಗಿದ್ದು, ಸುದೀರ್ಘ ಕಾಲದಿಂದ ರಾಜಕೀಯದಲ್ಲಿದ್ದಾರೆ. ಜನರಿಂದ ಒತ್ತಡವೂ ಇದೆ. ಒಂದು ಸ್ಥಳ, ಇದು ಸಮಯ ತೆಗೆದುಕೊಳ್ಳುತ್ತದೆ ಅವರು ಹೇಳಿದ್ದರು. ಅದರಂತೆ ಈಗ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಎಲ್ಲ ನಾಯಕರ ಸಭೆ ಕರೆದಿದ್ದಾರೆ.












Click it and Unblock the Notifications