ಏಳು ವರ್ಷದ ಬಳಿಕ ಇಂದು ಕಾವೇರಿ ವಿವಾದದ ವಿಚಾರಣೆ
ಬೆಂಗಳೂರು, ಜು. 15 : ಕಾವೇರಿ ನ್ಯಾಯಾಧೀಕರಣದ ಅಂತಿಮ ಐ ತೀರ್ಪಿನ ಕುರಿತು ಕೆಲವೊಂದು ಸ್ಪಷ್ಟನೆ ಕೋರಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಕೇಂದ್ರ ಸರ್ಕಾರಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಇಂದು ನಡೆಯಲಿದೆ. ಏಳು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಾವೇರಿ ನ್ಯಾಯಾಧಿಕರಣದ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ.
ನ್ಯಾ.ಎನ್.ಪಿ.ಸಿಂಗ್ ನೇತೃತ್ವದಲ್ಲಿ ಕಾವೇರಿ ನ್ಯಾಯಾಧೀಕರಣ 2007ರ ಫೆ.5ರಂದು ನೀಡಿದ್ದ ಐ ತೀರ್ಪಿನ ಕುರಿತು ಸ್ಪಷ್ಟನೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಧೀಕರಣ ಮಂಗಳವಾರ ನಡೆಸಲಿದೆ. ನ್ಯಾಯಾಧೀಕರಣದ ನೂತನ ಅಧ್ಯಕ್ಷ ಬಿ.ಎಸ್.ಚೌಹಾಣ್ ವಿಚಾರಣೆ ನಡೆಸಲಿದ್ದಾರೆ.

2007ರ ತೀರ್ಪು : ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಸುಧೀರ್ಘ ವಿಚಾರಣೆ ನಡೆಸಿದ್ದ ಕಾವೇರಿ ನ್ಯಾಯಾಧೀಕರಣ 2007ರ ಫೆ.5ರಂದು ತನ್ನ ಅಂತಿಮ ಐ ತೀರ್ಪು ಪ್ರಕಟಿಸಿತ್ತು. [ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಇಲ್ಲ]
ತನ್ನ ತೀರ್ಪಿನಲ್ಲಿ ಕಾವೇರಿ ಕಣಿವೆಯಲ್ಲಿ 740 ಟಿಎಂಸಿ ನೀರು ಇದೆ ಎಂದು ಹೇಳಿದ್ದ ನ್ಯಾಯಾಧೀಕರಣ, ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ 30 ಹಾಗೂ ಪುದುಚೇರಿಗೆ 7 ಟಿಎಂಸಿ ನೀರನ್ನು ಹಂಚಿಕೆ ಮಾಡಿತ್ತು.
ಸುಪ್ರೀಂನಲ್ಲಿ ಸಮರ : ಕಾವೇರಿ ನ್ಯಾಯಾಧೀಕರಣದ ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು, ಕೇರಳ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಕೆಲವೊಂದು ಸ್ಪಷ್ಟನೆ ಬಯಸಿ ನ್ಯಾಯಾಧೀಕರಣಕ್ಕೂ ಅರ್ಜಿ ಸಲ್ಲಿಸಿದ್ದವು. ಮೂರೂ ಸರ್ಕಾರಗಳು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಅಂಗೀಕರಿಸಿದೆ. ಆದ್ದರಿಂದ ನ್ಯಾಯಾಧೀಕರಣದ ಐತೀರ್ಪಿನಲ್ಲಿ ಬದಲಾವಣೆಯಾವುದ ಸಾಧ್ಯತೆ ಇದೆ. ಆದ್ದರಿಂದ ವಿಚಾರಣೆ ನಡೆಸುವುದಿಲ್ಲ ಎಂದು ನ್ಯಾಯಾಧೀಕರಣ ಹೇಳಿತ್ತು. ಆದ್ದರಿಂದ 2007ರ ನಂತರ ನ್ಯಾಯಾಧೀಕರಣ ಸಭೆ ಸೇರಿಲ್ಲ.
ತಮಿಳುನಾಡು ಸರ್ಕಾರ ಐ ತೀರ್ಪಿನ ಕುರಿತಂತೆ ಸ್ಪಷ್ಟನೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಬೇಕು ಎಂದು ನ್ಯಾಯಾಧೀಕರಣಕ್ಕೆ ಮನವಿ ಮಾಡಿದೆ. 2012ರಲ್ಲಿ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಮತ್ತೆ ನ್ಯಾಯಾಧೀಕರಣದ ವಾಪಸ್ ಕಳಹಿಸಿದೆ. ಆದ್ದರಿಂದ ಇಂದು ವಿಚಾರಣೆ ನಡೆಯಲಿದೆ.
ಕರ್ನಾಟಕ ಕೇಳಿರುವುದೇನು : ಸೋಮವಾರ ಜೆಡಿಎಸ್ ನಾಯಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಇಂದಿನ ವಿಚಾರಣೆ ಕುರಿತು ಮಾತುಕತೆ ನಡೆಸಿದೆ. ರಾಜ್ಯ ಸರ್ಕಾರ ಕುಡಿಯುವ ನೀರಿನ ಹಂಚಿಕೆ, ಬರಗಾಲದ ಸಂದರ್ಭದಲ್ಲಿ ನೀರಿನ ಹಂಚಿಕೆ ಮುಂತಾದ ವಿಚಾರಗಳ ಬಗ್ಗೆ ನ್ಯಾಯಾಧೀಕರಣದ ಬಳಿ ಸ್ಪಷ್ಟನೆ ಕೇಳಿದೆ.












Click it and Unblock the Notifications