ವಿರೋಧದ ನಡುವೆಯೂ ಉ.ಪ್ರದೇಶಕ್ಕೆ ಹಾರಲಿದೆಯೇ ಏರ್ ಶೋ?
ಬೆಂಗಳೂರು, ಆಗಸ್ಟ್ 13: ಪ್ರತಿಷ್ಠಿತ ವೈಮಾನಿಕ ಪ್ರದರ್ಶನ ಏರೋ ಇಂಡಿಯಾವನ್ನು ಬೆಂಗಳೂರಿನಿಂದ ಸ್ಥಳಾಂತರ ಮಾಡುವ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೆ, ಅತ್ತ ಉತ್ತರ ಪ್ರದೇಶದಲ್ಲಿ ಏರ್ ಶೋ ನಡೆಸಲು ಸಿದ್ಧತೆ ಆರಂಭವಾಗಿದೆ.
ಬೆಂಗಳೂರಿನಲ್ಲಿ 12 ಬಾರಿ ನಡೆದಿರುವ ವೈಮಾನಿಕ ಹಾರಾಟ ಪ್ರದರ್ಶನವನ್ನು ಸ್ಥಳಾಂತರಿಸುವ ಪ್ರಸ್ತಾವ ನಮ್ಮ ಮುಂದೆ ಇಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಆದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಲಾಬಿ ನಡೆಸಿದ್ದಾರೆ.
ಲಖ್ನೋದ ಭಕ್ಷಿ ತಲಾಬ್ ವಾಯು ನೆಲೆಯನ್ನು ಏರ್ ಶೋಕ್ಕಾಗಿ ಸಿದ್ಧಗೊಳಿಸಲಾಗಿತ್ತಿದೆ. ವೈಮಾನಿಕ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಸ್ಥಳವನ್ನು ಮಾರ್ಪಾಡು ಮಾಡಲಾಗುತ್ತಿದ್ದು, ಅಲ್ಲಿ ಜನರ ಪ್ರವೇಶ, ನಿರ್ಗಮನ ಮಾರ್ಗಗಳು, ಪಾರ್ಕಿಂಗ್, ವೀಕ್ಷಣೆ, ಸಾರಿಗೆ ಸಂಪರ್ಕ, ಆಹಾರ ಮಳಿಗೆ ಮುಂತಾದವುಗಳನ್ನು ಸಜ್ಜುಗೊಳಿಸಲಾಗುತ್ತಿದೆ.

ಏರ್ ಶೋ ಯಾವ ಸ್ಥಳದಲ್ಲಿ ಮತ್ತು ಯಾವಾಗ ನಡೆಯಲಿದೆ ಎಂಬ ಬಗ್ಗೆ ರಕ್ಷಣಾ ಇಲಾಖೆಯು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಕಟಿಸಲಿದೆ.
ಬೆಂಗಳೂರಿನಿಂದ ಏರ್ ಶೋ ಸ್ಥಳಾಂತರಿಸುವುದರ ವಿರುದ್ಧ ವಿದ್ಯಾರ್ಥಿಗಳು ಸಹಿ ಸಂಗ್ರಹ ಚಳವಳಿ ಆರಂಭಿಸಿದ್ದಾರೆ. ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆ ಈ ಚಳವಳಿಗೆ ಚಾಲನೆ ನೀಡಿದ್ದು, ಮೌಂಟ್ ಕಾರ್ಮೆಲ್ ಕಾಲೇಜು, ಮಹಾರಾಣಿ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಅದಕ್ಕೆ ಸಹಿ ಹಾಕುತ್ತಿದ್ದಾರೆ. ಸಂಗ್ರಹವಾದ ಸಹಿಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಲು ತೀರ್ಮಾನಿಸಲಾಗಿದೆ.
ಏರ್ ಶೋ ಸ್ಥಳಾಂತರ ಚರ್ಚೆಯ ವಿಷಯ ಆಗಬಾರದಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಿಂದ ಏರ್ ಶೋ ಸ್ಥಳಾಂತರ ಆಗಲು ಬಿಡುವುದಿಲ್ಲ. ಈ ಬಗ್ಗೆ ರಾಜ್ಯದ ಸಂಸದರೆಲ್ಲರೂ ಸೇರಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದಾಗಿ ಅವರು ಗದಗದಲ್ಲಿ ತಿಳಿಸಿದರು.
ಬೆಂಗಳೂರು ಬಿಟ್ಟು ಬೇರೆ ಕಡೆ ಸ್ಥಳಾಂತರ ಆಗುವುದಿಲ್ಲ. ಡಿಕೆ ಶಿವಕುಮಾರ್ ಮತ್ತು ಜಿ. ಪರಮೇಶ್ವರ್ ಈ ಬಗ್ಗೆ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.












Click it and Unblock the Notifications