ಮುಂದಿನ ದಸರಾ ದರ್ಬಾರ್ ಅರಸೀಕೆರೆಯಲ್ಲಿ
ಗುಲ್ಬರ್ಗ, ಅ.16 : ಕರ್ನಾಟಕದಲ್ಲಿ ಭಾರೀ ವಿವಾದ ಹುಟ್ಟು ಹಾಕಿದ್ದ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಗುಲ್ಬರ್ಗ ಜಿಲ್ಲೆ ಜೇವರ್ಗಿಯಲ್ಲಿ ಸೋಮವಾರ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಮುಂದಿನ ದಸರಾ ದರ್ಬಾರ್ ಅರಸೀಕೆರೆಯಲ್ಲಿ ನಡೆಸುವುದಾಗಿ ಶ್ರೀಗಳು ಘೋಷಿಸಿದ್ದಾರೆ.
ಅಡ್ಡ ಪಲ್ಲಕ್ಕಿ ಉತ್ಸವದ ನಂತರ ಶಾಂತಿ ಸಂದೇಶ ನೀಡಿದ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಮನುಷ್ಯನಿಗೆ ಶಾಸ್ತ್ರ ಅಥವ ಶಸ್ತ್ರದ ಭಯವಾದರೂ ಇರಬೇಕು. ಇಲ್ಲದಿದ್ದಲ್ಲಿ ಸಾಮಾಜಿಕ ಸ್ವಾಸ್ಥ್ಯ ಹಾಳಾಗುವುದು ಎಂದರು.

ಧರ್ಮದ ತತ್ವ ಸಿದ್ಧಾಂತಗಳನ್ನು ಅರಿತು ಆದರ್ಶದ ದಾರಿಯಲ್ಲಿ ಹೆಜ್ಜೆ ಹಾಕುವಂತೆ ಮಾಡಿ ಮನುಕುಲದ ಬದುಕಿಗೆ ಆಧ್ಯಾತ್ಮದ ಬೆಳಕು ತುಂಬುವುದೇ ಶರನ್ನವರಾತ್ರಿ ದಸರಾ ದರ್ಬಾರ್ ಮಹೋತ್ಸವದ ಆಚರಣೆಯ ಮೂಲ ಆಶಯವಾಗಿದೆ ಎಂದು ಅಭಿಪ್ರಾಯಪಟ್ಟರು.
2014ರ ಶ್ರೀಮದ್ ರಂಭಾಪುರೀ ಜಗದ್ಗುರುಗಳ 23ನೇ ವರ್ಷದ ದಸರಾ ದರ್ಬಾರ್ ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ನಡೆಸಲಾಗುತ್ತದೆ ಎಂದು ಶ್ರೀಗಳು ಘೋಷಿಸಿದರು. ಜೇವರ್ಗಿ ದಸರಾ ಹೊಸ ವಿಕ್ರಮ ಸಾಧಿಸಿದೆ ಎಂದು ಶ್ರೀಗಳು ಇದೇ ಸಂರ್ಭದಲ್ಲಿ ಹೇಳಿದರು. (ಏನಿದು ಅಡ್ಡಪಲ್ಲಕ್ಕಿ ಉತ್ಸವ)
ದಸರಾ ದರ್ಬಾರ್ ಅಂತಿಮ ದಿನದಂದು ಮಾಗಣಗೇರಿ ಡಾ. ವಿಶ್ವಾರಾಧ್ಯ ಶ್ರೀಗಳಿಗೆ ಮಾನವ ಪ್ರೇಮಿ ಮಹಾಂತ', ಶಖಾಪುರದ ಶ್ರೀ ಸಿದ್ಧರಾಮ ಶ್ರೀಗಳಿಗೆ ಗುರುಸೇವಾ ರತ್ನಾಕರ, ಕಡಕೋಳದ ಶ್ರೀ ರುದ್ರಮುನಿ ಶ್ರೀಗಳಿಗೆ ಧರ್ಮ ನಿಷ್ಠ ಶ್ರೀಗುರು ರತ್ನ, ಆಲೂರು ಶ್ರೀ ಕೆಂಚಬಸವ ಶ್ರೀಗಳಿಗೆ ಶಿವಾಚಾರ್ಯ ಕುಲಸೇಖರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಡ್ಡ ಪಲ್ಲಕ್ಕಿ ಉತ್ಸವ : ಸೋಮವಾರ ಮಧ್ಯಾಹ್ನ 3.30ರ ವೇಳೆಗೆ ರಂಭಾಪುರೀ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಪ್ರಾರಂಭವಾಯಿತು. ಜೇವರ್ಗಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ದರ್ಬಾರ್ ನಡೆಯುವ ಎ.ಪಿ.ಎಂ.ಸಿ. ಆವರಣಕ್ಕೆ 5.30ರ ವೇಳೆಗೆ ಆಗಮಿಸಿತು.
ಗೊಂಬೆಗಳ ಸುಟ್ಟು ಆಕ್ರೋಶ : ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ವಿರೋಧಿಸಿ ಡಿಸಿ ಕಚೇರಿ ಮುಂದೆ ಎರಡು ದಿನಗಳಿಂದ ನಿರಶನ ನಡೆಸುತ್ತಿದ್ದ 20ಕ್ಕೂ ಹೆಚ್ಚು ಮಠಗಳ ಸ್ವಾಮಿಗಳು ಸೋಮವಾರ ಸಂಜೆ ಪಂಚಪೀಠಾಧೀಶರ ಅಣಕು ಗೊಂಬೆಗಳನ್ನು ದಹಿಸಿ ನಿರಶನ ಮುಗಿಸಿದರು.
ಎರಡು ದಿನಗಳ ನಿರಶನದಲ್ಲಿ ಪಂಚಮಸಾಲಿ ಪೀಠದ ಜಗದ್ಗುರು ಸಿದ್ದಲಿಂಗ ಸ್ವಾಮಿಗಳು, ಸೊನ್ನದ ಶಿವಾನಂದ ಸ್ವಾಮಿಗಳು, ಜೇರಟಗಿ, ಚೌದಾಪುರಿ, ಗುರುಮಠಕಲ್ ಖಾಸಾ ಮಠದ ಸ್ವಾಮಿಗಳು, ಸಿದ್ದಬಸವ ಸ್ವಾಮಿಗಳು ಸೇರಿದಂತೆಯೆ ಅನೇಕ ಮಠಗಳ ಸ್ವಾಮಿಗಳು ಭಾಗವಹಿಸಿದ್ದರು.












Click it and Unblock the Notifications