SM Krishna: ರಾಜಕೀಯ ಗುರು ಎಸ್‌ಎಂ ಕೃಷ್ಣ ಬಗ್ಗೆ ನಟಿ ರಮ್ಯಾ ಹೇಳಿದ್ದೇನು?
ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ನಿಧನರಾಗಿದ್ದಾರೆ. ಸಂಬಂಧಿಕರು, ಬೆಂಬಲಿಗರು, ಅಭಿಮಾನಿಗಳು ಎಸ್‌ಎಂ ಕೃಷ್ಣ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ನಟಿ ರಮ್ಯಾ ಸದಾಶಿವನಗರ ಎಸ್‌ಎಂ ಕೃಷ್ಣ ಅವರ ನಿವಾಸಕ್ಕೆ ಆಗಮಿಸಿ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ ಎಂದು ಹೇಳಿ ತೆರಳಿದ್ದಾರೆ.
ನಟಿ ರಮ್ಯಾರನ್ನು ರಾಜಕೀಯಕ್ಕೆ ಕರೆತಂದಿದ್ದು ಎಸ್‌ಎಂ ಕೃಷ್ಣ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮಂಡ್ಯದಿಂದ ಗೆಲುವು ಸಾಧಿಸಿದ್ದ ರಮ್ಯಾ, ಲೋಕಸಭೆಯಲ್ಲಿ ಕೂಡ ಗಮನ ಸೆಳೆದಿದ್ದರು. ಎಸ್‌ಎಂ ಕೃಷ್ಣ ಅವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುತ್ತಿದ್ದ ರಮ್ಯಾ, ಹಲವು ಸಲಹೆಗಳನ್ನು ಪಡೆಯುತ್ತಿದ್ದರು.

ಕಾಂಗ್ರೆಸ್‌ನಲ್ಲಿ ಬಹುಬೇಗ ಜನಪ್ರಿಯ ನಾಯಕಿಯಾಗಿ ಬೆಳೆದ ರಮ್ಯಾ, ಹೈಕಮಾಂಡ್ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿ ಕೇಂದ್ರದ ನಾಯಕರ ಜೊತೆ ಸಂಪರ್ಕ ಸಾಧಿಸಿದ್ದರು.
ಎಸ್‌ಎಂ ಕೃಷ್ಣ ಅವರನ್ನು ಪ್ರೀತಿಯಿಂದ ಅಂಕಲ್ ಎಂದು ಕರೆಯುತ್ತಿದ್ದ ರಮ್ಯಾ, ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಜವಾಬ್ದಾರಿಗಳನ್ನು ನಿಭಾಯಿಸಿದರು. ಸದ್ಯ ರಾಜಕೀಯ, ಸಿನಿಮಾ ಎರಡರಿಂದಲೂ ರಮ್ಯಾ ದೂರವಾಗಿದ್ದಾರೆ. ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುವುದನ್ನು ಕೂಡ ಕಡಿಮೆ ಮಾಡಿದ್ದಾರೆ.
ಎಸ್‌ಎಂ ಕೃಷ್ಣ ರಾಜಕೀಯ ಜೀವನ
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಮೇ 1, 1932ರಲ್ಲಿ ಜನಿಸಿದ ಎಸ್‌ಎಂ ಕೃಷ್ಣ ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಪದವಿ ಶಿಕ್ಷಣ ಪಡೆದರು. ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದ ಅವರು, ಬಳಿಕ ಯುಎಸ್‌ನ ಡಲ್ಲಾಸ್‌ನಲ್ಲಿ ಉನ್ನತ ಶಿಕ್ಷಣ ಪೂರೈಸಿದರು. ಬಳಿಕ ವಾಪಸಾದ ಅವರು 1962ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿ ಶಾಸಕರಾದರು.
1967ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಎಸ್‌ಎಂ ಕೃಷ್ಣ 1968ರಲ್ಲಿ ನಡೆದ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರು. 1972ರಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು, ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ದೇವರಾಜ ಅರಸು ಸರ್ಕಾರದಲ್ಲಿ ಮಂತ್ರಿಯಾದರು.
1980ರಲ್ಲಿ ಮತ್ತೆ ಲೋಕಸಭೆ ಪ್ರವೇಶಿಸಿದ ಎಂಎಸ್ ಕೃಷ್ಣ ಇಂದಿರಾ ಗಾಂಧಿ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದರು. 1985ರಲ್ಲಿ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಿದರು. 1993-94ರ ನಡುವೆ ರಾಜ್ಯದ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದರು.
1999ರಲ್ಲಿ ಎಸ್‌ಎಂ ಕೃಷ್ಣ ಕೆಪಿಸಿಸಿ ಅಧ್ಯಕ್ಷರಾಗಿದ್ದ ವೇಳೆ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರಿಂದ ಎಸ್‌ಎಂ ಕೃಷ್ಣ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಅವರ ಆಡಳಿತ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ದಿಕ್ಕೇ ಬದಲಾಯಿತು. ಇಂದು ಬೆಂಗಳೂರು ಸಿಲಿಕಾನ್ ವ್ಯಾಲಿ, ಸ್ಟಾರ್ಟಪ್ ಹಬ್ ಎಂದು ಕರೆಸಿಕೊಳ್ಳುವಲ್ಲಿ ಎಸ್‌ಎಂ ಕೃಷ್ಣ ಅವರ ಪಾತ್ರ ಬಹುಮುಖ್ಯವಾಗಿದೆ.
2004ರಲ್ಲಿ ಮಹಾರಾಷ್ಟ್ರ ರಾಜ್ಯಪಾಲರಾಗಿ ನೇಮಕವಾದ ಅವರು, ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ಸಚಿವರಾಗಿ ಕೆಲಸ ಮಾಡಿದ್ದಾರೆ. 2017ರವರೆಗೂ ಕಾಂಗ್ರೆಸ್‌ನಲ್ಲೇ ಇದ್ದ ಎಸ್‌ಎಂ ಕೃಷ್ಣ, ಬಳಿಕ ಪಕ್ಷದಲ್ಲಿ ತಮಗೆ ಗೌರವ ಸಿಗುತ್ತಿಲ್ಲ ಎಂದು ಬಿಜೆಪಿ ಸೇರ್ಪಡೆಯಾದರು. 2023ರಲ್ಲಿ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು.












Click it and Unblock the Notifications