Darshan: ಕರ್ನಾಟಕ ಹೈಕೋರ್ಟ್ ಮೊರೆ ಹೋದ ನಟ ದರ್ಶನ್
ಬೆಂಗಳೂರು, ಜುಲೈ 09: ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ, ನಟ ದರ್ಶನ್ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಹತ್ಯೆ ಪ್ರಕರಣದ 2ನೇ ಆರೋಪಿಯಾಗಿರುವ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದು, ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಜೂನ್ 11ರ ಮಂಗಳವಾರ ದರ್ಶನ್ ಬಂಧಿಸಲಾಗಿತ್ತು. ಪೊಲೀಸರ ವಿಚಾರಣೆ ಬಳಿಕ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಜುಲೈ 18ರ ತನಕ ಆರೋಪಿ ದರ್ಶನ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗಿದೆ.

ಮಂಗಳವಾರ ದರ್ಶನ್ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಜೈಲು ಅಧಿಕಾರಿಗಳಿಗೆ ವಿವಿಧ ನಿರ್ದೇಶನಗಳನ್ನು ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಮಾಡಿರುವ ಮನವಿ ಏನು?; ನಟ ದರ್ಶನ್ ಪರ ವಕೀಲರು ಜೈಲಿನಲ್ಲಿ ಮನೆ ಊಟ ಮಾಡಲು ಅನುಮತಿ ನೀಡಬೇಕು, ಹಾಸಿಗೆ ನೀಡಬೇಕು, ಪುಸ್ತಕ ಓದಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ರಿಟ್ ಅರ್ಜಿ ಮಂಗಳವಾರ ಸಲ್ಲಿಕೆಯಾಗಿದ್ದು, ವಿಚಾರಣೆಗೆ ಇನ್ನೂ ಬರಬೇಕಿದೆ.
ವಕೀಲರು ಜೈಲಿನ ಊಟ ನಟ ದರ್ಶನ್‌ಗೆ ಜೀರ್ಣವಾಗುತ್ತಿಲ್ಲ. ಜೈಲಿನ ಊಟ ಮಾಡುತ್ತಿರುವುದರಿಂದ ಅವರಿಗೆ ವಾಂತಿ, ಭೇದಿ ಆಗುತ್ತಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ಆದ್ದರಿಂದ ಮನೆಯ ಊಟ ಸೇವಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಲಾಗಿದೆ.
ದರ್ಶನ್ ಜೈಲಿನಲ್ಲಿ ಚಾಪೆ ಮೇಲೆ ಮಲಗುತ್ತಿದ್ದಾರೆ. ಆದ್ದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಅವರು ಮನೆಯಿಂದ ಹಾಸಿಗೆ ತರಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ರಿಟ್ ಅರ್ಜಿಯಲ್ಲಿ ವಿವರಣೆ ನೀಡಲಾಗಿದೆ.
ನಟ ದರ್ಶನ್ ಮತ್ತು 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು 24ನೇ ಎಸಿಎಂಎಂ ಕೋರ್ಟ್ ಜುಲೈ 18ರ ತನಕ ವಿಸ್ತರಣೆ ಮಾಡಿ ಆದೇಶಿಸಿದೆ. ಆದ್ದರಿಂದ ಜೈಲಿನಲ್ಲಿ ಸಮಯ ಕಳೆಯಲು ಪುಸ್ತಕ ಓದಲು, ಅದನ್ನು ತರಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಕೆ ಮಾಡಲಾಗಿದೆ.
ದರ್ಶನ್‌ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದಾಗ ಅವರ ಪರ ವಕೀಲರು ಜೈಲಿನಲ್ಲಿ ವಿಶೇಷ ಸೌಲಭ್ಯಕ್ಕಾಗಿ ಯಾವುದೇ ಮನವಿ ಸಲ್ಲಿಕೆ ಮಾಡಿರಲಿಲ್ಲ. ಜುಲೈ 4ರಂದು ದರ್ಶನ್ ಸೇರಿ ಇತರ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.
ಕೋರ್ಟ್ ಜುಲೈ 18ರ ತನಕ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈಗ ಕರ್ನಾಟಕ ಹೈಕೋರ್ಟ್‌ಗೆ ವಕೀಲರು ರಿಟ್ ಅರ್ಜಿ ಸಲ್ಲಿಕೆ ಮಾಡಿ ಜೈಲಿನಲ್ಲಿ ವಿಶೇಷ ಸೌಲಭ್ಯಕ್ಕಾಗಿ ಮನವಿ ಸಲ್ಲಿಕೆ ಮಾಡಿದ್ದಾರೆ.
ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೆಲವು ದಿನಗಳ ಹಿಂದೆ ಕೇಳಿ ಬಂದಿತ್ತು. ಆಗ ಗೃಹ ಸಚಿವ ಡಾ. ಜಿ. ಪರಮೇಶ್ವರ ಸಾಮಾನ್ಯ ಕೈದಿಗೆ ನೀಡುವ ಎಲ್ಲಾ ಸೌಲಭ್ಯ ನೀಡಲಾಗುತ್ತಿದೆ. ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಸುದ್ದಿಗಳು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದರು.
ದರ್ಶನ್ ಪರ ವಕೀಲರು ಜಾಮೀನು ಪಡೆಯಲು ಅರ್ಜಿಯನ್ನು ಸಲ್ಲಿಕೆ ಮಾಡಿಲ್ಲ. ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ಹತ್ಯೆ ನಡೆದು ಒಂದು ತಿಂಗಳು ಕಳೆದಿದೆ. ಶೀಘ್ರವೇ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ನಿರೀಕ್ಷೆ ಇದೆ.
ನಟ ದರ್ಶನ್ ಭೇಟಿ ಮಾಡಲು ಕುಟುಂಬ ಸದಸ್ಯರು, ಸ್ನೇಹಿತರು ಜೈಲಿಗೆ ಭೇಟಿ ನೀಡಿದ್ದರು. ಜೈಲೂಟ ಮಾಡಿ ದರ್ಶನ್ ಸುಮಾರು 10 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂಬ ವರದಿಗಳು ಬರುತ್ತಿವೆ. ನ್ಯಾಯಾಲಯ ಮನೆ ಊಟ ತರಿಸಿಕೊಳ್ಳಲು ಅನುಮತಿ ನೀಡಲಿದೆಯೇ? ಕಾದು ನೋಡಬೇಕಿದೆ.












Click it and Unblock the Notifications