Bellary Jail: ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್, ಪೊಲೀಸರಿಗೆ ತಲೆ ಬಿಸಿ: ಜೈಲಿನತ್ತ ಜಮಾಯಿಸಿದ ಡಿ.ಬಾಸ್ ಫ್ಯಾನ್ಸ್
ಬೆಂಗಳೂರು, ಆಗಸ್ಟ್ 28: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಸಹಚರ ಖೈದಿಗಳಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಬುಧವಾರ ಸ್ಥಳಾಂತರ ಮಾಡಲಾಗುತ್ತಿದೆ. ಕೋರ್ಟ್ ಆದೇಶದನ್ವಯ ನಟ ದರ್ಶನ್‌ರನ್ನು ಬಳ್ಳಾರಿಯ ಕಾರಾಗೃಹಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17 ಮಂದಿ ವಿಚಾರಣಾಧೀನ ಖೈದಿಗಳಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿದ್ದರು. ಇವರಿಗೆ ರಾಜಾತಿಥ್ಯ ಸಿಗುತ್ತಿರುವುದಕ್ಕೆ ಸಾಕ್ಷಿ ಎಂಬಂತೆ ಒಂದಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

ಫೋಟೋಗಳು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಕರ್ನಾಟಕ ಗೃಹ ಇಲಾಖೆ ಹಾಗೂ ಪೊಲೀಸರು ನ್ಯಾಯಾಲಯದ ಆದೇಶ ಪಡೆದು, ಇಂದು ರಾಜ್ಯದ ವಿವಿಧ ಜೈಲುಗಳಿಗೆ ಆರೋಪಿಗಳ್ನು ಸ್ಥಳಾಂತರ ಮಾಡುತ್ತಿದ್ದಾರೆ. ಈ ಪೈಕಿ ನಟ ದರ್ಶನ್ ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ.
ಈಗಾಗಲೇ ಪೊಲೀಸರು ಜೈಲಿನ ಸುತ್ತಮುತ್ತ ಸೂಕ್ತ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಈ ಮಧ್ಯೆ ತಮ್ಮ ನೆಚ್ಚಿನ ನಟ ಬಳ್ಳಾರಿ ಜೈಲಿಗೆ ಶಿಫ್ಟ್ ವಿಚಾರ ತಿಳಿದು ಅಪಾರ ಅಭಿಮಾನಿಗಳು ಕಾರಾಗೃಹದತ್ತ ದೌಡಾಯಿಸಿದ್ದಾರೆ.

ನಟ ದರ್ಶನ್ ಅನ್ನು ಮಾತ್ರ ಅತ್ಯಂತ ಹಳೇಯ ಜೈಲುಗಳ ಪೈಕಿ ಒಂದಾದ ಬಳ್ಳಾರಿ ಜೈಲಿಗೆ ಇಂದು ಬುಧವಾರ ಆಗಸ್ಟ್ 28ರಂದು ಮಧ್ಯಾಹ್ನ ಹೊತ್ತಿಗೆ ಸ್ಥಳಾಂತರಿಸುವ ಕಾರ್ಯ ಪೂರ್ಣಗೊಳ್ಳಲಿದೆ. ಈ ಸಂಬಂಧ ಪೊಲೀಸರು, ಜೈಲಾಧಿಕಾರಿಗಳು ಅಗತ್ಯ ತಯಾರಿ ಮಾಡಿಕೊಂಡಿದ್ದಾರೆ. ಅಲ್ಲದೇ ಆರೋಪಿಗಳ ಶಿಫ್ಟ್ ಆಗುತ್ತಿರುವ ಜೈಲುಗಳಲ್ಲಿ ವಿಡಿಯೋ ಕಾನ್ಫ್‌ರೆನ್ಸ್ ಸೌಲಭ್ಯ ಇದೆ. ಇಂದು ನಟ ದರ್ಶನ್ ಮತ್ತಿತರ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯಗೊಳ್ಳಲಿದೆ. ಆರೋಪಿಗಳನ್ನು ಆಯಾ ಜೈಲಿನಿಂದಲೇ ವಿಚಾರಣೆಗೆ ಹಾಜರುಪಡಿಸಲಿದ್ದಾರೆ.
ರಾತ್ರಿಯಿಂದಲೇ ಕಾದು ಕುಳಿತ ಅಭಿಮಾನಿಗಳು
ನಟ ದರ್ಶನ್ ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಅಭಿಮಾನಿಗಳನ್ನು ಸಂಪಾಧಿಸಿದ್ದಾರೆ. ನೆಚ್ಚಿನ ನಟ ಬಳ್ಳಾರಿಗೆ ಬರುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಬಳ್ಳಾರಿ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಅಭಿಮಾನಿಗಳು ಬಳ್ಳಾರಿ ಜೈಲಿನತ್ತ ಆಗಮಿಸಿದ್ದಾರೆ. ಮಂಗಳವಾರ ರಾತ್ರಿಯಿಂದ ಫ್ಯಾನ್ಸ್ ಆಗಮಿಸಿದ್ದಾರೆ. ದರ್ಶನ್ ನೋಡಲು ಕಾದು ಕುಳಿತಿದ್ದಾರೆ.
ಜೈಲಿನ ವಿಶೇಷ ಸೆಲ್‌ನಲ್ಲಿ ನಟ ದರ್ಶನ್
ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್ ಆಗಲಿರುವ ನಟ ದರ್ಶನ್ ಅನ್ನು ವಿಶೇಷ ಬ್ಯಾರೆಕ್ ನಲ್ಲಿ ಇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೈಲಿನ ಅಧಿಕಾರಿಗಳು ಪ್ರತಿ ಹಂತದಲ್ಲೂ ಸೂಕ್ತ ಪರಿಶೀಲನೆ ಮಾಡಿಕೊಂಡಿದ್ದಾರೆ. ವಿಶೇಷ ಸೆಲ್‌ನಲ್ಲಿ ಅಂತಿಮ ಹಂತದ ಪರಿಶೀಲನೆ ಮುಗಿದಿದೆ. ಸಿಸಿ ಕ್ಯಾಮೆರಾ, ಭದ್ರತೆ, ಸ್ಥಳಾಂತರ ಪ್ರಕ್ರಿಯೆ ಎಲ್ಲವನ್ನು ಅಚ್ಚುಕಟ್ಟಾಗಿರುವಂತೆ ನೋಡಿಕೊಳ್ಳಲಾಗಿದೆ.
ನಟ ದರ್ಶನ್ ಜೈಲಿಗೆ ಬರುತ್ತಿದ್ದಂತೆ ವೈದ್ಯಕೀಯ ತಪಾಸಣೆ ನಡೆಸಿ ವರದಿಯನ್ನು ಜೈಲಾಧಿಕಾರಿಗಲಿಗೆ ವೈದ್ಯರು ನೀಡಲಿದ್ದಾರೆ. ದರ್ಶನ್ ವಿಶೇಷ ಸೆಲ್‌ಗೆ ಶಿಫ್ಟ್, ಇನ್ನಿತರ ಆರೋಪಿಗಳು ಬೇರೆ ಬೇರೆ ಜೈಲುಗಳಲ್ಲಿ ಸಾಮಾನ್ಯ ಬ್ಯಾರೆಕ್‌ನಲ್ಲಿ ಇಡಲು ಈಗಾಗಲೇ ವ್ಯವಸ್ಥೆ ಮಾಡಲಾಗಿದೆ.
ಪವಿತ್ರಾಗೌಡ ಸೇರಿ ಹಲವರಿಗೆ ಬೆಂಗಳೂರು ಜೈಲು
ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಅನುಕುಮಾರ್, ದೀಪಕ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಳಿಯಲಿದ್ದಾರೆ ಎಂಬ ಮಾಹಿತಿ ಇದೆ. ಇನ್ನೂ ಪವನ್, ರಾಘವೇಂದ್ರ, ನಂದೀಶ್ ಮೈಸೂರು ಜೈಲಿಗೆ, ಜಗದೀಶ್, ಲಕ್ಷ್ಮಣ್ ಶಿವಮೊಗ್ಗ ಜೈಲು, ಧನರಾಜ್ ಧಾರವಾಡ, ವಿನಯ್ ವಿಜಯಪುರ, ಪ್ರದೂಶ್ ಬೆಳಗಾವಿ, ನಾಗರಾಜ್ ಕಲಬುರಗಿ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ.
ಇಂದು ನಟ ದರ್ಶನ್ ಪ್ರಕರಣ ವಿಚಾರಣೆ
ಕಳೆದ ಎರಡು ವಾರಗಳ ಹಿಂದಷ್ಟೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ 14 ದಿನ ವಿಸ್ತರಣೆ ಮಾಡಿತ್ತು. ಇದೀಗ ಬುಧವಾರ (ಆಗಸ್ಟ್ 28) ನ್ಯಾಯಾಂಗ ಅವಧಿ ಮುಕ್ತಾಯಗೊಂಡಿದ್ದು, ಇಂದು ವಿಚಾರಣೆ ನಡೆಯಲಿದೆ.
ಇಂದು ಬೆಳಗ್ಗೆ 4.30ಕ್ಕೆ ಬೆಂಗಳೂರಿಂದ ಬಳ್ಳಾರಿಗೆ
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಇಂದು ಗುರುವಾರ ಬೆಳಗ್ಗೆ 4.30ಕ್ಕೆ ಪರಪ್ಪನ ಅಗ್ರಹಾರದಿಂದ ದರ್ಶನ್ ಕರೆದುಕೊಂಡು ಹೊರಟ ಪೊಲೀಸರು ನೇರ ಬಳ್ಳಾರಿ ತಲುಪಿದ್ದಾರೆ. ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ನಟ ದರ್ಶನ್ ಪ್ರವೇಶಿಸುತ್ತಿದ್ದ, ನಿಯಮಗಳಂತೆ ವೈದ್ಯಕೀಯ ಪರೀಕ್ಷೆ, ತಪಾಸಣೆ ನಡೆಸಿದ್ದಾರೆ. ಜೈಲಿನ ಸುತ್ತಮುತ್ತ ತೀವ್ರ ಕಟ್ಟೆಚ್ಚರ, ಭದ್ರತೆ ಒದಗಿದಲಾಗಿದೆ. ಬುಧವಾರ ಎಂದು ಹೇಳಿ ಗುರುವಾರ ಬಳ್ಳಾರಿಗೆ ದರ್ಶನ್ ಕರೆತಂದ ಹಿನ್ನೆಲೆಯಲ್ಲಿ ಜೈಲಿನ ಮುಂದೆ ಕಾದು ಕುಳಿತಿದ್ದ ಅವರ ಅಭಿಮಾನಿಗಳಿಗೆ ನಿರಾಸೆಯಾಗಿದೆ.












Click it and Unblock the Notifications