Darshan Thoogudeepa: ಬಳ್ಳಾರಿ ಜೈಲಿಗೆ ಎರಡನೇ ಭಾರಿ ನಟ ದರ್ಶನ್ ಎಂಟ್ರಿ!
ಬೆಂಗಳೂರು, ಆಗಸ್ಟ್ 29: ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಗುರುವಾರ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಿಂದ ಗಣಿ ಜಿಲ್ಲೆ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಂಡಿದ್ದಾರೆ. ರಾಜಧಾನಿ ಜೈಲಿನಲ್ಲಿ ಕಳೆದ ಎರಡು ತಿಂಗಳಿಂದ ಇದ್ದ ನಟ ದರ್ಶನ್‌ಗೆ ರಾಜಾತಿಥ್ಯ ಸಿಗುತ್ತಿದೆ ಎಂಬ ಫೋಟೋ ಆಧಾರದಲ್ಲಿ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಆದರೆ ನಟ ದರ್ಶನ್ ಬಳ್ಳಾರಿ ಜೈಲಿಗೆ ತೆರಳಿರುವುದು ಇದೇ ಮೊದಲಲ್ಲ.
ಹೌದು, ನಟ ದರ್ಶನ್ ಅವರು ಬಳ್ಳಾರಿ ಜೈಲಿಗೆ ತೆರಳಿರುವುದು ಇದೇ ಮೊದಲಲ್ಲ. ಬದಲಾಗಿ ಅವರು ಹಿಂದೊಮ್ಮೆ ಬಳ್ಳಾರಿ ಜೈಲಿಗೆ ತೆರಳಿದ್ದರು. ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಆಗಿರುವ ನಟ ದರ್ಶನ್ 2011ರಲ್ಲಿ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಆರೋಪದಲ್ಲಿ ಜೈಲುವಾಸ ಅನುಭವಿಸಿದ್ದರು. ಇದೆಲ್ಲ ಪ್ರಸಂಗ, ಅಹಿತಕ ಘಟನೆ ಬಳಿಕ ಸಹಜ ಜೀವನ ನಡೆಸುತ್ತಿರುವ ನಟ ದರ್ಶನ್ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

'ಕಾಟೇರ'ದಂತಹ ಹಿಟ್ ಸಿನಿಮಾ ನೀಡಿರುವ ನಿರ್ದೇಶಕ ತರುಣ್ ಸುಧೀರ್ ಅವರು ನಿರ್ದೇಶಿಸಿದ್ದ 'ಚೌಕ' (Chowka film) ಕನ್ನಡ ಸಿನಿಮಾದಲ್ಲಿ ನಟ ದರ್ಶನ್ ನಟಿಸಿದ್ದರು. ಈ ಸಿನಿಮಾ 2017ರಲ್ಲಿ ತೆರೆಕಂಡಿತ್ತು. ಈ ಸಿನಿಮಾದ ನಾಲ್ಕು ನಾಯಕರು ಜೈಲಿನಲ್ಲಿದ್ದಾಗ ಅವರು ಜೈಲಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುವ ಮಾಸ್ ಪಾತ್ರವನ್ನು ದರ್ಶನ್ ನಿರ್ವಹಿಸಿದ್ದರು. ಜೈಲಿನಲ್ಲಿ ಆರೋಪಿಯಾಗಿದ್ದ ನಟ ದರ್ಶನ್ ಚೌಕ ಸಿನಿಮಾ ನಾಯಕರಿಗೆ ಸಹಾಯ ಮಾಡುವ ಸೀನ್ ಗಳನ್ನು ಇದೇ ಬಳ್ಳಾರಿ ಜೈಲಿನಲ್ಲಿಯೇ ಚಿತ್ರೀಕರಿಸಲಾಗಿತ್ತು. ಈ ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕಂಡಿತ್ತು.
ಎರಡನೇ ಭಾರಿಗೆ ಬಳ್ಳಾರಿ ಜೈಲು ದರ್ಶನ
ಈ ಚೌಕ ಸಿನಿಮಾ ಶೂಟಿಂಗ್ ವಿಚಾರವಾಗಿ ನಟ ದರ್ಶನ್ ಅವರು ಅಂದು ಬಳ್ಳಾರಿ ಜೈಲಿಗೆ ಭೇಟಿ ಕೊಟ್ಟಿದ್ದರು. ಇಂದು ನಿಜ ಜೀವನದಲ್ಲಿ ನಡೆದ ರೇಣುಕಾಸ್ವಾಮಿ ಹತ್ಯೆಯ ಆರೋಪ ಹೊತ್ತು ಅವರು ಎರಡನೇ ಬಾರಿಗೆ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿದ್ದ ನಟ ದರ್ಶನ್‌ಗೆ ವಿಶೇಷ ಸೌಲಭ್ಯ ನೀಡಲಾಗಿದೆ. ಆರಾಮಾಗಿ ಅವರು ಓಡಾಡಿಕೊಂಡಿದ್ದಾರೆ ಎಂಬ ಹೇಳುವ ಫೋಟೋಗಳು ವೈರಲ್ ಆಗುತ್ತಿದ್ದಂತೆ ಅವರನ್ನು ಇಂದು ಗುರುವಾರ ಬೆಂಗಳೂರು ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಯಿತು. ಈ ವೇಳೆ ಅವರ ಅಪಾರ ಅಭಿಮಾನಿಗಳು ಜೈಲಿನ ಮುಂದೆ ಕಾದು ಕುಳಿತಿದ್ದರು.












Click it and Unblock the Notifications