ನಟ ದರ್ಶನ್ಗೆ ಮತ್ತೆ ಹಿನ್ನಡೆ! ಜಾಮೀನು ಅರ್ಜಿ ತಿದ್ದುಪಡಿ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪಗೆ ಮತ್ತೊಮ್ಮೆ ಹಿನ್ನಡೆ ಉಂಟಾಗಿದೆ. ಪ್ರಕರಣ ವಿಚಾರಣೆ ಸಂಬಂಧ ಮುಂದಿನ ಒಂದು ವರ್ಷ ಜಾಮೀನಿಗಾಗಿ ಅರ್ಜಿ ಸಲ್ಲಿಸದಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಇದಕ್ಕೆ ತಿದ್ದುಪಡಿ ತಂದು ತಮಗೆ ಜಾಮೀನು ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ. ಈ ಅರ್ಜಿ ವಿಚಾರಣೆಗೆ ಅರ್ಹವಲ್ಲವೆಂದು ನ್ಯಾಯಾಲಯ ತಿಳಿಸಿದೆ.
ರೇಣುಕಾಸ್ವಾಮಿ ಹತ್ಯೆಯ ಪ್ರಕರಣದಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬೆಂಗಳೂರಿನ ಕೇಂದ್ರ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾರೆ. ಈ ಹಿಂದೆ ವೈದ್ಯಕೀಯ ಕಾರಣವೊಡ್ಡಿ ಕೆಲವು ವಾರಗಳ ಕಾಲ ಜೈಲಿನಿಂದ ಹೊರ ಬಂದ ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು. ಬಳಿಕ ಮತ್ತೆ ಅವರು ಕೊರ್ಟ್ ನಿರ್ದೇಶನ ಮೇರೆಗೆ ಜೈಲು ಸೇರಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಕೋರ್ಟ್ನಲ್ಲಿ, ಒಟ್ಟು 60 ಸಾಕ್ಷಿಗಳ ವಿಚಾರಣೆ ತಡವಾಗಬಹುದೆಂದು ದರ್ಶನ್ ಪರ ವಕೀಲರು ವಾದಿಸಿದ್ದರು. ಈ ಸಂಬಂಧ ಜಾಮೀನು ನೀಡುವಂತೆ ಕೋರಿದ್ದರು.

ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವೇನು?
ವಾದ ವಿವಾದ ಆಲಿಸಿದ್ದ ಸುಪ್ರೀಂ ಕೋರ್ಟ್ ವಿಚಾರಣೆಗೆ ಸಹಕರಿಸಬೇಕು. ಮುಂದಿನ ಒಂದು ವರ್ಷದೊಳಗೆ ಎಲ್ಲ ಸಾಕ್ಷಿಗಳ ವಿಚಾರಣೆ ನಡೆಸಲಾಗುತ್ತದೆ. ಒಂದು ವೇಳೆ ಒಂದು ವರ್ಷದಲ್ಲಿ ವಿಚಾರಣೆ ಮುಗಿಯದಿದ್ದ ಪಕ್ಷದಲ್ಲಿ ನಟ ದರ್ಶನ್ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು. ಅಲ್ಲಿಯವರೆಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಸೂಚನೆ ನೀಡಿ ಆದೇಶಿಸಿತು.
ಆದೇಶ ತಿದ್ದುಪಡಿ ಕೋರಿದ್ದ ದರ್ಶನ್ ಅರ್ಜಿ ತಿರಸ್ಕಾರ
ಒಂದು ಕಡೆ ಕೋರ್ಟ್ನಿಂದ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಇನ್ನೊಂದೆಡೆ ನಟ ದರ್ಶನ್ ಜೈಲಿನಲ್ಲಿ ಒಬ್ಬಂಟಿಯಾಗಿ ಇರಲಾರದೇ, ಜೈಲು ಜೀವನ ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿ ಸಹ ಹಬ್ಬಿತ್ತು. ಬಳಿಕ ನಟ ದರ್ಶನ್ ಪರ ವಕೀಲರು ಒಂದು ವರ್ಷದವರೆಗೆ ಜಾಮೀನು ಅರ್ಜಿ ಸಲ್ಲಿಸುವಂತಿಲ್ಲ ಎಂಬ ಕೋರ್ಟ್ ನಿರ್ಧಾರವನ್ನು ತಿದ್ದುಪಡಿ ಮಾಡಿ, ಜಾಮೀನು ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಬೇಕೆಂದು ಕೋರಿ ಮತ್ತೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಸಹ ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ವಿಶೇಷವೆಂದರೆ ಸುಪ್ರೀಂ ಕೊರ್ಟ್ ರಿಜಿಸ್ಟರ್ ಅವರೇ ಅರ್ಜಿ ಸ್ವೀಕರಿಸಿಲ್ಲ ಎನ್ನುವುದು ವಿಶೇಷ. ಈ ಮೂಲಕ ನಟ ದರ್ಶನ್ ಅವರಿಗೆ ಇನ್ನು ಹಲವು ತಿಂಗಳುಗಳ ಕಾಲ ಬೆಂಗಳೂರು ಕೇಂದ್ರ ಪರಪ್ಪನ ಅಗ್ರಹಾರದ ಜೈಲೇ ಗತಿ ಎನ್ನುವಂತಾಗಿದೆ.













Click it and Unblock the Notifications