ಕಾಂತಾರ ಚಿತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ; ನಟ ಚೇತನ್ ವಿರುದ್ಧ ಪ್ರಕರಣ ರದ್ದಿಗೆ ನಕಾರ
ಬೆಂಗಳೂರು. ನ.23: ದೇಶಾದ್ಯಂತ ಗಮನಸೆಳೆದಿರುವ ಸೂಪರ್ ಡೂಪರ್ ಹಿಟ್ ಕಾಂತಾರ ಚಲನಚಿತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಚೇತನ್ ವಿರುದ್ಧದ ಕೇಸ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಇದರಿಂದಾಗಿ ನಟ ಚೇತನ್‌ಗೆ ಭಾರಿ ಮುಖಭಂಗವಾಗಿದ್ದು, ಆತ ತನಿಖೆ ಮತ್ತು ವಿಚಾರಣೆಯನ್ನು ಎದುರಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿದ್ದ ನಟ ಚೇತನ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಎಂ.ಐ. ಅರುಣ್ ಅವರಿದ್ದ ವಿಭಾಗೀಯಪೀಠ ಅರ್ಜಿಯನ್ನ ವಜಾಗೊಳಿಸಿದೆ.
ಪ್ರಕರಣ ಇನ್ನೂ ತನಿಖಾ ಹಂತದಲ್ಲಿರುವುಗಾಲೇ ಕೋರ್ಟ್ ಹಸ್ತಕ್ಷೇಪ ಮಾಡಬಾರದೆಂಬ ಮನವಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ.

ಏನಿದು ಪ್ರಕರಣ: ಭಜರಂಗದ ದಳ ಕಾರ್ಯಕರ್ತ ಶಿವಕುಮಾರ್ ಎಂಬುವರು ಶೇಷಾದ್ರಿಪುರ ಠಾಣೆಯಲ್ಲಿ ದೂರು ನೀಡಿ, ಕಾಂತಾರ ಚಿತ್ರದಲ್ಲಿನ ದೈವದ ಬಗೆಗಿನ ನಂಬಿಕೆ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಚೇತನ್ ಸಮಾಜದಲ್ಲಿ ಅಶಾಂತಿ ಮೂಡಿಸಿದ್ದಾರೆ. ಆ ಆರೋಪ ಹಿನ್ನೆಲೆ ಐಪಿಸಿ ಸೆ.505 ಅಡಿ ಎಫ್‌ಐಆರ್ ದಾಖಳಿಸಿ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದರು.
ನಟ ಚೇತನ್, ಕಾಂತಾರ ಚಿತ್ರದಲ್ಲಿ ದೈವ ಭೂತ ಮತ್ತು ನಂಬಿಕೆ ಕುರಿತು ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿ, ಭೂತ ಮತ್ತು ಕೋಲಾ ದೈವ ನಂಬಿಕೆ ಹಿಂದೂ ಧರ್ಮದಲ್ಲಿಲ್ಲ ಎಂದು ಹೇಳಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಹಲವರು ಇದಕ್ಕೆ ಭಾರಿ ಟೀಕೆಗಳನ್ನು ಮಾಡಿದ್ದರು.
ಚಿತ್ರದ ಬಗ್ಗೆ ಜನರಲ್ಲಿ ಹೆಚ್ಚಿನ ಒಲುವು ಮೂಡುತ್ತಿದ್ದ ಸಮಯದಲ್ಲೇ ಈ ಹೇಳಿಕೆ ಸಿನಿಮಾ ರಂಗದಲ್ಲೂ ಪರ ವಿರೋಧ ಚರ್ಚೆಗೆ ಕಾರಣವಾಗಿತ್ತು.
ಅದರಂತೆ, ಶೇಷಾದ್ರಿಪುರಂ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿರುವಾಗಲೇ ನಟ ಚೇತನ್ ಅದನ್ನು ರದ್ದುಗೊಳಿಸುವಂತೆ ಕೋರಿದ್ದರು. ಆದರೆ ಅರ್ಜಿ ವಜಾಗೊಳಿಸಿ ತನಿಖೆ ಎದುರಿಸುವಂತೆ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.












Click it and Unblock the Notifications