ರಾಜ್ಯದಲ್ಲಿ ಹೆಚ್ಚಾಯ್ತು ಆ್ಯಸಿಡ್ ದಾಳಿ; ಆ್ಯಸಿಡ್ ನಿಷೇಧದ ಕುರಿತು ಗೃಹ ಸಚಿವರು ಏನಂದ್ರು?
ಬೆಂಗಳೂರು, ಮಾರ್ಚ್ 07: ರಾಜ್ಯದಲ್ಲಿ ನಿರಂತರವಾಗಿ ಆ್ಯಸಿಡ್ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆ್ಯಸಿಡ್ ನಿಷೇಧದ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಈ ಕುರಿತು ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ್ಯಸಿಡ್ ದುರ್ಬಳಕೆಯಾಗುತ್ತಿದೆ. ಇದರಿಂದ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಎಲ್ಲರ ಕೈಗೂ ಸುಲಭವಾಗಿ ಆ್ಯಸಿಡ್ ಸಿಗಬಾರದು. ಅಗತ್ಯತೆ ಇರುವರಿಗೆ ಮಾತ್ರ ಸಿಗಬೇಕು. ಈ ಕುರಿತು ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಅವರು, ಇನ್ನೆರಡು ದಿನದಲ್ಲಿ ಸಂಬಂಧಪಟ್ಟ ಇಲಾಖೆ ಹಾಗೂ ಇಂಡಸ್ಟ್ರಿಗಳಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ರಾಮೇಶ್ವರ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಕುರಿತು ಕೆಲವು ಮಹತ್ವದ ಸುಳಿವು ಸಿಕ್ಕಿವೆ. ಘಟನೆಯ ನಂತರ ಬಟ್ಟೆ ಬದಲಾಯಿಸಿಕೊಂಡು, ಬಸ್ಸಿನಲ್ಲಿ ಹೋಗಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಪ್ರಕರಣದ ಎಲ್ಲ ವಿಷಯಗಳನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ. ಆದಷ್ಟು ಶೀಘ್ರ ಆರೋಪಿಯನ್ನು ಹಿಡಿಯಲಾಗುವುದು ಎಂದು ಹೇಳಿದರು.
ಬಾಂಬ್ ಬ್ಲ್ಯಾಸ್ಟ್ ಕೇಸನಲ್ಲಿ ಹಲವರ ಬಂಧನ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಸಿದ ಅವರು, ತನಿಖೆಯಲ್ಲಿ ಹಲವರನ್ನು ಕರೆದು ತನಿಖೆ ನಡೆಸಲಾಗಿದೆ. ಅರೆಸ್ಟ್ ಅಂತ ಯಾವುದು ಆಗಿಲ್ಲ, ಕೆಲವರು ಅರೆಸ್ಟ್ ಅಂತ ತಿಳಿದುಕೊಂಡಿದ್ದಾರೆ. ಕೆಲವು ತನಿಖೆ ಅಂತ ತಿಳ್ಕೊಂಡಿದ್ದಾರೆ, ಸಿಎಂ ಕೂಡ ಅರೆಸ್ಟ್ ಅಂದು ಬಿಟ್ರು. ಅರೆಸ್ಟ್ ಅಂತ ಅಲ್ಲ. ತನಿಖೆ ನಡೆಸುತ್ತಿದ್ದಾರೆ. ಅದು ಮುಂದುವರಿಯುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಚುನಾವಣೆ ಸಮಿತಿ ಸಭೆ ವಿಚಾರವಾಗಿ ಮಾತನಾಡಿ, ನಮ್ಮಲ್ಲಿ ಎರಡು ಸಭೆ ಆಗಿದೆ. ಉಸ್ತುವಾರಿ ಸುರ್ಜೆವಾಲ ಹಾಗೇ ಸ್ಕ್ರಿನಿಂಗ್ ಕಮಿಟಿ ಸಭೆ ಆಗಿದೆ, ಇಂದು ನಾಳೆ ಅಂತಿಮಗೊಳಿಸುತ್ತಾರೆ. ಅದು ದೆಹಲಿಯಲ್ಲಿ ಸೆಂಟ್ರಲ್ ಇಲೆಕ್ಷನ್ ಕಮಿಟಿಗೆ ಹೋಗುತ್ತದೆ. ಎಐಸಿಸಿ ಅಧ್ಯಕ್ಷರು ಸೇರಿ 16 ಜನ ಇದ್ದಾರೆ, ನಮ್ಮ ರಾಜ್ಯದಿಂದ ಜಾರ್ಜ್ ಅವರು ಇದ್ದಾರೆ. ಖರ್ಗೆ ಅದ್ಯಕ್ಷರು ಆಗಿರೋದ್ರಿಂದ ಸುಲಭ, ಒಂದೇ ಪಟ್ಟಿಯಲ್ಲಿ ಎಲ್ಲಾ ಬಿಡುಗಡೆ ಮಾಡ್ತಾರೆ ಅಂತ ಹೇಳ್ತಾ ಇದ್ರು. ಬೇರೆ ಪಕ್ಷದಿಂದ ಬರುವವರು ಇದ್ದಾರೆ. ಹೀಗಾಗಿ ಸ್ವಲ್ಪ ತಡ ಮಾಡಬಹುದು ಎಂದು ತಿಳಿಸಿದರು.












Click it and Unblock the Notifications