ಭ್ರಷ್ಟಾಚಾರದಲ್ಲಿ ತೊಡಗಿದ್ದ ಅಧಿಕಾರಿಗಳ ಮೇಲೆ ಎಸಿಬಿ ದಾಳಿ
ಬೆಳಗಾವಿ/ವಿಜಯಪುರ, ಮಾರ್ಚ್. 07 : ಭ್ರಷ್ಟಾಚಾರದಲ್ಲಿ ತೊಡಗಿದ್ದ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಯ ಇಬ್ಬರು ಸರ್ಕಾರಿ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು(ಎಸಿಬಿ) ದಾಳಿ ಮಾಡಿದ್ದಾರೆ.
ಜಮೀನಿನ ಖಾತೆಯ ಹಕ್ಕು ಬದಲಾವಣೆಗೆ ರೈತನಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ಗ್ರಾಮಲೆಕ್ಕಿಗ ಸಿದ್ದಾರ್ಥ ಬೋಪಾಲ್ ಸಿಂಗಾಡೇ ಮತ್ತು ಅಸಿಸ್ಟೆಂಟ್ ಜಕ್ರುದ್ದಿನ್ ಎಂ ಪಟೇಲ್ ಅವರು 4 ಸಾವಿರ ರು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ಗ್ರಾಮದ ರೈತರೊಬ್ಬರು ತಮ್ಮ 2 ಜಮೀನಿನ ಖಾತೆಯ ಹಕ್ಕು ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಮಾಡಿಕೊಡಲು ಹಿರೇಕೋಡಿಯ ಗ್ರಾಮಲೆಕ್ಕಿಗ ಸಿದ್ದಾರ್ಥ ಬೋಪಾಲ್ ಸಿಂಗಾಡೇ 4 ಸಾವಿರ ರು ಲಂಚದ ಬೇಡಿಕೆ ಇಟ್ಟಿದ್ದ.
ಈ ಬಗ್ಗೆ ಅರ್ಜಿದಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ. ರೈತ ನೀಡಿದ ದೂರಿನ ಮೇರೆಗೆ ಮಾರ್ಚ್ 07ರಂದು ಎಸಿಬಿ ಅಧಿಕಾರಿಗಳು ಗ್ರಾಮಲೆಕ್ಕಿಗನ ಕಚೇರಿ ಬಳಿ ಹೋಗಿದ್ದಾರೆ. ಈ ವೇಳೆ ಸಿದ್ದಾರ್ಥ ಬೋಪಾಲ್ ಸಿಂಗಾಡೇ ರೈತನಿಂದ 4 ಸಾವಿರ ರು ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-50 ಝಳಕಿ ಚೆಕ್ ಪೋಸ್ಟ್ ಬಳಿ ಸಂಚರಿಸುವ ಖಾಸಗಿ ಲಾರಿಗಳು ಮತ್ತು ಇತರೆ ಭಾರಿ ಸರಕು ವಾಹನಗಳನ್ನು ತಪಾಸಣೆಗೊಳಪಡಿಸಿ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದ ಹಿರಿಯ ಮೋಟಾರ್ ವಾಹನ ನಿರೀಕ್ಷಕ ಮೊಹವದ್ ಇಜಾಜ್, ಎಫ್ ಡಿಎ ಉದ್ಯೋಗಿ ಮುತ್ತುರಾಜ, ಅಪ್ಪಾ ಸಾಹೇಬ್, ಹನುಮಂತ ಭೋಜನಾಯಕ್ ದಲಾಯತ್ ಮತ್ತು ಮಧ್ಯವರ್ತಿ ಪ್ರಕಾಶ ಚಂದ್ರಪ್ಪ ಕೋಳಿ ಎನ್ನುವರು ಎಸಿಬಿ ಬಲೆಗೆ ಬಿದಿದ್ದಾರೆ.
ದಾಳಿ ನಡೆದ ಸಂದರ್ಭದಲ್ಲಿ ಲೆಕ್ಕಕ್ಕೆ ಸಿಗದ 38,889 ರು ಮೊತ್ತವನ್ನು ಅಕ್ರಮವಾಗಿ ಸಂಗ್ರಹಿಸಿರುವುದು ಕಂಡುಬಂದಿರುತ್ತದೆ. ಇದನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆ-1988 ರ ಅಡಿಯಲ್ಲಿ ಪ್ರಕರಣ ಎಸಿಬಿ ವಿಜಯಪುರ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ಮುಂದುವರೆದಿದೆ.













Click it and Unblock the Notifications