ಬೆಂಗಳೂರು ವಿಶ್ವವಿದ್ಯಾಲಯ ಎದುರು ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್
ಬೆಂಗಳೂರು, ಜ. 31 : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ABVP) ನ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ವೇಳೆ ಪ್ರೇಮಶ್ರೀ ಎಂಬುವರ ತಲೆಗೆ ತೀವ್ರ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಇಪ್ಪತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ ಬೆಂಗಳೂರು ವಿಶ್ವ ವಿದ್ಯಾಲಯದ ಆಡಳಿತ ಕಚೇರಿಗೆ ನೂರಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿರುವ ಪೊಲೀಸರ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ: ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಸರಿಯಾಗಿ ಮೌಲ್ಯಮಾಪನ ಮಾಡುತ್ತಿಲ್ಲ. ಕಾಲಕ್ಕೆ ತಕ್ಕಂತೆ ಅಂಕಪಟ್ಟಿಗಳನ್ನು ನೀಡುತ್ತಿಲ್ಲ. ಬೆಂಗಳೂರು ವಿವಿಯ ಆಡಳಿತ ನೀತಿ ಹದಗೆಟ್ಟಿದ್ದು, ಅದನ್ನು ಸರಿ ಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಮನವಿ ನೀಡಲು ಎಬಿವಿಪಿ ನೂರಾರು ಕಾರ್ಯಕರ್ತರು ಬೆಂಗಳೂರು ವಿವಿ ಬಳಿ ತೆರಳಿದ್ದರು. ಉಪ ಕುಲಪತಿ ವೇಣುಗೋಪಾಲ್ ಅವರಿಗ ಮನವಿ ನೀಡಿ ತೆರಳಲು ಮುಂದಾಗಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ತಡೆದಿದ್ದಾರೆ. ಬೆಂಗಳೂರು ವಿವಿಯೊಳಗೆ ಪ್ರವೇಶವಿಲ್ಲ. ಹೀಗಾಗಿ ಮನವಿ ನೀಡಲು ಅವಕಾಶ ಕೊಡಲ್ಲ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಇದರಿಂದ ಬೇಸರಗೊಂಡ ವಿದ್ಯಾರ್ಥಿಗಳು ಉಪ ಕುಲಪತಿ ವೇಣುಗೋಪಾಲ್ ಅವರೇ ಸ್ಥಳಕ್ಕೆ ಬರಬೇಕು. ನಮ್ಮ ಬೇಡಿಕೆ ಈಡೇರಿಕೆ ಸಂಬಂಧ ಆಶ್ವಾಸನೆ ನೀಡಬೇಕು ಎಂದು ಆಗ್ರಹಿಸಿ ಆಡಳಿತ ಕಚೇರಿ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ. ಈ ವೇಳೆ ಪೊಲೀಸರ ಹಾಗೂ ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ಪೊಲೀಸರು ಲಾಠಿ ಬೀಸಿದ್ದಾರೆ.
ಈ ವೇಳೆ ಪ್ರೇಮಶ್ರೀ ಎಂಬ ಯುವತಿಗೆ ತಲೆಗೆ ತೀವ್ರ ಪೆಟ್ಟಾಗಿ ರಕ್ತ ಸುರಿದಿದೆ. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಂಡಿದ್ದಾರೆ. ಯಾವುದೇ ರೀತಿಯ ಪ್ರಾಣಾಪಾಯವಿಲ್ಲ. ಲಾಠಿ ಚಾರ್ಜ್ ವೇಳೆ, ಇಪ್ಪತ್ತಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎನ್ನಲಾಗಿದೆ.

ಪ್ರತಿಭಟನೆ ಕುರಿತು ಒನ್ಇಂಡಿಯಾ ಕನ್ನಡಕ್ಕೆ ಸ್ಪಷ್ಟನೆ ನೀಡಿದ ಎಬಿವಿಪಿ ಸಂಘಟನೆ ಮುಖಂಡ ಗಗನ್, ವಿವಿಧ ಬೇಡಿಕೆ ಈಡೇರಿಸುವಂತೆ ವಿಸಿಗೆ ಮನವಿ ನೀಡಲು ತೆರಳಿದ್ದೆವು. ನಮಗೆ ಆಡಳಿತ ಕಚೇರಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಕಚೇರಿ ಎದುರು ಕೂತು ಶಾಂತಿಯುತ ಪ್ರತಿಭಟನೆ ಮಾಡುವಾಗ, ಪಿಜಿ ವಿದ್ಯಾರ್ಥಿಗಳು ಕೂಡ ನಮ್ಮೊಂದಿಗೆ ಸೇರಿ ಪ್ರತಿಭಟನೆ ಆರಂಭಿಸಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು ಹಲವರಿಗೆ ಗಾಯಗಳಾಗಿವೆ. ವಿದ್ಯಾರ್ಥಿಗಳು ಅನೇಕ ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದು, ಅವನ್ನು ಸರಿ ಪಡಿಸುವುದಂತೆ ಮನವಿ ನೀಡುವುದೇ ತಪ್ಪೇ ಎಂದು ಗಗನ್ ಪ್ರಶ್ನೆ ಮಾಡಿದರು.
Recommended Video
ಎಬಿವಿಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಬಿವಿಪಿ ಕಾರ್ಯಕರ್ತರು ಗಾಯಗೊಂಡಿದ್ದು, ಪೊಲೀಸರ ಹಲ್ಲೆ ಖಂಡಿಸಿ ಪ್ರತಿಭಟನೆಗೆ ಇಳಿಯಲು ತೀರ್ಮಾನಿಸಿದ್ದಾರೆ.












Click it and Unblock the Notifications