ಯುವತಿ ಜೊತೆಗಿನ ಅಶ್ಲೀಲ ವಿಡಿಯೋ ವೈರಲ್: ತೀರ್ಥಹಳ್ಳಿ ಎಬಿವಿಪಿ ಅಧ್ಯಕ್ಷ ಅಂದರ್!
ಬೆಂಗಳೂರು: ಮಲೆನಾಡಿನ ಹೆಬ್ಬಾಗಿಲು ಎಂಬ ಕೀರ್ತಿಗೆ ಪಾತ್ರವಾದ ಶಿವಮೊಗ್ಗದಲ್ಲಿ ಅಶ್ಲೀಲ ವಿಡಿಯೋ ಕೇಸ್ ಭಾರಿ ಸದ್ದು ಮಾಡುತ್ತಿದೆ. ಕೆಲ ದಿನಗಳಿಂದ ಇದೇ ವಿಚಾರ ಶಿವಮೊಗ್ಗದಲ್ಲಿ ಭಾರಿ ಗೊಂದಲ ಸೃಷ್ಟಿ ಮಾಡಿತ್ತು. ಈಗ ಪೊಲೀಸರು ಕ್ರಮಕೈಗೊಂಡು, ಯುವತಿ ಜೊತೆಗಿನ ಅಶ್ಲೀಲ ವಿಡಿಯೋ ವೈರಲ್ ಆಗಿರುವ ಪ್ರಕರಣ ಸಂಬಂಧ ತೀರ್ಥಹಳ್ಳಿ ಎಬಿವಿಪಿ ಅಧ್ಯಕ್ಷನನ್ನ ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಪ್ರತಿಷ್ಠಿತ ಕಾಲೇಜಿನ ಯುವಕ & ಯುವತಿಯ ಕಾಮದಾಟ ವಿಡಿಯೋ ವೈರಲ್ ಆಗಿತ್ತು. ಯುತಿಯರ ಜೊತೆ ನಗ್ನ ವಿಡಿಯೋ ಕಾಲ್ ಮಾಡಿ ರೆಕಾರ್ಡ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿರುವ ಬಗ್ಗೆ ಯುವಕನ ವಿರುದ್ಧ ಆರೋಪ ಕೇಳಿ ಬಂದಿತ್ತು. ಅಲ್ಲದೆ ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಗಂಭೀರ ಆರೋಪವೂ ಇತ್ತು. ಈ ಕುರಿತು ಆರೋಪಿ ಬಂಧನಕ್ಕೆ ಎನ್‌ಎಸ್‌ಯುಐ ಒತ್ತಾಯಿಸಿತ್ತು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಎಬಿವಿಪಿ ಅಧ್ಯಕ್ಷ ಪ್ರತಿಗೌಡ ಎಂಬಾತನ ವಿರುದ್ಧ ಈ ಬಗ್ಗೆ ತೀರ್ಥಹಳ್ಳಿ ಡಿವೈಎಸ್‌ಪಿಗೆ NSUI ಸಂಘಟನೆ ವತಿಯಿಂದ ದೂರು ನೀಡಲಾಗಿತ್ತು.

ಅಶ್ಲೀಲ ವಿಡಿಯೋ ಆರೋಪಿ ಅಂದರ್
ಹೀಗೆ ಅಶ್ಲೀಲ ವಿಡಿಯೋ ಕೇಸ್ ಭಾರಿ ಸದ್ದು ಮಾಡುತ್ತಿದ್ದಂತೆ ಅಲರ್ಟ್ ಆದ ಶಿವಮೊಗ್ಗ ಪೊಲೀಸರು, ಆರೋಪಿಯನ್ನ ಲಾಕ್ ಮಾಡಿದ್ದಾರೆ. ಹಾಗೇ ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ವಿದ್ಯಾರ್ಥಿ ಮುಖಂಡ ಹಾಗೂ ಬಿಜೆಪಿ ಕಾರ್ಯಕರ್ತನ ಕರ್ಮಕಾಂಡ ಬಯಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಬಂಧಿತ ಈ ಆರೋಪಿ ತೀರ್ಥಹಳ್ಳಿಯ ಕಾಲೇಜಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿ ಸಂಘಟನೆಯೊಂದರಲ್ಲಿ (ಎಬಿವಿಪಿ) ತೊಡಗಿಸಿಕೊಂಡಿದ್ದ. ಕೆಲವು ಯುವತಿಯರ ಜೊತೆ ಈತ ಸಲುಗೆಯಿಂದ ಇರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ ಎಂಬ ಆರೋಪ ಕೇಳಿಬಂದಿತ್ತು.
ಆರೋಪಿ ತನ್ನ ಸೋಷಿಯಲ್ ಮೀಡಿಯಾ ಪ್ರೊಫೈಲ್‌ನಲ್ಲಿ ಕಠೋರ ಹಿಂದೂ, ಗಾಂಚಾಲಿ, ಧರ್ಮೋ ರಕ್ಷತಿ ರಕ್ಷಿತಃ, ಒಕ್ಕಲಿಗ ಹಾಗೂ ಎಬಿವಿಪಿಯನ್ ಎಂದು ಬರೆದುಕೊಂಡಿರುವುದು ಕಂಡುಬಂದಿದೆ. ಇನ್ನು ಈ ಘಟನೆ ವಿಕೋಪಕ್ಕೆ ಹೋಗುತ್ತಿರುವುದು ಶಿವಮೊಗ್ಗ ಪೊಲೀಸರ ಗಮನಕ್ಕೂ ಬಂದಿತ್ತು. ತಕ್ಷಣ ಅಲರ್ಟ್ ಆಗಿ ಆರೋಪಿ ಬಂಧಿಸಲಾಗಿದೆ. ವಿಚಾರಣೆಯನ್ನ ನಡೆಸುತ್ತಿರುವ ಪೊಲೀಸರು, ಇನ್ನಷ್ಟು ನಗ್ನ ಸತ್ಯಗಳನ್ನ ಹೊರತೆಗೆಯುವ ಸಾಧ್ಯತೆ ಇದೆ. ಹಾಗೇ ಈ ಪ್ರಕರಣದ ಹಿನ್ನೆಲೆ ಪೊಲೀಸರು ಎಚ್ಚರಿಕೆಯ ಸಂದೇಶ ಕೂಡ ರವಾನಿಸಿದ್ದಾರೆ. ಮತ್ತೊಂದ್ಕಡೆ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ. ಶಿವಮೊಗ್ಗದ ವಿದ್ಯಾರ್ಥಿಗಳ ಪೋಷಕರು ಕೂಡ ಈ ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ.












Click it and Unblock the Notifications