
ಶಾಲಾ ಮಕ್ಕಳಿಗೆ 'ಗಂಧದಗುಡಿ' ಉಚಿತವಾಗಿ ತೋರಿಸಿ: AAP
ಬೆಂಗಳೂರು, ಅಕ್ಟೋಬರ್ 30: ಕರ್ನಾಟಕ ರತ್ನ ದಿ. ಡಾ. ಪುನೀತ್ ರಾಜ್ ಕುಮಾರ್ ಅವರನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮದ ಶಾಶ್ವತ ರಾಯಭಾರಿ ಎಂದು ಘೋಷಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಒತ್ತಾಯಿಸಿದೆ.
ಬೆಂಗಳೂರಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಆಮ್ ಆದ್ಮಿ ಪಕ್ಷ (ಎಎಪಿ)ದ ನಗರಾಧ್ಯಕ್ಷ ಮೋಹನ್ ದಾಸರಿ, ಕರ್ನಾಟಕ ರಾಜ್ಯ ಸರ್ಕಾರವು ಜನಮಾನದಲ್ಲಿ ಹಸಿರಾಗಿರುವ ನಟ ದಿ. ಡಾ.ಪುನೀತ್ ರಾಜ್ ಕುಮಾರ್ ಅವರನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಶಾಶ್ವತ ರಾಯಭಾರಿಯನ್ನಾಗಿ ಘೋಷಿಸಬೇಕು. ಅಲ್ಲದೇ ಪ್ರವಾಸೋದ್ಯಮದ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು.
ಅಪ್ಪು ಜೀವನ ಕಥೆಯನ್ನು ಪಠ್ಯಕ್ಕೆ ಸೇರಿಸುವಂತೆ ಸಿಎಂಗೆ ಪತ್ರ ಬರೆದ ಪುನೀತ್ ಅಭಿಮಾನಿ
ಜೊತೆಗೆ ರಾಜ್ಯದಲ್ಲಿನ ಶಾಲಾ ಮಕ್ಕಳಿಗೆ ಉಚಿತವಾಗಿ ಪುನೀತ್ ರಾಜ್ ಕುಮಾರ್ ಅವರ ಕನಸಾದ ಕೊನೆಯ ಸಾಕ್ಷ್ಯಚಿತ್ರ 'ಗಂಧದಗುಡಿ' ಯ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನಿರ್ಲಕ್ಷ್ಯಕ್ಕೆ ಒಳಗಾದ ಪ್ರವಾಸೋದ್ಯಮ
ರಾಜ್ಯದ ಪ್ರವಾಸೋದ್ಯಮವು ಕಳೆದ ಹತ್ತಾರು ವರ್ಷಗಳಲ್ಲಿ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಬಹತೇಕ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯಗಳ ಕೊರೆತೆಯಿದೆ. ಸಮರ್ಪಕವಾಗಿ ನಿರ್ವಹಣೆ, ಅಭಿವೃದ್ಧಿ ಕಂಡಿಲ್ಲ. ಸರ್ಕಾರ ಸಹ ಕರ್ನಾಟಕದ ಪ್ರವಾಸಿ ತಾಣಗಳಿಗೆ ಜನರನ್ನು ಆಕರ್ಷಿಸಲು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.
ನಟ ಪುನೀತ್ ರಾಜ್ ಕುಮಾರ್ ಅವರಿಗೆ ಪ್ರವಾಸಿ ತಾಣಗಳ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ಇದ್ದಿದ್ದರಿಂದ, ಅವರನ್ನು ಪ್ರವಾಸೋದ್ಯಮದ ಶಾಶ್ವತ ರಾಯಭಾರಿಯಾಗಿ ಘೋಷಿಸಬೇಕು. ಅಪ್ಪು ಅವರ ಸ್ಮರಣಾರ್ಥ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾಲಕ್ಕೆ ತಕ್ಕಂತಹ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಅವರು ಮನವಿ ಮಾಡಿದರು.

ಮಕ್ಕಳಲ್ಲಿ ವಜ್ಯಜೀವ, ಕಾಡಿನ ಬಗ್ಗೆ ಜ್ಞಾನ ಹೆಚ್ಚಾಗಲಿ
ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ 'ಗಂಧದಗುಡಿ' ವನ್ಯಜೀವಿ ಸಂಪತ್ತಿನ ರಕ್ಷಣೆ, ಪರಿಸರ ಕಾಳಜಿ, ಮನುಷ್ಯರ ಆದ್ಯ ಕರ್ತವ್ಯ ಕುರಿತು ಅನೇಕ ಅಂಶಗಳನ್ನು ಹೊಂದಿದೆ. ಭವಿಷ್ಯದ ಪ್ರಜೆಯಾಗಿರುವ ನವ ಪೀಳಿಗೆಯು ಈ ವಿಶೇಷವಾದ ಸಿನಿಮಾವನ್ನು ನೋಡಬೇಕಿದೆ. ಗಂಧದ ಗುಡಿ ವೀಕ್ಷಣೆಯಿಂದ ಮಕ್ಕಳಲ್ಲಿ ಕಾಡು ಹಾಗೂ ವನ್ಯಜೀವಿಗಳ ಮೇಲೆ ಬಗ್ಗೆ ಜ್ಞಾನ ಹೆಚ್ಚಾಗುತ್ತದೆ. ಆದ್ದರಿಂದ ಶಾಲಾ ಮಕ್ಕಳಿಗೆ 'ಗಂಧದಗುಡಿ' ಸಿನಿಮಾವನ್ನು ಉಚಿತವಾಗಿ ತೋರಿಸಲು ಸರ್ಕಾರ ವ್ಯವಸ್ಥೆ ಕಲ್ಪಿಸಬೇಕು. ಆಗ ಮಾತ್ರ ನಟ ಪುನೀತ್ ರಾಜ್‌ಕುಮಾರ್ ಹಾಗೂ ಚಿತ್ರ ತಂಡದ ಶ್ರಮ ಸಾರ್ಥಕವಾಗುತ್ತದೆ ಎಂದು ವಿವರಿಸಿದರು.