ಪಡಿತರ ಪಡೆಯಲು ಆಧಾರ್ ಕಡ್ಡಾಯವಲ್ಲ : ಯು.ಟಿ.ಖಾದರ್
ಬೆಂಗಳೂರು, ಅಕ್ಟೋಬರ್ 30 : 'ಪಡಿತರ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ. ಹೊಸ ರೇಷನ್ ಕಾರ್ಡ್ ಮಾಡಿಸಲು ಮಾತ್ರ ಆಧಾರ್ ಕಡ್ಡಾಯ' ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದರು.
ವಿಕಾಸಸೌಧದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, 'ಪಡಿತರ ವಿತರಣೆಗೆ ಆಧಾರ್ ಲಿಂಕ್ ಬೇಕಾಗಿಲ್ಲ. ಆಧಾರ್ ಕಾರ್ಡ್ ಇಲ್ಲವೆಂದ ಕಾರಣಕ್ಕೆ ಪಡಿತರ ನೀಡಬಾರದು ಎಂಬ ನಿಯಮವಿಲ್ಲ. ಡೇಟಾ ಪ್ರಕಾರ ಎಲ್ಲರಿಗೂ ಪಡಿತರ ನೀಡಬೇಕು' ಎಂದರು.

'ರಾಜ್ಯದಲ್ಲಿ 20,342 ರೇಷನ್ ಅಂಗಡಿಗಳಿವೆ. 1 ಕೋಟಿ 8 ಲಕ್ಷ ಕಾರ್ಡ್ ದಾರರಿಗೆ ಬಾರ್ ಕೋಡ್ ವಿತರಣೆಯಾಗಿದೆ. ಮುಂದಿನ 2-3 ತಿಂಗಳಿನಲ್ಲಿ ಎಲ್ಲರಿಗೂ ಬಾರ್ ಕೋಡ್ ವಿತರಿಸುತ್ತೇವೆ. ಬಾರ್ ಕೋಡ್ ಬೇಕಾದರೆ ದೂರವಾಣಿ ಸಂಖ್ಯೆ ಕಡ್ಡಾಯವಾಗಿ ಇರಬೇಕು' ಎಂದು ತಿಳಿಸಿದರು.
ಸಾಂವಿಧಾನಿಕ ಪೀಠ ರಚನೆ : ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಲು ಸಾಂವಿಧಾನಿಕ ಪೀಠ ರಚನೆಗೆ ಸುಪ್ರೀಂಕೋರ್ಟ್ ಮುಂದಾಗಿದೆ. ಆಧಾರ್ ವಿರೋಧಿಸಿರುವ ಅರ್ಜಿಗಳ ವಿಚಾರಣೆಯು ನವೆಂಬರ್ ಕೊನೆಯ ವಾರದಲ್ಲಿ ಸಾಂವಿಧಾನಿಕ ಪೀಠದಲ್ಲಿ ಆರಂಭವಾಗಲಿದೆ.












Click it and Unblock the Notifications