ಬೆಂಗಳೂರಿನಲ್ಲಿ ನ. 1ರಿಂದ ಆಧಾರ್ ಗ್ಯಾಸ್ ವಿತರಣೆ

ಆದರೆ ಸರಕಾರಿ ಯೋಜನೆಗಳನ್ನು ಜಾರಿಗೊಳಿಸಲು ಆಧಾರ್ ಕಾರ್ಡ್ ಕಡ್ಡಾಯ ಮಾಡಬೇಡಿ. ಅಸಲಿಗೆ ಆಧಾರ್ ಕಾರ್ಡ್ ಬಗ್ಗೆಯೇ ತನಗೆ ಅನುಮಾನಗಳಿವೆ' ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿರುವುದರ ಸಮ್ಮುಖದಲ್ಲಿ ಮತ್ತು ಖುದ್ದು ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಅವರೇ ಸುಪ್ರೀಂ ಕೋರ್ಟಿನ ಮಧ್ಯಂತರ ಆದೇಶವನ್ನು ಶಿರಸಾವಹಿಸಿ ಪಾಲಿಸುವುದಾಗಿ ಹೇಳಿರುವಾಗ ಆಧಾರ್ ಕಾರ್ಡ್ ಆಧಾರಿತ ಅಡುಗೆ ಅನಿಲ ವಿತರಣೆ ಬಗ್ಗೆ ಸಹಜವಾಗಿಯೇ ಗೊಂದಲಗಳು ಮೂಡಿವೆ.
ಆಧಾರ್ ದರ್ಬಾರ್ ಶುರು: ಗಮನಾರ್ಹವೆಂದರೆ ಬೆಂಗಳೂರಿನಲ್ಲಿ ಬಹುತೇಕ ಅಡುಗೆ ಅನಿಲ ವಿತರಣೆ ಸಂಸ್ಥೆಗಳು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಗೊಂಡಿದ್ದು, ಆಧಾರ್ ಕಾರ್ಡ್ ಹೊಂದಿರುವ ತನ್ನ ಗ್ರಾಹಕರಿಗೆ ಮಣೆ ಹಾಕಿ ಅವರವರ ಆಧಾರ್ ಸಂಖ್ಯೆಯನ್ನು ಅಡುಗೆ ಅನಿಲ ಖಾತೆಗೆ Link ಮಾಡಿಕೊಳ್ಳುವ ಕಾರ್ಯವನ್ನು ಪೂರ್ತಿಗೊಳಿಸಿದೆ.
State-level Bankers' Committee (SLBC):
ನಿನ್ನೆ ಬೆಂಗಳೂರಿನಲ್ಲಿ ನಡೆದ 125ನೇ ರಾಜ್ಯ ಮಟ್ಟದ ಬ್ಯಾಂಕರ್ಸ್ ಕಮಿಟಿಯ ಸಭೆಯಲ್ಲಿಯೂ ಈ ಬಗ್ಗೆ ನಿರ್ಣಯ ಹೊರಬಿದ್ದಿದೆ. ಅಡುಗೆ ಅನಿಲ ಸಬ್ಸಿಡಿಗೆ ಆಧಾರ್ ಆಧಾರಿತ ನೇರ ನಗದು ವರ್ಗಾವಣೆ ವ್ಯವಸ್ಥೆಯನ್ನು (ಡಿಬಿಟಿ) ಕೇಂದ್ರದ ಮಾರ್ಗಸೂಚಿಯಂತೆ ರಾಜ್ಯದ 21 ಜಿಲ್ಲೆಗಳಲ್ಲಿ ಆರಂಭಿಸಲು ರಾಜ್ಯ ಸರ್ಕಾರ ಹಾಗೂ ಬ್ಯಾಂಕ್ ಗಳು ನಿರ್ಧರಿಸಿವೆ!
ರಾಜ್ಯೋತ್ಸವದ ಕೊಡುಗೆ: ಮಾರ್ಗಸೂಚಿಯಂತೆ ನವೆಂಬರ್ 1 ಹಾಗೂ 2014ರ ಜನವರಿ 1ರಿಂದ ನಗದು ವರ್ಗಾವಣೆ ವ್ಯವಸ್ಥೆ ಆರಂಭಿಸಲಾಗುತ್ತದೆ (Aadhaar-based Direct Benefit Transfer of LPG - DBTL scheme) ಎಂದು ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಕುಮಾರ್ ಜೈನ್ ಸ್ಪಷ್ಟವಾಗಿ ಹೇಳಿದ್ದಾರೆ.
ಯೋಜನೆ ಯಾವೆಲ್ಲಾ ಜಿಲ್ಲೆಗಳಲ್ಲಿ ಜಾರಿ?: ಹಾವೇರಿ, ಬೆಂಗಳೂರು ನಗರ, ಕೊಪ್ಪಳ, ಬೀದರ್, ದಾವಣಗೆರೆ ಹಾಗೂ ಬಿಜಾಪುರ ಜಿಲ್ಲೆಗಳಲ್ಲಿ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಡಿಬಿಟಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಚಿಕ್ಕಬಳ್ಳಾಪುರ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಚಿಕ್ಕಮಗಳೂರು, ಗುಲ್ಬರ್ಗಾ, ದಕ್ಷಿಣ ಕನ್ನಡ, ಕೊಡಗು, ಬಳ್ಳಾರಿ, ಕೋಲಾರ, ರಾಮನಗರ ಹಾಗೂ ಚಾಮರಾಜನಗರದಲ್ಲಿ 2014ರ ಜನವರಿ 1ರಿಂದ ಯೋಜನೆ ಪ್ರಾರಂಭವಾಗಲಿದೆ.
ಮೈಸೂರು, ತುಮಕೂರು, ಧಾರವಾಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನವಾಗಿದ್ದು, ಅಡುಗೆ ಅನಿಲ (ಎಲ್‌ಪಿಜಿ) ಸಬ್ಸಿಡಿ ಮೊತ್ತ ಗ್ರಾಹಕರ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಈ ಯೋಜನೆಯ ಪ್ರಯೋಜನ ಪಡೆಯಲು ಎಲ್‌ಪಿಜಿ ಗ್ರಾಹಕರು ಬ್ಯಾಂಕ್ ಖಾತೆ ಹೊಂದಿಬೇಕು.
ತೈಲ ಕಂಪನಿಗಳು ಮತ್ತು ಎಲ್ ಪಿಜಿ ವಿತರಕ ಏಜೆನ್ಸಿಗಳು ಡಿಬಿಟಿ ವ್ಯವಸ್ಥೆಯ ಗ್ರಾಹಕರ ಮಾಹಿತಿಯನ್ನು ಪಡೆಯುತ್ತಾರೆ. ಪ್ರಥಮ ಹಂತದಲ್ಲಿ ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಕ್ರಮವಾಗಿ ಶೇ.65 ಹಾಗೂ ಶೇ.63ರಷ್ಟು ಎಲ್‌ಪಿಜಿ ಗ್ರಾಹಕರು ಆಧಾರ್ ಸಂಖ್ಯೆಯನ್ನು ತಮ್ಮ ಖಾತೆಯೊಂದಿಗೆ ಸಂಪರ್ಕಿಸಿದ್ದಾರೆ ಎಂದು ಜೈನ್ ಹೇಳಿದ್ದಾರೆ.
ಜಿಲ್ಲಾಡಳಿತಗಳಿಗೆ ಹೊಣೆಗಾರಿಕೆ: ಜಿಲ್ಲಾ ಆಡಳಿತದ ಸಹಕಾರದೊಂದಿಗೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅಳವಡಿಸಲಾಗುತ್ತಿದೆ. ಕೇಂದ್ರದ 26 ಯೋಜನೆಗಳ ಪಟ್ಟಿ ಇದರಲ್ಲಿದೆ. ನೇರ ನಗದು ವರ್ಗಾವಣೆಗೆ ಒಳಪಡುವ ಯೋಜನೆಗಳ ಪಟ್ಟಿಯನ್ನು ಎಲ್ಲ ಬ್ಯಾಂಕ್ ಗಳಿಗೆ ಕಳುಹಿಸಿಕೊಡಲಾಗಿದೆ.












Click it and Unblock the Notifications