ಚಿಕ್ಕಮಗಳೂರು: ಕಾಲುಜಾರಿ ಭದ್ರಾ ನದಿಗೆ ಬಿದ್ದು ಯುವಕ ಸಾವು
ಚಿಕ್ಕಮಗಳೂರು, ಜುಲೈ 27: ಪ್ರವಾಸಕ್ಕೆಂದು ಗೆಳೆಯರ ತಂಡದೊಂದಿಗೆ ಬಂದಿದ್ದ ಯುವಕನೋರ್ವ ಕಾಲುಜಾರಿ ಭದ್ರಾ ನದಿಗೆ ಬಿದ್ದು ಕೊಚ್ಚಿ ಹೋಗಿರುವ ಘಟನೆ ಮೂಡಿಗೆರೆ ತಾಲೂಕಿನ ಕಳಸ ಸಮೀಪ ಸಣ್ಣ ಅಂಬುತೀರ್ಥದ ಬಳಿ ನಡೆದಿದೆ.
ಯುವಕನನ್ನು ಬಂಟ್ವಾಳ ತಾಲೂಕಿನ ತುಂಬೆಯ ಕಿರಣ್ ಕೊಟ್ಯಾನ್(26) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ 14 ಮಂದಿಯ ತಂಡ ಜಿಲ್ಲೆಯ ಕುದುರೆಮುಖ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಅಂಬುತೀರ್ಥದ ಬಳಿ ಕಿರಣ್ ಅವರ ಕಾಲು ಜಾರಿದ್ದು, ಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.
ಕಳಸ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಕಿರಣ್ ಮೃತ ದೇಹಕ್ಕಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಕಿರಣ್ ಜೊತೆಯಲ್ಲಿದ್ದ ಗೆಳೆಯರು ಘಟನೆಯಿಂದ ತೀವ್ರ ಶೋಕಕ್ಕೀಡಾಗಿದ್ದಾರೆ.

ಕಿರಣ್ ಕೊಟ್ಯಾನ್ ಅವರು ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕಳಸ ಪೊಲೀಸರು ಪ್ರಕರಣದ ದಾಖಲಿಸಿದ್ದಾರೆ.











Click it and Unblock the Notifications