ತಮಾಷೆ ಕರೆಗೆ ಪ್ರತಿಭಾವಂತ ವಿದ್ಯಾರ್ಥಿನಿ ಸಾವು
ರಾಮನಗರ, ಮೇ.8: ಮನೆಮಗಳು ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲೇ ತೇರ್ಗಡೆಯಾಗಿದ್ದಾಳೆ. ಯಾರೋ ಮಾಡಿದ ತಮಾಷೆಯೇ ಎಡವಟ್ಟಾಗಿ ಪ್ರತಿಭಾವಂತ ವಿದ್ಯಾರ್ಥಿನಿ ಶವವಾಗಿ ಹೋಗಿದ್ದಾಳೆ. ಮನೆಯಲ್ಲಿ ಸಂಭ್ರಮ ಇರಬೇಕಾಗಿತ್ತು, ಆದ್ರೆ ಮನೆಯಲ್ಲಿ ಮಗಳ ಸಾವಿನಿಂದ ಆಕ್ರಂದನ ಮುಗಿಲು ಮುಟ್ಟಿದೆ.
ದ್ವಿತೀಯ ಪಿಯುಸಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ತೇಜಸ್ವಿನಿ ಪರೀಕ್ಷೆಯಲ್ಲಿ ಪಾಸಾಗಿದ್ದಾಳೆ, ಆದ್ರೆ ಆಕೆಯನ್ನ ರೇಗಿಸಿ ತಮಾಷೆ ಮಾಡುವುದಕ್ಕಾಗಿ ಹುಡುಗಿಯ ಸೋದರ ಸಂಬಂಧಿ ನೀನು ಅನುತ್ತೀರ್ಣಳಾಗಿದ್ದೀಯ ಎಂದು ಫೋನಿನಲ್ಲಿ ಹೇಳಿದ್ದಾರೆ. ಇಷ್ಟೆಲ್ಲಾ ಓದಿದರೂ ಫೇಲಾಗಿದ್ದಾನೆಂಬ ನೋವಿನಲ್ಲಿ ತಕ್ಷಣವೇ ಫೋನ್ ಡಿಸ್ಕನೆಕ್ಟ್ ಮಾಡಿ ಮನೆಯ ಹಿಂದೆ ಇದ್ದ ಬಾವಿಗೆ ಹಾಕಿ ಪ್ರಾಣ ಕಳೆದುಕೊಂಡಿದ್ದಾಳೆ.
ತಮಾಷೆಗಾಗಿ ಮಾಡಿದ ತಪ್ಪು ಒಂದು ಮುಗ್ಧ ಅಮಾಯಕ ಹೆಣ್ಣುಮಗಳ ಜೀವವನ್ನೇ ಬಲಿ ತೆಗೆದುಕೊಂಡುಬಿಟ್ಟಿದೆ. ಫಲಿತಾಂಶ ಭೂತಕ್ಕೆ ಪ್ರತಿಭಾವಂತ ವಿದ್ಯಾರ್ಥಿನಿ ಮೊದಲ ಬಲಿಯಾಗಿ ಹೋಗಿದ್ದಾಳೆ.

ರಾಮನಗರ ಜಿಲ್ಲೆ ಬಿಡದಿ ಹೋಬಳಿ ಇಟ್ಟಮಡು ಗ್ರಾಮದಲ್ಲಿ ಪಿಯುಸಿ ವಿದ್ಯಾರ್ಥಿನಿ ತೇಜಸ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ತೇಜಸ್ವಿನಿ ಬಿಡದಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮುಗಿಸಿ ಪರೀಕ್ಷೆ ಬರೆದು ಬ್ಯಾಂಕ್ ಉದ್ಯೋಗಿಯಾಗಬೇಕೆಂಬ ಕನಸು ಹೊತ್ತಿದ್ದಳು.
ಆದರೆ ಅವಳ ದುರಾದೃಷ್ಟವೋ ಏನೋ ಆಕೆಯ ಸೋದರ ಸಂಬಂಧಿಯೊಬ್ಬರು ಇಂದು ದ್ವಿತೀಯ ಪಿಯುಸಿ ರಿಸಲ್ಟ್ ನೋಡಿ ತಮಾಷೆಗಾಗಿ ನೀನು ಫೇಲ್ ಆಗಿದ್ದೀಯ ಎಂದು ತೇಜಸ್ವಿನಿಗೆ ಫೋನ್ ನಲ್ಲಿ ಹೇಳಿದ್ದಾರೆ. ಅಘಾತಕಾರಿ ವಿಷಯ ಕೇಳಿದ ತೇಜಸ್ವಿನಿ ಮನೆಯ ಹಿಂದೆಯೇ ಇದ್ದ ಬಾವಿಗೆ ಬಿದ್ದು ತನ್ನ ಜೀವವನ್ನೇ ಬಲಿಕೊಟ್ಟಿದ್ದಾಳೆ.
ತೇಜಸ್ವಿನಿ ಕಾಲೇಜಿನಲ್ಲಿ ಪ್ರತಿಭಾವಂತೆ ವಿದ್ಯಾರ್ಥಿನಿಯಾಗಿದ್ದಳು. ತಾನು ಪ್ರಥಮ ದರ್ಜೆಯಲ್ಲಿ ಪಾಸಾಗುತ್ತೇನೆಂಬ ವಿಶ್ವಾಸ ಅವಳಿಗಿತ್ತು. ಅದರಂತೆಯೇ ಪರೀಕ್ಷೆಯಲ್ಲಿ 374 ಮಾರ್ಕ್ಸ್ ಪಡೆದಿದ್ದಳು. ಆದರೆ ಯಾರೋ ಮಾಡಿದ ತಮಾಷೆಗಾಗಿ ಅಮಾಯಕ ತೇಜಸ್ವಿನಿ ಹಿಂದೆ ಮುಂದೆ ವಿಚಾರಿಸದೇ ತನ್ನ ದುಡುಕು ಬುದ್ದಿಯಿಂದ ತನ್ನ ಪ್ರಾಣವನ್ನೇ ಬಲಿಕೊಟ್ಟಿದ್ದಾಳೆ. ಮಗಳ ಸಾವಿನ ಸುದ್ದಿ ಪೋಷಕರಿಗೆ ಬರಸಿಡಿಲಿನಂತೆ ಬಂದೆರಗಿದೆ. ಸಂಭ್ರಮದಿಂದ ಇರಬೇಕಾದ ಒಬ್ಬಳೇ ಮಗಳು ಇಂದು ಶವವಾಗಿದ್ದಾಳೆಂದು ಪೋಷಕರ ಕಣ್ಣೀರಿನ ಕಟ್ಟೆ ಹೊಡೆದಿತ್ತು. ದುಡುಕಿಗೆ ಬುದ್ದಿಯನ್ನ ಕೊಟ್ಟು ಪ್ರತಿಭಾವಂತೆ ತೇಜಸ್ವಿನಿ ಪ್ರಾಣವನ್ನ ಕಳೆದುಕೊಂಡಿದ್ದಾಳೆ.
ತೇಜಸ್ವಿನಿಯ ಸುದ್ದಿ ತಿಳಿಯುತ್ತಿದ್ದಂತೆ ತೇಜಸ್ವಿನಿಯ ಸ್ನೇಹಿತ ವೃಂದ ಅಂತಿಮ ದರ್ಶನ ಪಡೆದು ಕಣ್ಣೀರಿಡುತ್ತಿದ್ದರು. ಪೋಷಕರ ಆಕ್ರಂದನವಂತೂ ಮುಗಿಲು ಮುಟ್ಟಿತ್ತು. ಬಿಡದಿ ಪೊಲೀಸರು ಸುಮೊಟೋ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬಂತೆ ಅವರಿವರ ಮಾತನ್ನ ಕೇಳಿದರೂ ತಾನೂ ಸತ್ಯವೋ ಸುಳ್ಳೋ ಎಂದು ಪರಿಶೀಲಿಸಿದ್ದಿದ್ದರೆ ತೇಜಸ್ವಿನಿ ಇಂದು ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ಸೂಕ್ಷ್ಮ ಮನಸ್ಸಿನ ಹೆಣ್ಣು ಮಕ್ಕಳೊಂದಿಗೆ ತಮಾಷೆ ಮಾಡಬಾರದೆಂಬ ವಿಷಯವನ್ನ ಎಲ್ಲರೂ ಅರಿತುಕೊಳ್ಳಬೇಕಾಗಿದೆ.












Click it and Unblock the Notifications