Karnataka Budget 2023: ಸಿದ್ದರಾಮಯ್ಯ ಬಜೆಟ್ ಮಂಡಿಸುವ ವೇಳೆ ಶಾಸಕರ ಸ್ಥಾನದಲ್ಲಿ ಕುಳಿತಿದ್ದ ವಕೀಲನ ಬಂಧನ!
ಬೆಂಗಳೂರು, ಜುಲೈ 8: ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಬಜೆಟ್ 2023 ಮಂಡಿಸುವ ವೇಳೆ ವಿಧಾನಸಭೆ ಒಳಗೆ ಪ್ರವೇಶ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ವಿಧಾನಸಭೆ ಸದನದೊಳಗೆ ಶಾಸಕರು ಸಚಿವರಿಗಷ್ಟೇ ಅವಕಾಶ ಇರುತ್ತದೆ. ಆದರೆ ಬಜೆಟ್ ಮಂಡಿಸುವ ವೇಳೆ ಕೆಲವೊತ್ತು ಅನಾಮಿಕ ವ್ಯಕ್ತಿ ಪ್ರವೇಶ ಮಾಡಿದ್ದು, ಭದ್ರತಾ ಲೋಪವಾಗಿದೆ ಎಂದು ಹೇಳಲಾಗಿದೆ.
ಬಜೆಟ್ ಮಂಡನೆ ವೇಳೆ ದೇವದುರ್ಗ ಶಾಸಕಿ ಕರಿಯಮ್ಮ ಸದನಕ್ಕೆ ಗೈರಾಗಿದ್ದರು. ಈ ವೇಳೆ ಸದನದ ಒಳಗೆ ಪ್ರವೇಶಿಸಿದ ಅಪರಿಚಿತ ವ್ಯಕ್ತಿ ಶಾಸಕರ ಸ್ಥಾನದಲ್ಲಿ 15 ನಿಮಿಷಗಳ ಕಾಲ ಕುಳಿತಿದ್ದರು, ಆಗ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಬಜೆಟ್ ಮಂಡನೆ ಸಮಯದಲ್ಲಿ ಯಾರೋ ಖಾಸಗಿ ವ್ಯಕ್ತಿ ಬಂದು ಕುಳಿತಿದ್ದನ್ನು ಗಮನಿಸಿದರು. ಪಕ್ಕದಲ್ಲಿದ್ದ ಜಿ.ಟಿ ದೇವೇಗೌಡ ಅವರ ಬಳಿ ಕೇಳಿದರು. ಆಗ ಅವರಿಗೂ ಗೊತ್ತಾಗಲಿಲ್ಲ. ಆ ವೇಳೆ ಅವರನ್ನು ಪ್ರಶ್ನಿಸಿದರೆ ನಾನು ಮೊಳಕಾಲ್ಮೂರು ಎಂಎಲ್‌ಎ ಅಂತ ಹೇಳಿದರು.

ಅಲ್ಲದೇ ಆತ ಡಿಸಿಎಂ ಡಿಕೆ ಶಿವಕುಮಾರ್ ಅವರ ಬಳಿ ತೆರಳಿ ಶೇಕ್ ಹ್ಯಾಂಡ್ ಕೂಡ ಮಾಡಿದ್ದರು ಎನ್ನಲಾಗಿದ್ದು, ಸಿಎಂ ಬಜೆಟ್ ಮಂಡನೆ ವೇಳೆ ಆಗಿರುವ ಭದ್ರತಾ ಲೋಪದ ಸಂಬಂಧ ಖಾಸಗಿ ವ್ಯಕ್ತಿಯನ್ನು ಸದ್ಯ ವಿಧಾನಸೌಧ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಧಾನಸೌಧ ಆಚೆ ಮಾತನಾಡಿದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು, ಬಜೆಟ್ ಮಂಡನೆ ಸಮಯದಲ್ಲಿ ಯಾರೋ ಖಾಸಗಿ ವ್ಯಕ್ತಿ ಬಂದು ಕುಳಿತಿದ್ದರು.
ಯಾರೋ ಒಬ್ಬ ಖಾಸಗಿ ವ್ಯಕ್ತಿ ಬಂದು ಸದನದ ಆಸನದಲ್ಲಿ ಕುಳಿತಿದ್ದನ್ನು ಗಮನಿಸಿದ್ದೆ. ನಾನು ಪಕ್ಕದಲ್ಲಿದ್ದ ಜಿ.ಟಿ ದೇವೇಗೌಡ ಅವರ ಬಳಿ ಕೇಳಿದೆ. ಅವರು ಯಾರೋ ಗೊತ್ತಿಲ್ಲ ಅಂದರೂ, ಆ ವೇಳೆ ಅವರನ್ನು ಪ್ರಶ್ನಿಸಿದರೆ ನಾನು ಮೊಳಕಾಲ್ಮೂರು ಎಂಎಲ್‌ಎ ಅಂತ ಹೇಳಿದರು. ಅವರು ಸುಮಾರು ಹದಿನೈದು ನಿಮಿಷಗಳ ಕಾಲ ಸದನದಲ್ಲಿ ಕುಳಿತಿದ್ದರು. ಇದೊಂದು ಭದ್ರತಾ ಲೋಪ ಅನ್ನಬೇಕೋ ಹೇಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಬಳಿ ಹೋಗಿ ಆ ವ್ಯಕ್ತಿ ಸದನದಲ್ಲಿ ವಿಶ್ ಮಾಡಿದ್ದಾರೆ. ಬಳಿಕ ನಾನು ಮಾರ್ಷಲ್ಸ್ ಗಮನಕ್ಕೆತಂದೆ, ಅಲ್ಲದೇ ಅಧಿಕಾರಿಗಳ ಗಮನಕ್ಕೆ ತಂದೆ. ಬಳಿಕ ಅವನನ್ನ ಕರೆದುಕೊಂಡು ಹೋಗಿದ್ದಾರೆ. ಆ ವ್ಯಕ್ತಿಗೆ ಸುಮಾರು 70 ವರ್ಷ ಆಗಿರಬಹುದು. ಈ ಬಗ್ಗೆ ಸ್ಪೀಕರ್ ಗಮನಕ್ಕೆ ನಾನು ತಂದಿದ್ದೇನೆ. ಈ ರೀತಿಯ ಐತಿಹಾಸಿಕ ಸಂದರ್ಭದಲ್ಲೇ ಖಾಸಗಿ ವ್ಯಕ್ತಿ ಬಂದು ಕುಳಿತಿದ್ದಾರೆ. ನಮ್ಮ ದೇವದುರ್ಗ ಶಾಸಕರಾದ ಕರೆಯಮ್ಮ ಅಸನದಲ್ಲಿ ಕುಳಿತುಕೊಂಡಿದ್ದರು. ಕರೆಮ್ಮ ಅವರು ಬಜೆಟ್ ಮಂಡನೆ ವೇಳೆ ತಡವಾಗಿ ಬಂದಿದ್ದರು. ಈ ವೇಳೆ ಘಟನೆ ನಡೆದಿದೆ. ಭದ್ರತಾ ಲೋಪ ಆಗಿರುವ ಬಗ್ಗೆ ಅಧಿಕಾರಗಳ ವಿರುದ್ಧ ಕ್ರಮಕೈಗೊಳ್ಳಲು ಸ್ಪೀಕರ್ ಅವರಿಗೆ ಮನವಿ ಮಾಡಿದ್ದೇವೆ ಎಂದು ಜೆಡಿಎಸ್ ಶಾಸಕ ತಿಳಿಸಿದ್ದಾರೆ.
ಯಾರು ಆ ಅನಾಮಿಕ:
ಸ್ಪೀಕರ್ ಸೂಚನೆ ಮೇರೆ ವಿಚಾರಣೆ ನಡೆಸಿದ ಪೊಲೀಸರಿಗೆ ಅನಾಮಿಕ ವ್ಯಕ್ತಿಯ ಹೆಸರು ಚಿತ್ರದುರ್ಗದ ಮೊಳಕಾಲ್ಮೂರಿನ ತಿಪ್ಪೇರುದ್ರ ಎಂಬಾತ ಎಂದು ತಿಳಿದು ಬಂದಿದೆ. ಸದ್ಯ ಆತನನ್ನು ವಶಕ್ಕೆ ಪಡೆದುಕೊಂಡಿರುವ ವಿಧಾನಸೌಧ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಅವರು ವಿಚಾರಣೆ ನಡೆಸಿದ್ದು, ಎಪ್ಪತ್ತು ವರ್ಷದ ತಿಪ್ಪೇರುದ್ರ ಎಂಬ ವ್ಯಕ್ತಿ ಆತ ವಕೀಲ ಎಂಬ ಮಾಹಿತಿ ಲಭ್ಯವಾಗಿದೆ.












Click it and Unblock the Notifications