ಉಕ್ರೇನ್‌ನಿಂದ ಕರ್ನಾಟಕಕ್ಕೆ 86 ಜನರು ವಾಪಸ್
ಬೆಂಗಳೂರು, ಮಾರ್ಚ್ 03; ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ ಕರ್ನಾಟಕದ ವಿದ್ಯಾರ್ಥಿಗಳ ಪೈಕಿ 86 ಜನರು ಇದುವರೆಗೂ ವಾಪಸ್ ಆಗಿದ್ದಾರೆ. ಹಾವೇರಿಯ ನವೀನ್ ಮೃತದೇಹ ತರುವಂತೆ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಮಾಡಲಾಗಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನೋಡಲ್ ಅಧಿಕಾರಿ ಮನೋಜ್ ರಾಜನ್ ಈ ಕುರಿತು ಮಾಹಿತ ನೀಡಿದ್ದಾರೆ. "ರಾಜ್ಯದ 694 ಜನರು ಉಕ್ರೇನ್‌ನಲ್ಲಿ ಸಿಲುಕಿದ್ದು, ಫೆಬ್ರವರಿ 27 ರಿಂದ ಬುಧವಾರದ ತನಕ 86 ಜನರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ" ಎಂದರು.
ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಕುಟುಂಬ ಸದಸ್ಯರನ್ನು ಸರ್ಕಾರದ ಅಧಿಕಾರಿಗಳು ಭೇಟಿ ಮಾಡಿ ಧೈರ್ಯ ತುಂಬುತ್ತಿದ್ದಾರೆ. 314 ಜನರ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. 425 ಪೋಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಗಿದೆ.

ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಜನರ ಕುಟುಂಬ ಸದಸ್ಯರು, ಪೋಷಕರಿಗೆ ಸಹಾಯ ಮಾಡಲು 24*7 ಕಾಲ್ ಸೆಂಟರ್ ಆರಂಭಿಸಲಾಗಿದೆ. ರಕ್ಷಣಾ ಕಾರ್ಯ ನಡೆಯುತ್ತಿರುವ ಕುರಿತು ಕುಟುಂಬಕ್ಕೆ ಮಾಹಿತಿಯನ್ನು ನೀಡಲಾಗುತ್ತಿದೆ.
ಯಾವ ಜಿಲ್ಲೆಗಳ ಜನರು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ ಎಂದು ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಕಳುಹಿಸಿಕೊಡಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಪೋಷಕರನ್ನು ಭೇಟಿ ಮಾಡಿ ರಕ್ಷಣಾ ಕಾರ್ಯಾಚರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡುತ್ತಿದ್ದಾರೆ.
ಸಚಿವ ಜೈ ಶಂಕರ್ ಭೇಟಿ; ಹಾವೇರಿ ಸಂಸದ ಶಿವಕುಮಾರ್ ಉದಾಸಿ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭೇಟಿಯಾಗಿದ್ದಾರೆ. ಉಕ್ರೇನ್‌ನಲ್ಲಿ ಶೆಲ್ ದಾಳಿಯಲ್ಲಿ ಮೃತಪಟ್ಟ ನವೀನ್ ಮೃತದೇಹವನ್ನು ತರಲು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಮಂಗಳವಾರ ಆಹಾರ ತರಲು ಹೋದಾಗ ರಷ್ಯಾದ ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದ.
ಸಚಿವ ಎಸ್. ಜೈ ಶಂಕರ್ ಅವರ ಬಳಿ ನವೀನ್ ಮೃತದೇಹ ತರಲು ಪ್ರಯತ್ನ ನಡೆಸುವಂತೆ ಮನವಿ ಮಾಡಿದ್ದಾರೆ. ದೆಹಲಿಯಲ್ಲೇ ಇರುವ ಸಂಸದರು ಈ ಕುರಿತು ವಿದೇಶಾಂಗ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ನವೀನ್ ನಿವಾಸಕ್ಕೆ ಬುಧವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಮಾತನಾಡಿದ ಅವರು, "ಎಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆಯುತ್ತಿದೆ. ಅವರು ಭಾರತಕ್ಕೆ ವಾಪಸ್ ಆದ ನಂತರ ಅವರ ಶಿಕ್ಷಣ ಮುಂದುವರೆಸುವ ಕುರಿತು ಚಿಂತನೆ ನಡೆಸಲಾಗುತ್ತದೆ" ಎಂದರು.
ಜಿಲ್ಲಾಧಿಕಾರಿಗಳ ಭೇಟಿ; ಉಕ್ರೇನ್‌ನಲ್ಲಿ ಧಾರವಾಡದ ಇಬ್ಬರು, ಹುಬ್ಬಳ್ಳಿಯ ಓರ್ವ ಮತ್ತು ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಓರ್ವ ವಿದ್ಯಾರ್ಥಿನಿ ಸಿಲುಕಿಕೊಂಡಿದ್ದಾರೆ. ವೈದ್ಯಕೀಯ ವ್ಯಾಸಂಗಕ್ಕಾಗಿ ಉಕ್ರೇನ್‌ಗೆ ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಮನೆಗಳಿಗೆ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬುಧವಾರ ಭೇಟಿ ನೀಡಿದರು, ಪೋಷಕರಿಗೆ ಧೈರ್ಯ ತುಂಬಿದರು.
"ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕಾರ್ಯಾಚರಣೆ ಮುಂದುವರೆದಿದೆ. ಬುಧವಾರ 6 ವಿಮಾನಗಳು ದೆಹಲಿಗೆ ಬಂದಿವೆ. ಅವುಗಳಲ್ಲಿ ಕರ್ನಾಟಕದ 36 ವಿದ್ಯಾರ್ಥಿಗಳು ಬಂದಿದ್ದಾರೆ" ಎಂದು ಮನೋಜ್ ರಾಜನ್ ಹೇಳಿದ್ದಾರೆ.
ಭಾರತೀಯ ವಾಯುಪಡೆಯ ಸಿ-17 ವಿಮಾನ ದೆಹಲಿಯ ಹಿಂಡನ್ ವಾಯುನೆಲೆಗೆ ಗುರುವಾರ ಮುಂಜಾನೆ ಆಗಮಿಸಿದೆ. ಈ ವಿಮಾನದಲ್ಲಿ 208 ಭಾರತೀಯರು ಉಕ್ರೇನ್‌ನಿಂದ ವಾಪಸ್ ಆಗಿದ್ದಾರೆ.
220 ಜನರನ್ನು ವಾಯುಪಡೆಯ ಮತ್ತೊಂದು ವಿಮಾನ ಗುರುವಾರ ನವದೆಹಲಿಗೆ ಆಗಮಿಸಿದೆ. ದೆಹಲಿಗೆ ಆಗಮಿಸಿದ ವಿದ್ಯಾರ್ಥಿಗಳು ಅವರ ರಾಜ್ಯಕ್ಕೆ ಮರಳಲು ಭಾರತೀಯ ರೈಲ್ವೆ ಸಹ ಸಹಕಾರ ನೀಡುತ್ತಿದೆ. ಇದಕ್ಕಾಗಿ ಪ್ರತ್ಯೇಕ ಹೆಲ್ಪ್ ಡೆಸ್ಕ್ ಆರಂಭಿಸಿದೆ.












Click it and Unblock the Notifications