Railway New Line: 206 ಕಿ.ಮೀ. ತುಮಕೂರು-ರಾಯದುರ್ಗ ಹೊಸ ಮಾರ್ಗ ಯೋಜನೆ ಬಿಗ್ ಅಪ್ಡೇಟ್ಸ್
ಬೆಂಗಳೂರು, ಆಗಸ್ಟ್ 30: ಭಾರತೀಯ ರೈಲ್ವೆ ಸಚಿವಾಲಯವು ಕರ್ನಾಟಕದಲ್ಲಿ ವಿವಿಧ ಯೋಜನೆಗಳಿಗೆ ಅನುಮೋದನೆ ನೀಡಿದೆ. ತಡವಾಗುತ್ತಿರುವ ಯೋಜನೆಗಳಿಗೆ ರೈಲ್ವೆ ಸಚಿವ ವಿ.ಸೋಮಣ್ಣ ಅವರು ಈಗಾಗಲೇ ಸೂಕ್ತ ನಿರ್ದೇಶನ ನೀಡಿದ್ದಾರೆ. ಇದೀಗ ದಶಕಗಳ ಬಳಿಕ 206 ಕಿ.ಮೀ. ತುಮಕೂರು-ರಾಯದುರ್ಗ ಹೊಸ ಮಾರ್ಗ ಯೋಜನೆಯಲ್ಲಿ ತಕ್ಕ ಮಟ್ಟಿನ ಪ್ರಗತಿ ಆಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ರೈಲ್ವೆ ಯೋಜನೆಯು ಬಳ್ಳಾರಿಗೆ ತೆರಳುವವರ ಪ್ರಯಾಣದ ಸಮಯ, ದೂರವನ್ನು ಕಡಿಮೆ ಮಾಡಲಿದೆ. 2027ರ ಹೊತ್ತಿಗೆ ಯೋಜನೆ ಪೂರ್ಣಗೊಳ್ಳುವುದು ಅನುಮಾನ ಎನ್ನಲಾಗಿದೆ. ಈ ಮಧ್ಯೆ 83 ಕಿಲೋ ಮೀಟರ್ ಮಾರ್ಗವು ಕಾರ್ಯಾರಂಭಗೊಳ್ಳಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಕೆಲವೆಡೆ ಭೂಸ್ವಾಧೀನ ಕೊಂಚ ಬಾಕಿ ಇದೆ. ಯೋಜನೆ ಮೊದಲು 2025ಕ್ಕೆ ಪೂರ್ಣಗೊಳಿಸಲು ಯೋಜಿಸಲಾಗಿತ್ತು. ಸದ್ಯ 2027ಕ್ಕೆ ಗಡುವು ನೀಡಲಾಗಿದೆ. ಹಾಗಾದ್ರೆ ಈ ಯೋಜನೆಯಿಂದ ಏನೆಲ್ಲ ಪ್ರಯೋಜನ, ಮಾರ್ಗಗಳ ವಿವರ ಇಲ್ಲಿದೆ.

ಹೊಸ ರೈಲು ಮಾರ್ಗದ ಪ್ರಯೋಜನಗಳು
206 ಕಿ.ಮೀ. ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಯಿಂದ ಭವಿಷ್ಯದಲ್ಲಿ ತುಮಕೂರು ಮತ್ತು ಬಳ್ಳಾರಿ ನಡುವಿನ ಅಂತರ ಬರೋಬ್ಬರಿ 130 ಕಿ.ಮೀ ಕಡಿಮೆ ಆಗಲಿದೆ. ಇದು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ರೈಲು ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸಿದಂತಾಗುತ್ತಿದೆ. ಸದ್ಯ ಈ ಯೋಜನೆಯಲ್ಲಿ 83 ಕಿ.ಮೀ ರೈಲು ಸಿದ್ಧವಾಗಿದೆ. ಇದರಿಂದ ತುಮಕೂರು, ಮಡಕಶಿರ, ಪಾವಗಡ ಮತ್ತು ಕಲ್ಯಾಣದುರ್ಗ ನಡುವಿನ ಸಂಪರ್ಕವನ್ನು ಸುಧಾರಣೆ ಆಗಲಿದೆ.
ತುಮಕೂರು ಜಿಲ್ಲೆ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಕೃಷಿ ಉತ್ಪನ್ನಗಳು ಮತ್ತು ಮುಖ್ಯವಾಗಿ ಗ್ರಾನೈಟ್ ಉದ್ಯಮ ಪ್ರದೇಶವಾದ ಈ ಭಾಗಕ್ಕೆ ಆರ್ಥಿಕ ಉತ್ತೇಜನ ದೊರೆತಿದೆ. ಗ್ರಾನೈಟ್ ಸಾಗಣಿಕೆಗೆ, ಸುಗಮ ಸಂಚಾರ ಒದಗಿಸಿದಂತಾಗುತ್ತದೆ. ತುಮಕೂರು-ಬಳ್ಳಾರಿ ಮಾರ್ಗದ ಅಂತರ ಇಳಿಕೆಯಾಗುತ್ತದೆ. ತುಮಕೂರು-ರಾಯದುರ್ಗ ಯೋಜನೆಯನ್ನು ₹2,500 ಕೋಟಿ ಅಂದಾಜು ವೆಚ್ಚದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ.
ಭೂಸ್ವಾಧೀನ ಕೊಂಚ ಬಾಕಿ
ಕರ್ನಾಟಕ ಮತ್ತು ಆಂಧ್ರಪ್ರದೇಶ ಸಂಪರ್ಕಿಸುವ ಯೋಜನೆಯೂ ಇದಾಗಿದೆ. ಭಾರತೀಯ ಗ್ರಾನೈಟ್ ಮತ್ತು ಕಲ್ಲು ಸಂಘದ ಪ್ರಕಾರ, 2023 ರಲ್ಲಿ 315 ಮಿಲಿಯನ್ ಡಾಲರ್ ಮೌಲ್ಯದ ರಫ್ತು ಆಗಿದೆ. ಕರ್ನಾಟಕದ ಇತರ ಭಾಗಗಳೊಂದಿಗೆ ತುಮಕೂರಿನ ಸಂಪರ್ಕವನ್ನು ಹೆಚ್ಚಿಸುವಲ್ಲಿ ಈ ಯೋಜನೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸದ್ಯದ ಬೆಳವಣಿಗೆ ನೋಡಿದರೆ 2027ಕ್ಕೆ ಈ ಯೋಜನೆ ಪೂರ್ಣಗೊಳ್ಳುವುದು ಅನುಮಾನ ಎನ್ನಲಾಗಿದೆ. ಶೇಕಡಾ 4ರಷ್ಟು ಭೂಸ್ವಾಧೀನ ಬಾಕಿ ಇದೆ ಎನ್ನಲಾಗಿದೆ. ಯೋಜನೆ ಆಗಾಗ ಪರಿಶೀಲಿಸುವ ರೈಲ್ವೆ ಸಚಿವರು ಕಾಮಗಾರಿಗೆ ವೇಗ ನೀಡುವಂತೆ ಕಟ್ಟುನಿಟ್ಟಾಗಿ ತಾಕೀತು ಮಾಡಿದ್ದಾರೆ.












Click it and Unblock the Notifications