7th Pay Commission; ಆರ್ಥಿಕ ಇಲಾಖೆಗೆ ಸರ್ಕಾರಿ ನೌಕರರ ಭೇಟಿ
ಬೆಂಗಳೂರು, ಜೂನ್ 15: ಲೋಕಸಭೆ ಚುನಾವಣೆ 2024 ಮುಕ್ತಾಯಗೊಂಡಿದೆ. ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ವಾಪಸ್ ಪಡೆದಿದೆ. ಕರ್ನಾಟಕ ಸರ್ಕಾರ ಮೊದಲ ಸಚಿವ ಸಂಪುಟ ಸಭೆಯನ್ನು ಸಹ ನಡೆಸಿದೆ. ಆದರೆ ಅವರ ಪ್ರಮುಖ ಬೇಡಿಕೆ ಈಡೇರಿಕೆ ಕುರಿತು ಇನ್ನೂ ಸ್ಪಷ್ಟ ಚಿತ್ರಣ ಲಭಿಸಿಲ್ಲ.
ಕರ್ನಾಟಕದ ಸರ್ಕಾರಿ ನೌಕರರು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಸರ್ಕಾರ ಯಾವಾಗ ಜಾರಿಗೊಳಿಸುತ್ತದೆ? ಎಂದು ಕಾದು ಕುಳಿತಿದ್ದಾರೆ. ಇಷ್ಟು ದಿನ ಚುನಾವಣಾ ಮಾದರಿ ನೀತಿ ಸಂಹಿತೆ ವರದಿ ಜಾರಿಗೆ ಅಡ್ಡಿಯಾಗಿತ್ತು.

2024ರ ಮಾರ್ಚ್ 16ರಂದು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ಹಣಕಾಸು ಸಚಿವ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವರದಿಯನ್ನು ನೀಡಿದೆ. ಆದರೆ ಅಂದಿನಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ವರದಿ ಬಗ್ಗೆ ಯಾವುದೇ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ.
ವರದಿ ಸ್ವೀಕಾರ ಮಾಡಿದ್ದ ಮುಖ್ಯಮಂತ್ರಿಗಳು, ರಾಜ್ಯದ 7ನೇ ವೇತನ ಆಯೋಗವು ಮೂಲ ವೇತನದ ಶೇಕಡ 27.5 ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ವರದಿಯನ್ನು ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಸರ್ಕಾರಿ ನೌಕರರಿಗೆ ಭರವಸೆ ನೀಡಿದ್ದರು.
ಆರ್ಥಿಕ ಇಲಾಖೆಗೆ ಭೇಟಿ: 7ನೇ ವೇತನ ಆಯೋಗದ ವರದಿ ಜಾರಿ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಮತ್ತು ರಾಜ್ಯ ಸಂಘದ ಪದಾಧಿಕಾರಿಗಳು ಆರ್ಥಿಕ ಇಲಾಖೆಗೆ ಭೇಟಿ ನೀಡಿದ್ದಾರೆ.
ಸಿ. ಎಸ್. ಷಡಕ್ಷರಿ ನೇತೃತ್ವದ ಸಂಘದ ನಿಯೋಗವು ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಪಿ. ಸಿ. ಜಾಫರ್ ಅವರನ್ನು ಭೇಟಿ ಮಾಡಿತು. 7ನೇ ವೇತನ ಆಯೋಗದ ವರದಿ ಬಗ್ಗೆ ಈಗಾಗಲೇ ಸಚಿವ ಸಂಪುಟದಲ್ಲಿ ಚರ್ಚಿಸಿದ್ದು, ಮಾನ್ಯ ಮುಖ್ಯಮಂತ್ರಿಯವರೊಂದಿಗೆ ಸಮಾಲೋಚಿಸಿ ಅಂತಿಮ ತೀರ್ಮಾನವನ್ನು ಶೀಘ್ರದಲ್ಲೇ ತೆಗೆದುಕೊಳ್ಳುವುದಾಗಿ ಅವರು ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಈ ನಿಯೋಗದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷರಾದ ರಮೇಶ್, ಕೇಂದ್ರ ಸಂಘದ ಪದಾಧಿಕಾರಿಗಳಾದ ವೆಂಕಟೇಶಯ್ಯ, ಶ್ರೀನಿವಾಸ್ ತಿಮ್ಮೇಗೌಡ, ಎಂ. ಬಿ. ಬಳ್ಳಾರಿ, ಎಂ. ವಿ. ರುದ್ರಪ್ಪ ಮುಂತಾದವರು ಇದ್ದರು.
ಸಂಪುಟ ಸಭೆಯಲ್ಲಿ ಏನಾಯಿತು?: ಲೋಕಸಭೆ ಚುನಾವಣೆ 2024ರ ಮಾದರಿ ನೀತಿ ಸಂಹಿತೆ ವಾಪಸ್ ಪಡೆದ ಬಳಿಕ ಜೂನ್ 13ರಂದು ಮೊದಲ ಸಚಿವ ಸಂಪುಟ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 7ನೇ ವೇತನ ಆಯೋಗ ಶಿಫಾರಸು ಜಾರಿ ಕುರಿತು ಸಹ ಚರ್ಚೆ ನಡೆದಿದೆ.
7ನೇ ವೇತನ ಆಯೋಗದ ಅಂತಿಮ ವರದಿ ಶಿಫಾರಸು ಆಧರಿಸಿ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸಚಿವ ಸಂಪುಟ ಸಭೆಯ ಮೇಲೆ ಸರ್ಕಾರಿ ನೌಕರರು ನಿರೀಕ್ಷೆ ಇಟ್ಟುಕೊಂಡಿದ್ದರು. ಸಭೆಯಲ್ಲಿ ವೇತನ ಪರಿಷ್ಕರಣೆಯ ಸಾಧಕ-ಬಾಧಕಗಳ ಬಗ್ಗೆ ವಿಸ್ತ್ರತವಾಗಿ ಚರ್ಚಿಸಲಾಗಿದೆ. ಈ ವೇಳೆ ಸಚಿವರು ನೀಡಿದ ಸಲಹೆಗಳನ್ನು ಪಡೆದು ಯಾವುದೇ ನಿರ್ಧಾರ ತೆಗೆದುಕೊಳ್ಳದೆ ವಿಷಯವನ್ನು ಮುಂದಿನ ಸಂಪುಟ ಸಭೆಗೆ ಮುಂದೂಡಲಾಗಿದೆ.
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಮತ್ತು ರಾಜ್ಯ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿಯಾಗಿ 7ನೇ ವೇತನ ಆಯೋಗದ ವರದಿ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಕೆ ಮಾಡಿದ್ದರು.












Click it and Unblock the Notifications