7th Pay Commission; ಸರ್ಕಾರಿ ನೌಕರರ 2 ಬೇಡಿಕೆ, ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ?
ಬೆಂಗಳೂರು, ಜುಲೈ 14: ಕರ್ನಾಟಕದ ಸರ್ಕಾರಿ ನೌಕರರಿಗೆ ಜುಲೈ 15ರ ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಿಹಿಸುದ್ದಿ ಸಿಗುವ ನಿರೀಕ್ಷೆ ಇದೆ. ನೌಕರರ ಎರಡು ಪ್ರಮುಖ ಬೇಡಿಕೆಗಳ ಕಡತಗಳನ್ನು ಸಂಪುಟ ಸಭೆಯಲ್ಲಿ ಮಂಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಜುಲೈ 15ರ ಸೋಮವಾರದಿಂದ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭವಾಗಲಿದೆ. ಸಂಜೆ 6 ಗಂಟೆಗೆ ಸಚಿವ ಸಂಪುಟದ 2024ನೇ ಸಾಲಿನ 12ನೇ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಕರೆಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ರಾಜ್ಯ ಸರ್ಕಾರಿ ನೌಕರರು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೊಳಿಸಬೇಕು, ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನಿಸಬೇಕಿದೆ.
ಕಡತ ಮಂಡಿಸಲು ಸೂಚನೆ: ಎನ್‌ಪಿಎಸ್ ನೌಕರರ ಸಂಘ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಎನ್‌ಪಿಎಸ್ ರದ್ದು ಕುರಿತ ಕಡತವನ್ನು ಸಂಪುಟದ ಮುಂದೆ ಮಂಡಿಸುವಂತೆ ಸೂಚನೆ ನೀಡಿದ್ದಾರೆ.
ಈ ಕುರಿತು ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ ಮಾತನಾಡಿದ್ದಾರೆ. "ಎನ್‌ಪಿಎಸ್ ರದ್ದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ವಿವರವಾಗಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಸಂಪುಟದ ಮುಂದೆ ಕಡತ ಮಂಡನೆಗೆ ಅವರು ಸೂಚನೆ ನೀಡಿದ್ದಾರೆ. ಎನ್‌ಪಿಎಸ್ ರದ್ದಾಗಲಿದೆ ಎಂಬ ವಿಶ್ವಾಸ ನೌಕರರಲ್ಲಿ ಇದೆ" ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಎನ್‌ಪಿಎಸ್ ಅಡಿ 2.78 ಲಕ್ಷ ನೌಕರರು ಇದ್ದಾರೆ. ಎನ್‌ಪಿಎಸ್ ರದ್ದುಗೊಳಿಸಿದರೆ ಸರ್ಕಾರಕ್ಕೆ ನಷ್ಟದ ಬದಲು ಆರ್ಥಿಕ ಉಳಿತಾಯವೇ ಆಗಲಿದೆ ಎಂದು ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಸಚಿವರ ಅಭಿಪ್ರಾಯವನ್ನು ಪಡೆದು ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೊಳಿಸಬೇಕು ಎಂಬುದು ಸರ್ಕಾರಿ ನೌಕರರ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲು ಅಜೆಂಡಾವನ್ನು ಸಿದ್ಧಪಡಿಸುವಂತೆಯೂ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ.
7ನೇ ವೇತನ ಆಯೋಗದ ವರದಿ ಜಾರಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಬೇಕಿದೆ. ಈ ಹಿಂದೆ ನಡೆದ ಎರಡು ಸಂಪುಟ ಸಭೆಯಲ್ಲಿಯೂ ಈ ಕುರಿತು ಚರ್ಚೆ ನಡೆದಿದೆ. ಆದರೆ ಯಾವುದೇ ಅಂತಿಮ ತೀರ್ಮಾನವನ್ನು ಸರ್ಕಾರ ಕೈಗೊಂಡಿಲ್ಲ. ಆದ್ದರಿಂದ ಸರ್ಕಾರಿ ನೌಕರರು ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ.
7ನೇ ವೇತನ ಆಯೋಗದ ವರದಿ ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ನೌಕರರು ಅನಿರ್ಧಿಷ್ಟಾವಧಿ ಮುಷ್ಕರದ ಕರೆಯನ್ನು ನೀಡಿದ್ದಾರೆ. ಅದಕ್ಕೂ ಮೊದಲು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಿದ್ದಾರೆ. ಶನಿವಾರ ವಿಧಾನಸೌಧದ ಮುಂದೆ ಸಾಂಕೇತಿಕ ಪ್ರತಿಭಟನೆಯನ್ನು ಸಹ ಮಾಡಿದ್ದಾರೆ.
ಸರ್ಕಾರ ಸರ್ಕಾರಿ ನೌಕರರ ಮುಷ್ಕರದ ಮುಜುಗರದಿಂದ ತಪ್ಪಿಸಿಕೊಳ್ಳಲು 7ನೇ ವೇತನ ಆಯೋಗದ ವರದಿಯನ್ನು ಆಗಸ್ಟ್‌ನಲ್ಲಿ ಜಾರಿಗೊಳಿಸುವ ಸಾಧ್ಯತೆ ಇದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 16 ರಂದು 7ನೇ ವೇತನ ಆಯೋಗ ವರದಿ ಸ್ವೀಕಾರ ಮಾಡಿದ್ದರು. ಆದರೆ ಬಳಿಕ ಲೋಕಸಭೆ, ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ವರದಿ ಜಾರಿ ವಿಳಂಬವಾಗಿದೆ.












Click it and Unblock the Notifications