7th Pay Commission: ಆಯೋಗದ ಶಿಫಾರಸು ಜಾರಿ, ಸರ್ಕಾರದ ಮೇಲೆ ಆರ್ಥಿಕ ಹೊರೆ ಎಷ್ಟು?
ಬೆಂಗಳೂರು, ಆಗಸ್ಟ್ 09: ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ಈಡೇರಿಸಿದೆ. ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಅಂಗೀಕರಿಸಿ, ಶಿಫಾರಸುಗಳನ್ನು ಜಾರಿಗೊಳಿಸುತ್ತಿದೆ. ಇದರಿಂದಾಗಿ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿಯಲ್ಲಿ ಬದಲಾವಣೆ ಆಗುತ್ತದೆ. ಆಯೋಗದ ಶಿಫಾರಸು ಜಾರಿ ಬಳಿಕ ಸರ್ಕಾರದ ಆರ್ಥಿಕ ಹೊರೆ ಹೆಚ್ಚಳವಾಗಲಿದೆ. ವೇತನ ಆಯೋಗ ತನ್ನ ಶಿಫಾರಸಿನಲ್ಲಿ ಈ ಕುರಿತು ಸಹ ವಿವರಗಳನ್ನು ನೀಡಿದೆ.
ಕೆ. ಸುಧಾಕರ್ ನೇತೃತ್ವದ 7ನೇ ರಾಜ್ಯ ವೇತನ ಆಯೋಗ 558 ಪುಟಗಳ ಸಂಪುಟ-1ರ ವರದಿಯಲ್ಲಿ ವೇತನ ಮತ್ತು ಪಿಂಚಣಿಗಳ ಪರಿಷ್ಕರಣೆಯಿಂದ ಒಟ್ಟು ವೆಚ್ಚದ ಮೇಲೆ ಆಗುವ ಪರಿಣಾಮವು ಸಹಜವಾಗಿ ನಮಗೆ ವಿಶೇಷ ಆಸಕ್ತಿ ವಿಷಯವಾಗಿದೆ. ಆಯೋಗದ ಶಿಫಾರಸು ಜಾರಿ ಮಾಡಿದ ನಂತರದಲ್ಲಿ ವೇತನ ಮತ್ತು ಪಿಂಚಣಿ ಮೇಲಿನ ವಾರ್ಷಿಕ ವೆಚ್ಚವು ಹೇಗೆ ಬದಲಾವಣೆಯಾಗಲಿದೆ ಎಂದು ವಿವಿವರಿಸಿದೆ.

ವೇತನ ಸಂಸ್ಥೆಗಳ ಶಿಫಾರಸ್ಸುಗಳನ್ನು ಜಾರಿಗೊಳಿಸುವ ಮೊದಲನೆಯ ಮತ್ತು ಎರಡನೆಯ ವರ್ಷಗಳಲ್ಲಿ ಒಟ್ಟು ವೆಚ್ಚದ ಮೇಲೆ ವೇತನಗಳು ಮತ್ತು ಪಿಂಚಣಿಗಳ ಪರಿಷ್ಕರಣೆಯ ಪರಿಣಾಮವು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ ಹಾಗೂ ವೇತನ ಹೆಚ್ಚಳ ಸೌಲಭ್ಯ ಮತ್ತು ಭತ್ಯೆಗಳ ಪರಿಷ್ಕರಣೆಯಿಂದಾಗಿ ಪ್ರಾರಂಭಿಕ ವರ್ಷಗಳಲ್ಲಿನ ತ್ವರಿತ ಹೆಚ್ಚುವರಿ ವೆಚ್ಚವು ಇದಕ್ಕೆ ಕಾರಣವಾಗಿದೆ. ಕ್ರಮೇಣ ಈ ವೆಚ್ಚದಲ್ಲಿನ ಬೆಳವಣಿಗೆಯು ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಆಯೋಗ ಹೇಳಿದೆ.
ಆಯೋಗವು ತನ್ನ ಶಿಫಾರಸ್ಸುಗಳಿಗಾಗಿ ಲಭ್ಯವಿರುವ ವಿತ್ತೀಯ ಅವಕಾಶಗಳನ್ನು ನಿರ್ಧರಿಸಲು ರಾಜ್ಯದಲ್ಲಿ ಹೊರಹೊಮ್ಮುತ್ತಿರುವ ವಿತ್ತೀಯ ಸನ್ನಿವೇಶಗಳನ್ನು ಗಮನಿಸಿ ಮುಂಬರುವ ವರ್ಷಗಳಲ್ಲಿ ಸಂಬಂಧಿತ ವಿತ್ತೀಯ ಮಾನದಂಡಗಳು ಹೇಗೆ ಬದಲಾಗುತ್ತವೆ? ಎಂಬುದನ್ನು ಪರಿಶೀಲಿಸಿದೆ.
ಇದಕ್ಕಾಗಿ ಆಯೋಗವು ಸಮಾಲೋಚಕರ ಅಧ್ಯಯನವನ್ನು ಬಳಸಿಕೊಂಡಿದ್ದು, ಅಧ್ಯಯನದಲ್ಲಿರುವಂತೆ 2013-14 ರಿಂದ 2022-23 ಸಾಲಿನ ದತ್ತಾಂಶದ ಮೂಲಕ ಸಮಯ ಪ್ರವೃತ್ತಿ ಮಾದರಿಯನ್ನು (time trend model) ಅಭಿವೃದ್ಧಿಪಡಿಸಿದ್ದು, ಇದನ್ನಾಧರಿಸಿ 2023-24 ರಿಂದ 2027-28 ವರೆಗಿನ ಎಲ್ಲ ವಿತ್ತೀಯ ಮಾನದಂಡಗಳ ಮುನ್ನಂದಾಜುಗಳನ್ನು ಸಿದ್ಧಪಡಿಸಲಾಗಿದೆ.
ಎಷ್ಟು ವೆಚ್ಚವಾಗಲಿದೆ?: ಆಯೋಗ ತನ್ನ ಶಿಫಾರಸಿನಲ್ಲಿ ಸಿಎಜಿಆರ್ (ಶೇ.), 2022-23 (ಪ. ಅಂ.), 2023-24, 2024-25, 2025-26, 2026-27, 2027-28ರಲ್ಲಿ ವೇತನ, ಪಿಂಚಣಿಗಳ ಅಂದಾಜುಗಳನ್ನು (ರೂ. ಕೋಟಿಗಳಲ್ಲಿ) ನೀಡಿದೆ.
ಆಯೋಗ ಸಲ್ಲಿಕೆ ಮಾಡಿರುವ ವರದಿ ಅನ್ವಯ ವೇತನಗಳು ಸಿಎಜಿಆರ್ (ಶೇ.) 12.8, 2022-23ಕ್ಕೆ (ಪ. ಅಂ.) 55,358, 2023-24ನೇ ಸಾಲಿಗೆ 62,471, 2024-25ನೇ ಸಾಲಿಗೆ 70,497, 2025-26ನೇ ಸಾಲಿಗೆ 79,555, 2026-27ನೇ ಸಾಲಿಗೆ 89,776 ಮತ್ತು 2027-28ನೇ ಸಾಲಿಗೆ 1,01,311 ವೆಚ್ಚವಾಗಲಿದೆ ಎಂದು ಅಂದಾಜಿಸಿದೆ.
ಅಲ್ಲದೇ ಪಿಂಚಣಿಗಳಿಗಾಗಿ ಸಿಎಜಿಆರ್ (ಶೇ.) 11.5, 2022-23ಕ್ಕೆ (ಪ. ಅಂ.) 24,078, 2023-24ನೇ ಸಾಲಿಗೆ 26,858 , 2024-25ನೇ ಸಾಲಿಗೆ 29,959, 2025-26ನೇ ಸಾಲಿಗೆ 33,419, 2026-27ನೇ ಸಾಲಿಗೆ 37,277 ಮತ್ತು 2027-28ನೇ ಸಾಲಿಗೆ 41,582 ವೆಚ್ಚವಾಗಲಿದೆ ಎಂದು ಅಂದಾಜಿಸಿ ಅಂಕಿ ಅಂಶಗಳನ್ನು ನೀಡಿದೆ.
ವರದಿಯಲ್ಲಿ ವಾಡಿಕೆಯಂತೆ, ಸರ್ಕಾರವು ವಾರ್ಷಿಕ ಆಯವ್ಯಯ ಪ್ರಸ್ತುತಿಯೊಂದಿಗೆ ವಿತ್ತೀಯ ಮಾನದಂಡಗಳ ಮುನ್ನಾಂದಜುಗಳನ್ನು ತಯಾರಿಸುತ್ತಿದ್ದು, ಈ ಮುನ್ನಾಂದಜುಗಳು ಆವರ್ತಕ ಸ್ವರೂಪದಲ್ಲಿರುತ್ತವೆ ಮತ್ತು ನೂತನ ಆಯವ್ಯಯ ಬದ್ಧತೆಗಳನ್ನು ಮತ್ತು ಮುಂಬರುವ ವರ್ಷಗಳಲ್ಲಿ ಅವುಗಳ ಪರಿಣಾಮವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿರುತ್ತದೆ.
ಹೊಸ ಸರ್ಕಾರವು ಜುಲೈ 2023ರಲ್ಲಿ ಮಂಡಿಸಲಾದ 2023-24ರ ಆಯವ್ಯಯದ ಜೊತೆಯಲ್ಲಿ ಮಧ್ಯಮಾವಧಿ ವಿತ್ತೀಯ ಯೋಜನೆಗಳನ್ನು ಮಂಡಿಸದಿದ್ದರೂ ವಿತ್ತೀಯ ಮಾನದಂಡಗಳ ಮೇಲೆ ದೀರ್ಘಾವಧಿ ಪರಿಣಾಮವುಳ್ಳ ಸರ್ಕಾರಿ ಆದ್ಯತೆಗಳಲ್ಲಿನ ಗಮನಾರ್ಹ ಬದಲಾವಣೆಗಳನ್ನು ಅದು ಒಳಗೊಂಡಿತ್ತು.
2024-25ನೇ ಸಾಲಿನ ಆಯವ್ಯಯವನ್ನು 16/02/2024ರಂದು ಮಂಡಿಸಲಾಗಿದ್ದು, 2027-28ನೇ ಸಾಲಿನವರೆಗೆ ಹೊಸ ಮುನ್ನಾಂದಜುಗಳೊಂದಿಗೆ, 2024-28ರ ಮಧ್ಯಮಾವಧಿ ವಿತ್ತೀಯ ಯೋಜನೆಯನ್ನು ಒದಗಿಸಿದೆ. (2026-27ನೇ ಸಾಲಿನವರೆಗಿನ ಮುನ್ನಾಂದಜುಗಳೊಂದಿಗೆ, ಫೆಬ್ರವರಿ 2023 ರಲ್ಲಿ ಮಂಡಿಸಲಾದ ಹಿಂದಿನ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಪ್ರಸ್ತುತ ಸರ್ಕಾರದ ಹೊಸ ಉಪಕ್ರಮಗಳನ್ನು ಸಹಜವಾಗಿಯೇ ಉಲ್ಲೇಖಿಸಿರುವುದಿಲ್ಲ) ಎಂದು ಹೇಳಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಸೂಕ್ತ ಪರಿಹಾರವನ್ನು ಒದಗಿಸುವಾಗ, ಅಭಿವೃದ್ಧಿ ವೆಚ್ಚಕ್ಕಾಗಿ ಸಮರ್ಪಕ ಸಂಪನ್ಮೂಲಗಳ ಲಭ್ಯತೆಯನ್ನೂ ಸಹ ರಾಜ್ಯವು ಖಚಿತ ಪಡಿಸಿಕೊಳ್ಳಬೇಕು. ಇದಕ್ಕಾಗಿ, ಸರ್ಕಾರವು ಚಾರಿತ್ರಿಕವಾಗಿ ಅತ್ಯಂತ ಕಡಿಮೆ ಮತ್ತು ದೇಶದಲ್ಲಿಯೇ ಅತಿ ಕಡಿಮೆ ಆದಾಯ ಪಡೆಯುವ ರಾಜ್ಯಗಳಲ್ಲಿ ಒಂದೆನಿಸಿದ್ದು, ನಿರ್ದಿಷ್ಟವಾಗಿ ತೆರಿಗೆಯೇತರ ಆದಾಯದ ಸಂಗ್ರಹಣೆಯನ್ನು ಹೆಚ್ಚಿಸುವ ಅಗತ್ಯತೆ ಇದೆ.
ತೆರಿಗೆಯೇತರ ಆದಾಯವನ್ನು ಹೆಚ್ಚಿಸಲು ಸಾಕಷ್ಟು ಅವಕಾಶವಿದೆ. ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ತನ್ನ ವರದಿಯಲ್ಲಿ, ಹಲವು ಸೇವೆಗಳಿಗಾಗಿ ಶುಲ್ಕ, ದರ, ಬೆಲೆಯನ್ನು ವಿವಿಧ ಅಧಿನಿಯಮಗಳು, ನಿಯಮಗಳು, ಉಪ-ನಿಯಮಗಳು ಮತ್ತು ಅನುಸೂಚಿಗಳ ಅಡಿಯಲ್ಲಿ ಅನೇಕ ವರ್ಷಗಳ ಅಥವಾ ದಶಕಗಳ ಹಿಂದೆ ವಿಧಿಸಲಾಗಿರುತ್ತದೆ. ಇಲಾಖೆಗಳು ನಿಗದಿಪಡಿಸಿದ ತೆರಿಗೆಯೇತರ ರಾಜಸ್ವ ತೆರಿಗೆಗಳನ್ನು ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿನ ಸಮಿತಿಯು ಪರಾಮರ್ಶಿಸುತ್ತದೆ.
ಇಲಾಖೆಗಳು, ಮಂಡಳಿಗಳು, ನಿಗಮಗಳು ಮತ್ತು ಪ್ರಾಧಿಕಾರಗಳು ನಿಗದಿಪಡಿಸಿದ ಶುಲ್ಕ, ದರಗಳನ್ನು ಕೊನೆಯ ಬಾರಿ ಅವುಗಳನ್ನು ಪರಿಷ್ಕರಿಸಿದ ನಂತರದ ಹಣದುಬ್ಬರದ ಸೂಚ್ಯಾಂಕದಲ್ಲಿನ ಹೆಚ್ಚಳವನ್ನಾಧರಿಸಿ ಪರಿಷ್ಕರಿಸುವಂತೆ ಈ ಸಮಿತಿಯು ಶಿಫಾರಸ್ಸು ಮಾಡಿದೆ. ಈ ಪ್ರಕ್ರಿಯೆಯನ್ನು ಸಂಬಂಧಪಟ್ಟ ಸಂಸ್ಥೆಗಳು ಪ್ರತಿ ಮೂರು ವರ್ಷಕ್ಕೊಮ್ಮೆ ಕೈಗೊಳ್ಳಬೇಕು. ಪ್ರತಿಯೊಂದು ಇಲಾಖೆಯು ನಿರ್ವಹಿಸುವ ಅಧಿನಿಯಮಗಳ ಅಡಿಯಲ್ಲಿ ನಿಗದಿಪಡಿಸಿದ ದರಗಳು, ಶುಲ್ಕಗಳು, ಜುಲ್ಮಾನೆಗಳು ಇತ್ಯಾದಿಗಳನ್ನು ಅಪರ ಮುಖ್ಯ ಕಾರ್ಯದರ್ಶಿ ಸಮಿತಿಯು ಪರಿಶೀಲಿಸಿ ಅವುಗಳನ್ನು ಪರಿಷ್ಕರಿಸುವುದಕ್ಕಾಗಿ ಸೂಕ್ತ ಸಲಹೆಗಳನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟಿರುವುದು ಸರಿಯಾಗಿದೆ. ಅಲ್ಲದೆ, ವೆಚ್ಚವನ್ನು ತರ್ಕಬದ್ಧಗೊಳಿಸುವ ಮತ್ತು ಮರು ಆದ್ಯತೆಗೊಳಿಸುವುದರ ಮೂಲಕ ವಿತ್ತೀಯ ಅವಕಾಶವನ್ನು ಸೃಜಿಸಬಹುದು ಎಂದು ಹೇಳಿದೆ.












Click it and Unblock the Notifications