7th pay commission: 7ನೇ ವೇತನ ಆಯೋಗದ ಮುಂದಿದೆ ಪೊಲೀಸರ ಈ ಬೇಡಿಕೆ
ಬೆಂಗಳೂರು, ಫೆಬ್ರವರಿ.23: ರಾಜ್ಯ ಸರ್ಕಾರ ಕೆ. ಸುಧಾಕರ್ ನೇತೃತ್ವದಲ್ಲಿ ರಾಜ್ಯ 7ನೇ ವೇತನ ಆಯೋಗವನ್ನು ರಚನೆ ಮಾಡಿದೆ. ಬಜೆಟ್ ಮಂಡನೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗವನ್ನು ರಚಿಸಲಾಗಿದ್ದು, ಆಯೋಗದ ವರದಿ ಸ್ವೀಕರಿಸಿದ ನಂತರ ಪರಿಶೀಲಿಸಿ ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.
ಆದರೆ ಬಜೆಟ್ ಭಾಷಣದಲ್ಲಿ ಸರ್ಕಾರಿ ನೌಕರರ ಬೇಡಿಕೆಯಂತೆ ಎನ್‌ಪಿಎಸ್ ರದ್ದು ಮಾಡಿ ಹಳೆ ಪಿಂಚಣಿ ಯೋಜನೆ ಜಾರಿ ಮಾಡುವ ಕುರಿತು ಯಾವುದೇ ಉಲ್ಲೇಖ ಮಾಡಿರಲಿಲ್ಲ. ಕರ್ನಾಟಕ ಸರ್ಕಾರ 2023ರ ನವೆಂಬರ್‌ನಲ್ಲಿ ರಾಜ್ಯ 7ನೇ ವೇತನ ಆಯೋಗದ ಅವಧಿಯನ್ನು 2024ರ ಮಾರ್ಚ್ 15ರ ತನಕ ವಿಸ್ತರಣೆ ಮಾಡಿದೆ. ಈಗ ಆಯೋಗ ವರದಿ ನೀಡುವ ಮಾರ್ಚ್ 15ರ ಹೊತ್ತಿಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಇದೆ. ಇದರ ಜೊತೆಗೆ ಸರ್ಕಾರಿ ನೌಕರರು ಹಲವು ಬೇಡಿಕೆಗಳನ್ನು ವೇತನ ಆಯೋಗದ ಮುಂದಿಟ್ಟಿದ್ದಾರೆ.

ವೇತನ ಆಯೋಗದ ಮುಂದೆ ಪೊಲೀಸ್ ಇಲಾಖೆ ಬೇಡಿಕೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವೇತನ, ಮನೆ ಬಾಡಿಗೆ, ಪಿಂಚಣಿ, ಭತ್ಯೆ ಪರಿಷ್ಕರಣೆ ಕುರಿತು ಹಲವಾರು ಬೇಡಿಕೆಗಳನ್ನು ಆಯೋಗದ ಮುಂದಿಟ್ಟಿದೆ. ಇದೇ ವೇಳೆ ಸರ್ಕಾರಿ ನೌಕರರಾಗಿರುವ ಪೊಲೀಸರು ಕೂಡ ರಾಜ್ಯ 7ನೇ ವೇತನ ಆಯೋಗದ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಇದಕ್ಕೆ ಗೃಹ ಸಚಿವ ಜಿ. ಪರಮೇಶ್ವರ್ ಉತ್ತರ ನೀಡಿದ್ದಾರೆ.
ಕಾರಾಗೃಹ ಮತ್ತು ಅಗ್ನಿಶಾಮಕ ಇಲಾಖೆಯ ಎಎಸ್‌ಐ ಮತ್ತು ಪಿಎಸ್‌ಐ ಗಳು ವಾರ್ಷಿಕ ಗೆಜೆಟೆಡ್ (ವಾರ್ಷಿಕ ಸರ್ಕಾರಿ ರಜೆಯ) 30 ದಿನಗಳ ವೇತನ ಪಡೆಯುತ್ತಿದ್ದು, ಇದೇ ತರಹ ಪೊಲೀಸ್ ಇಲಾಖೆಯ ಎಎಸ್‌ಐ ಮತ್ತು ಪಿಎಸ್‌ಐಗಳು ವಾರ್ಷಿಕ 15 ದಿನಗಳ ವೇತನವನ್ನು ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನೆ ಮಾಡಲಾಗಿದೆ. ಇದಕ್ಕೆ "ಸರ್ಕಾರದ ಗಮನಕ್ಕೆ ಬಂದಿದೆ" ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ.
ಮುಂದುವರಿದು, ಪೊಲೀಸ್ಇಲಾಖೆಯ ಎಎಸ್‌ಐ ಮತ್ತು ಪಿ.ಎಸ್‌ಐಗಳು ವಾರ್ಷಿಕ ಮತ್ತು ಗೆಜೆಟೆಡ್ (ವಾರ್ಷಿಕ ಸರ್ಕಾರಿ) ರಜೆಯ 15 ದಿನಗಳ ವೇತನವನ್ನು 30 ದಿನಗಳವರೆಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದೆ..? ಎಂದು ಗೃಹ ಸಚಿವರಿಗೆ ಪ್ರರ್ಶನೆ ಕೇಳಲಾಗಿದ್ದು, ಇದಕ್ಕೆ ಸಚಿವ ಜಿ. ಪರಮೇಶ್ವರ್ ಉತ್ತರಿಸಿದ್ದಾರೆ.

ಪೊಲೀಸ್ ಇಲಾಖೆಯ ಪೊಲೀಸ್ ಸಿಬ್ಬಂದಿಗಳಿಗೆ ಪತ್ರಾಂಕಿತ ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸುವುದಕ್ಕಾಗಿ ಪ್ರಸ್ತುತ ನೀಡಲಾಗುತ್ತಿರುವ ವಾರ್ಷಿಕ 15 ದಿನಗಳ ಹೆಚ್ಚುವರಿ ವೇತನದ ಸೌಲಭ್ಯವನ್ನು 30 ದಿನಕ್ಕೆ ಹೆಚ್ಚಿಸುವ ವಿಷಯವು 7ನೇ ರಾಜ್ಯ ವೇತನ ಆಯೋಗದ ಪರಿಶೀಲನೆಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇದು ವೇತನ ಆಯೋಗ ಪರಿಗಣಿಸಿ ಜಾರಿಗೆ ತಂದರೆ, ಪೊಲೀಸ್ ಇಲಾಖೆಯ ಎಎಸ್‌ಐ ಮತ್ತು ಪಿ.ಎಸ್‌ಐಗಳ ವಾರ್ಷಿಕ 15 ದಿನಗಳ ಹೆಚ್ಚುವರಿ ವೇತನದ ಸೌಲಭ್ಯ 30 ದಿನಕ್ಕೆ ಹೆಚ್ಚಾಗಲಿದೆ. ಈ ಬೇಡಿಕೆ ಬಗ್ಗೆ ವೇತನ ಆಯೋಗ ಯಾವ ಕ್ರಮ ತೆಗೆದುಕೊಳ್ಳಲಿದೆ ಎಂಬುದನ್ನು ತಿಳಿದುಕೊಳ್ಳಲು ನೌಕರರು ಸಹ ಕಾಯುತ್ತಿದ್ದಾರೆ.












Click it and Unblock the Notifications