7th Pay Commission; ಸಚಿವಾಲಯ ವೃಂದಗಳ ಪ್ರಮುಖ ಬೇಡಿಕೆಗಳು
ಬೆಂಗಳೂರು, ಅಕ್ಟೋಬರ್ 06; ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ಸುಧಾಕರ್ ರಾವ್ ಅಧ್ಯಕ್ಷತೆಯ ರಾಜ್ಯ 7ನೇ ವೇತನ ಆಯೋಗಕ್ಕೆ ವರದಿಯೊಂದನ್ನು ಸಲ್ಲಿಕೆ ಮಾಡಿದೆ. ಈ ವರದಿಯಲ್ಲಿ ಸಚಿವಾಲಯದ ವಿವಿಧ ವೃಂದಗಳಿಗೆ ಸಂಬಂಧಿಸಿದಂತೆ ಸಂಘದ ಪ್ರಮುಖ ಬೇಡಿಕೆಗಳನ್ನು ಇಡಲಾಗಿದೆ.
ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಿದೆ. ಆಯೋಗ ನವೆಂಬರ್‌ನಲ್ಲಿ ಸರ್ಕಾರಕ್ಕೆ ವರದಿ ನೀಡುವ ನಿರೀಕ್ಷೆ ಇದೆ.

7ನೇ ರಾಜ್ಯ ವೇತನ ಆಯೋಗಕ್ಕೆ ವರದಿ ಸಲ್ಲಿಕೆ ಮಾಡಿರುವ ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ಗ್ರೂಪ್ 'ಡಿ' ನೌಕರರ ಬೇಡಿಕೆಗಳನ್ನು ಮುಂದಿಟ್ಟಿದೆ. ಪ್ರಸ್ತುತ ಗ್ರೂಪ್ 'ಡಿ' ನೌಕರರಿಗೆ ವಾರ್ಷಿಕವಾಗಿ ಸಮವಸ್ತ್ರ ಭತ್ಯೆಯನ್ನು ರೂ. 2000 ನೀಡುವುದರೊಂದಿಗೆ, ಪ್ರಸ್ತುತ ನೀಡಲಾಗುತ್ತಿರುವ ವಾಷಿಂಗ್ ಭತ್ಯೆಯೂ ಕೇವಲ ರೂ. 400 ಆಗಿದ್ದು, ಅದನ್ನು ಕನಿಷ್ಠ ರೂ. 1000 ಗಳಿಗೆ ಹೆಚ್ಚಿಸುವುದು. 7ನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿಯಲ್ಲಿ, ಕನಿಷ್ಟ ಮೂಲ ವೇತನವನ್ನು ರೂ. 35,000 ಗಳಿಗೆ ನಿಗದಿಪಡಿಸುವುದು ಎಂದು ಬೇಡಿಕೆ ಇಡಲಾಗಿದೆ.
ಕಿರಿಯ ಸಹಾಯಕ (Junior Assistant); ಆಯೋಗಕ್ಕೆ ನೀಡಿರುವ ವರದಿಯಲ್ಲಿ ಕಿರಿಯ ಸಹಾಯಕ ಹಾಗೂ ಬೆರಳಚ್ಚುಗಾರರು/ ದತ್ತಾಂಶ ನಮೂದು ಸಹಾಯಕರ ಬೇಡಿಕೆಗಳ ಕುರಿತು ಮನವಿ ಮಾಡಲಾಗಿದೆ.
ಸಚಿವಾಲಯದಲ್ಲಿನ ಎಲ್ಲಾ ನೇರ ನೇಮಕಾತಿ ಹುದ್ದೆಗಳಿಗೆ ಆರಂಭಿಕವಾಗಿ ಫೀಡರ್ ಕೇಡರ್ ಹುದ್ದೆಗಳಾಗಿರುವುದರಿಂದ ಆರಂಭಿಕ ಹಂತದಲ್ಲಿಯೇ ಕೆಲವು ಹುದ್ದೆಗಳಿಗೆ ಸರ್ಕಾರದ ಇತರ ಸರಿಸಮಾನ ಕ್ಷೇತ್ರಿಯ ಹುದ್ದೆಗಳಿಗಿಂತ ಕನಿಷ್ಠ ಒಂದು ಹಂತದ ಹೆಚ್ಚಿನ ವೇತನ ಶ್ರೇಣಿ ಇರಬೇಕಾಗಿರುತ್ತದೆ. ಅದರಂತೆಯೇ ಈಗಾಗಲೇ ಸಚಿವಾಲಯದಲ್ಲಿನ ಸಹಾಯಕ ವೃಂದ ಹಾಗೂ ಶೀಘ್ರಲಿಪಿಗಾರರ ವೃಂದದಲ್ಲಿ ಕ್ಷೇತ್ರಿಯ ಇಲಾಖೆಯ ನೌಕರರಿಗಿಂತ ಆರಂಭಿಕ ಒಂದು ಹಂತದ ಹೆಚ್ಚಿನ ವೇತನ ಶ್ರೇಣಿಯನ್ನು ನೀಡಲಾಗುತ್ತಿದೆ ಎಂದು ವಿವರಿಸಲಾಗಿದೆ.
ಆದರೆ ಕಿರಿಯ ಸಹಾಯಕರು ಹಾಗೂ ಬೆರಳಚ್ಚುಗಾರರು ವೇತನ ಶ್ರೇಣಿಯು ಕ್ಷೇತ್ರೀಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಸಹಾಯಕರಿಗೂ ಹಾಗೂ ಬೆರಳಚ್ಚುಗಾರರಿಗೂ ಒಂದೇ ವೇತನ ಶ್ರೇಣಿ ನಿಗಧಿಪಡಿಸಲಾಗಿದೆ ಎಂದು ಹೇಳಿದೆ.
ಸಚಿವಾಲಯದಲ್ಲಿ 1977ಕ್ಕಿಂತ ಮೊದಲು ಕಿರಿಯ ಸಹಾಯಕರ ವೇತನ ಶ್ರೇಣಿಯು ದ್ವಿತೀಯ ದರ್ಜೆ ಸಹಾಯಕರು ವೇತನ ಶ್ರೇಣಿಗಿಂತ ಜಾಸ್ತಿ ಇತ್ತು. ಆದರೆ ನಂತರದ ವರ್ಷಗಳಲ್ಲಿ ಸಚಿವಾಲಯದ ಕಿರಿಯ ಸಹಾಯಕರ ವೇತನಶ್ರೇಣಿಯನ್ನು ದ್ವಿತೀಯ ದರ್ಜೆ ಸಹಾಯಕರು ವೇತನ ಶ್ರೇಣಿಗೆ ಸರಿಸಮ ಮಾಡಲಾಗಿದ್ದು, ಅದನ್ನು ಮೊದಲಿನಂತೆ ಅಂದರೆ ಸಚಿವಾಲಯದ ಕಿರಿಯ ಸಹಾಯಕರ ವೇತನ ಶ್ರೇಣಿ ಪ್ರತ್ಯೇಕವಾಗಿಸುವ ಅಗತ್ಯತೆ ಇದೆ ಎಂದು ಮನವಿ ಮಾಡಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಪೋಲಿಸ್ ಕಾನ್ಸ್‌ಟೇಬಲ್, ಡಿ. ಆರ್. ಪೋಲಿಸ್ ಪೇದೆ ಹಾಗೂ ಅಗ್ನಿಶಾಮಕ ಪೇದೆ ಅಂತಹ ಹುದ್ದೆಗಳ ನೇಮಕಾತಿಗೆ 10ನೇ ತರಗತಿ ವಿದ್ಯಾಭ್ಯಾಸ ನಿಗದಿಪಡಿಸಲಾಗಿದ್ದು ಸದರಿ ವೇತನ ಶ್ರೇಣಿಯನ್ನು ರೂ. 23,500 ನಿಗದಿಪಡಿಸಲಾಗುತ್ತದೆ. ಆದರೆ ಕಿರಿಯ ಸಹಾಯಕರ ನೇಮಕಾತಿಗೆ 10+2 (ಪಿ.ಯು.ಸಿ) ವಿದ್ಯಾಭ್ಯಾಸಗಳನ್ನು ನಿಗದಿಪಡಿಸಿದ್ದು, ಸದರಿ ಹುದ್ದೆಗೆ ವೇತನ ಶ್ರೇಣಿಯು ಮಾತ್ರ ರೂ. 21.400 ನೀಡುತ್ತಿರುವುದು ಸಮಂಜಸವಾಗಿರುವುದಿಲ್ಲ ಎಂದು ಹೇಳಿದೆ.
ಆದ್ದರಿಂದ, ಸಚಿವಾಲಯಕ್ಕೆ ನೇಮಕಗೊಂಡಿರುವ ಕಿರಿಯ ಸಹಾಯಕ ಹಾಗೂ ಬೆರಳಚ್ಚುಗಾರ ಹುದ್ದೆಗಳಿಗೆ ಈ ತಾರತಮ್ಯ ಸರಿಪಡಿಸಿ ಪ್ರಸ್ತುತ ವೇತನ ಶ್ರೇಣಿಯ ರೂ. 21,400-42,000 ಅದರ ಬದಲಾಗಿ ಒಂದು ಹಂತ ಹೆಚ್ಚಿಸಿ ರೂ. 23,500- 47,650ಕ್ಕೆ ನಿಗದಿಪಡಿಸುವಂತೆ ವರದಿಯಲ್ಲಿ ರಾಜ್ಯ 7ನೇ ವೇತನ ಆಯೋಗಕ್ಕೆ ಮನವಿ ಮಾಡಲಾಗಿದೆ.












Click it and Unblock the Notifications