7th Pay Commission; ವರದಿ ಬಗ್ಗೆ ಸರ್ಕಾರಿ ನೌಕರರ ಸಂಘ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 17: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಮಾರ್ಚ್ 19ರ ಶನಿವಾರ ಕರ್ನಾಟಕ ಸರ್ಕಾರಕ್ಕೆ ಆಯೋಗದ ವರದಿ ಸಲ್ಲಿಕೆ ಮಾಡಿದೆ. ಆದರೆ ಲೋಕಸಭೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಸದ್ಯಕ್ಕೆ ವರದಿ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳು, ಕೆ. ಸುಧಾಕರ್ ರಾವ್ ಅವರನ್ನು ಭೇಟಿ ಮಾಡಿ 7ನೇ ರಾಜ್ಯ ವೇತನ ಆಯೋಗದ ವರದಿ ಸಲ್ಲಿಕೆ ಮಾಡಿದ ಬಳಿಕ ಅಭಿನಂದನೆ ಸಲ್ಲಿಕೆ ಮಾಡಿದರು.

7ನೇ ವೇತನ ಆಯೋಗದ ವರದಿಯಲ್ಲಿನ ಮುಖ್ಯಾಂಶಗಳನ್ನು ರಾಜ್ಯ ಸರ್ಕಾರಿ ನೌಕರರ ಸಂಘ ಪತ್ರಿಕಾ ಪ್ರಕಟಣೆ ಮೂಲಕ ರಾಜ್ಯ 7ನೇ ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ದಿನಾಂಕ 16/03/2024ರಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಯೋಗದ ವರದಿಯನ್ನು ಸಲ್ಲಿಸಿರುತ್ತಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳ ಪರಿಷ್ಕರಣೆಗಾಗಿ ಸಲ್ಲಿಸಿದ್ದ ಪ್ರಸ್ತಾವನೆಯ ಅಂಶಗಳನ್ನು ಪರಿಗಣಿಸಿ ಶಿಫಾರಸ್ಸಿನಲ್ಲಿ ಉಲ್ಲೇಖಿಸಿ, ಈ ಮುಂದಿನಂತೆ ಶಿಫಾರಸ್ಸು ಮಾಡಿದೆ ಎಂದು ಸಂಘ ಹೇಳಿದೆ.
* ದಿನಾಂಕ 01/07/2022ಕ್ಕೆ ಇದ್ದಂತೆ ರಾಜ್ಯ ಸರ್ಕಾರಿ ನೌಕರರ ಮೂಲ ವೇತನಕ್ಕೆ ಶೇ. 27.50 ರಷ್ಟು ಫಿಟ್‌ಮೆಂಟ್ ಹೆಚ್ಚಿಸಲು ಶಿಫಾರಸ್ಸು. ದಿನಾಂಕ 01/07/2022ಕ್ಕೆ ಇದ್ದಂತಹ ಶೇ. 31 ತುಟ್ಟಿಭತ್ಯೆ ವಿಲೀನ ಹಾಗೂ ಮೇಲಿನ 27.50 ರಷ್ಟು ಸೇರಿ ಒಟ್ಟು ಶೇ. 58.50ರಷ್ಟು ಮೂಲ ವೇತನದಲ್ಲಿ ಹೆಚ್ಚಳ.
* ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ರೂ. 17,000 ರಿಂದ 27,000ಕ್ಕೆ ಹಾಗೂ ಗರಿಷ್ಠ ಮೂಲ ವೇತನವನ್ನು ರೂ. 1,04.600-00 ರೂ. 2,41,200-00ಕ್ಕೆ ಹೆಚ್ಚಳ. ಸರ್ಕಾರಿ ನೌಕರರಿಗೆ ಹೊಸ ವೇತನ ಶ್ರೇಣಿ ಹಾಗೂ ಫಿಟ್ ಮೆಂಟ್ ಸೌಲಭ್ಯವನ್ನು ದಿನಾಂಕ 01/07/2022ರಿಂದ ಕಾಲ್ಪನಿಕವಾಗಿ ಅನುಷ್ಠಾನಗೊಳಿಸಲು ಶಿಫಾರಸ್ಸು.
* ವಾರ್ಷಿಕ ವೇತನ ಬಡ್ತಿ ದರವನ್ನು ಕನಿಷ್ಠ ರೂ. 400ರಿಂದ ರೂ. 650ಕ್ಕೆ ಹಾಗೂ ಗರಿಷ್ಠ ರೂ. 3,100ರಿಂದ ರೂ. 5,000ಕ್ಕೆ ಹೆಚ್ಚಳ. ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ದಿನಾಂಕ 01/07/2022ರಿಂದ ಭಾರತ ಸರ್ಕಾರವು ಮಂಜೂರು ಮಾಡಿದ ಪ್ರತಿ ಶೇ.1 ರಷ್ಟು ತುಟ್ಟಿಭತ್ಯೆಗೆ ಶೇ.0.722ರಷ್ಟು ನೀಡುವುದು.
* ಭಾರತ ಸರ್ಕಾರವು ತನ್ನ ನೌಕರರಿಗೆ ಮುಂದೆ ವೇತನ ಪರಿಷ್ಕರಿಸಿದಾಗ ಕೇಂದ್ರ ವೇತನ ರಚನೆಯ ಆಧಾರದ ಮೇಲೆ ರಾಜ್ಯ ಸರ್ಕಾರವು ತನ್ನ ನೌಕರರಿಗೆ ಕೇಂದ್ರ ಮಾದರಿಯ ವೇತನ ನೀಡಲು ಶಿಫಾರಸ್ಸು ಮಾಡಿದೆ.
* ಗ್ರೂಪ್ 'ಸಿ' ಮತ್ತು 'ಡಿ' ವೃಂದದ ನೌಕರರಿಗೆ ಹಾಲಿ ಇರುವ ಜಿ.ಐ.ಎಸ್. ಮಾಸಿಕ ಶೇ. 100ಕ್ಕೆ ಹೆಚ್ಚಳ ಮತ್ತು ಗ್ರೂಪ್ 'ಎ' ಮತ್ತು 'ಬಿ' ವೃಂದಕ್ಕೆ ಶೇ 50ಕ್ಕೆ ಹೆಚ್ಚಿಸಲು ಶಿಫಾರಸ್ಸು. ಪರಿಷ್ಕರಣೆಯಿಂದ ಹೆಚ್ಚಳವಾಗುವ ಮೂಲ ವೇತನಕ್ಕೆ ಮನೆ ಬಾಡಿಗೆ ಭತ್ಯೆಗಳನ್ನು ಕ್ರಮವಾಗಿ 'ಎ' ವರ್ಗದ ನಗರಗಳಿಗೆ ಶೇ.20, 'ಬಿ' ವರ್ಗದ ನಗರಗಳಿಗೆ ಶೇ.15, 'ಸಿ' ವರ್ಗದ ಪ್ರದೇಶಗಳಿಗೆ ಶೇ.7.5 ಶಿಫಾರಸ್ಸು.
* ಪರಿಷ್ಕರಣೆಯಿಂದ ಹೆಚ್ಚಳವಾಗುವ ಮೂಲ ವೇತನಕ್ಕೆ ನಗರ ಪರಿಹಾರ ಭತ್ಯೆಗಳನ್ನು ಕ್ರಮವಾಗಿ 'ಎ' ಮತ್ತು 'ಬಿ' ವೃಂದದ ನೌಕರರಿಗೆ ರೂ. 600 ರಿಂದ ರೂ. 900ಕ್ಕೆ ಮತ್ತು 'ಸಿ ಮತ್ತು 'ಡಿ' ವೃಂದದ ನೌಕರರಿಗೆ ರೂ. 500 ರಿಂದ ರೂ. 750ಕ್ಕೆ ಹೆಚ್ಚಳ.
* ಸಮವಸ್ತ್ರ ಭತ್ಯೆ, ನಿಗದಿತ ಪ್ರಯಾಣ ಭತ್ಯೆ, ಸಾಗಣೆ ಭತ್ಯೆ, ದಿನಭತ್ಯೆ ಮತ್ತು ವರ್ಗಾವಣೆ ಅನುದಾನವನ್ನು ಹಾಲಿ ಇರುವ ದರಗಳಿಗೆ ಶೇ.25 ಹೆಚ್ಚಳ. ವಿಕಲಚೇತನ ನೌಕರರಿಗೆ ಹಲವಾರು ಭತ್ಯೆಗಳು ಮತ್ತು ಸೌಲಭ್ಯಗಳನ್ನು ಹೆಚ್ಚಳಕ್ಕೆ ಶಿಫಾರಸ್ಸು. ವಿಶೇಷಚೇತನ ಮಕ್ಕಳ ಶೈಕ್ಷಣಿಕ ಭತ್ಯೆಯನ್ನು ಪ್ರತಿ ತಿಂಗಳು ರೂ. 1000ರಿಂದ ರೂ. 2000ಕ್ಕೆ ಹೆಚ್ಚಳಕ್ಕೆ ಶಿಫಾರಸ್ಸು.
* ನಾಲ್ಕು ಚಕ್ರ ವಾಹನ ಖರೀದಿ ಮುಂಡವನ್ನು ರೂ. 3ಲಕ್ಷದಿಂದ ರೂ. 6 ಲಕ್ಷಕ್ಕೆ ಹಾಗೂ ದ್ವಿ-ಚಕ್ರ ವಾಹನಕ್ಕೆ ರೂ. 50,000 ರಿಂದ ರೂ. 80,000ಗಳಿಗೆ ಹೆಚ್ಚಳ. ಗೃಹನಿರ್ಮಾಣ ಮುಂಗಡವನ್ನು 'ಎ' ವೃಂದಕ್ಕೆ 65 ಲಕ್ಷ ಮತ್ತು ಇತರೆ ವೃಂದದ ನೌಕರರಿಗೆ ರೂ. 40 ಲಕ್ಷಗಳಿಗೆ ಹೆಚ್ಚಳ.
* ನೌಕರರ ಸೇವಾವಧಿಯಲ್ಲಿ ಮೂರು ಭಾರಿ ಎಲ್.ಟಿ.ಸಿ. ಸೌಲಭ್ಯಕ್ಕೆ ಅವಕಾಶ. ಗ್ರೂಪ್ 'ಡಿ' ಮತ್ತು 'ಸಿ' ವೃಂದದ ನೌಕರರಿಗೆ ಹಾಲಿ ಇದ್ದಂತಹ ವೈದ್ಯಕೀಯ ಭತ್ಯೆ ರೂ. 200 ರಿಂದ ರೂ. 500ಕ್ಕೆ ಹೆಚ್ಚಳ.
* ಸರ್ಕಾರಿ ನೌಕರರ ಅವಲಂಬಿತ ಕುಟುಂಬ ಸದಸ್ಯರು ಅನಾರೋಗ್ಯದ ಸಂದರ್ಭದಲ್ಲಿ ಆರೈಕೆ ಮಾಡಲು ಶೇ. 50ವೇತನದೊಂದಿಗೆ 180 ದಿನಗಳ 'ಆರೈಕೆ ರಜೆ' ಎಂಬ ಹೊಸ ಯೋಜನೆಗೆ ಶಿಫಾರಸ್ಸು ಮಾಡಿದೆ. ಸರ್ಕಾರಿ ಸೇವೆಗೆ ಸೇರುವ 2 ತಿಂಗಳ ಮೊದಲು ಮಗುವಿಗೆ ಜನ್ಮ ನೀಡಿದ ಮಹಿಳಾ ಸರ್ಕಾರಿ ನೌಕರರಿಗೆ ನವಜಾತ ಶಿಶುವಿನ ಹಾರೈಕೆಗಾಗಿ 18 ವಾರಗಳ ಹೆರಿಗೆ ರಜೆಗೆ ಶಿಫಾರಸ್ಸು ಮಾಡಿದೆ.
* ಕೆಲಸ-ವಿರಾಮ ಸಮತೋಲನವನ್ನು ಸುಧಾರಿಸಲು ಹಾಗೂ ಸರ್ಕಾರಿ ನೌಕರರ ಕೆಲಸದ ಗುಣಮಟ್ಟವನ್ನು ಹೆಚ್ಚಿಸಲು ವಾರದ 5 ದಿನಗಳ ಕೆಲಸದ ಅವಧಿಯನ್ನು ಪರಿಚಯಿಸಲು ಶಿಫಾರಸ್ಸು ಮಾಡಿದೆ.
* ರಾಜ್ಯ ಸರ್ಕಾರಿ ನೌಕರರ ಆಡಳಿತ ಇಲಾಖೆಯ ಹಾಗೂ ಕ್ಷೇತ್ರ ಇಲಾಖೆಗಳ ನೌಕರರಿಗೆ ಗುಣಮಟ್ಟದ ತರಬೇತಿಗಾಗಿ ಸಮಗ್ರ ತರಬೇತಿಗೆ ಶಿಫಾರಸ್ಸು ಮಾಡಿದೆ. ಈ ಮೇಲ್ಕಂಡ ಎಲ್ಲಾ ಸೌಲಭ್ಯಗಳು ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ ರೀತಿಯಲ್ಲಿಯೇ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ನೌಕರರಿಗೂ ಅನ್ವಯಗೊಳಿಸಲು ಶಿಫಾರಸ್ಸು ಮಾಡಿದೆ.
* ಮಾಸಿಕ ಪಿಂಚಣಿಯ ಪ್ರಮಾಣವು ಅಂತಿಮ ಮೂಲ ವೇತನದ ಶೇ. 50ರಷ್ಟು ಹಾಗೂ ಕುಟುಂಬ ಪಿಂಚಣಿಯು ಶೇ.30 ಮುಂದುವರೆದು, ಕನಿಷ್ಠ ಪಿಂಚಣಿ ರೂ. 13,500 ಹಾಗೂ ಗರಿಷ್ಠ ಪಿಂಚಣಿ ರೂ. 1,20,600ಕ್ಕೆ ಪರಿಷ್ಕರಿಸಿದೆ.
* 70-80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿಯ ಹೆಚ್ಚುವರಿ ಶೇ. 10ರಷ್ಟು ಶಿಫಾರಸ್ಸು ಮಾಡಿದೆ. ಪಿಂಚಣಿದಾರರಿಗೆ 'ಸಂಧ್ಯಾಕಿರಣ' ಎಂಬ ಆರೋಗ್ಯ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲು ಶಿಫಾರಸ್ಸು ಮಾಡಿದೆ. ಅಲ್ಲಿಯವರೆಗೆ ಮಾಸಿಕ ರೂ. 500ಗಳ ವೈದ್ಯಕೀಯ ಭತ್ಯೆ ನೀಡಲು ಶಿಫಾರಸ್ಸು ಮಾಡುತ್ತದೆ. ಪಿಂಚಣಿದಾರರು ಮರಣ ಹೊಂದಿದಲ್ಲಿ ರೂ. 10,000ಗಳ ಶವಸಂಸ್ಕಾರ ಮೊತ್ತವನ್ನು ನೀಡಲು ಶಿಫಾರಸ್ಸು.
ವಿವಿಧ ವೃಂದಗಳ ವೇತನ ತಾರತಮ್ಯ ಹಾಗೂ ಇಲಾಖೆಗಳ ಬೇಡಿಕೆಗಳ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ನೀಡಿದ ಮನವಿಯನ್ನು ಪರಿಶೀಲಿಸಿ ಮತ್ತೊಂದು ಅಂತಿಮ ವರದಿಯನ್ನು ಆದಷ್ಟು ಶೀಘ್ರದಲ್ಲಿಯೇ ಆಯೋಗವು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications