7th Pay Commission; ವೇತನ ಆಯೋಗದ ಹೋರಾಟ, ಮಹತ್ವದ ಸಭೆ ಕರೆದ ಸರ್ಕಾರಿ ನೌಕರರು
ಬೆಂಗಳೂರು, ಜುಲೈ 15: ಕರ್ನಾಟಕ ಸರ್ಕಾರ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗೆ ವಿಳಂಬ ಮಾಡುತ್ತಿದೆ. ಸೋಮವಾರ ಸಂಜೆ ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಯಾವ ತೀರ್ಮಾನ ಮಾಡಲಾಗುತ್ತದೆ? ಎಂದು ನೌಕರರು ಕಾಯುತ್ತಿದ್ದಾರೆ.
ಈ ನಡುವೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ವೃಂದ ಸಂಘಗಳ ಅಧ್ಯಕ್ಷರು-ಪದಾಧಿಕಾರಿಗಳ ಸಭೆಯನ್ನು ಕರೆದಿದ್ದಾರೆ. ಈ ಮಹತ್ವದ ಸಭೆಯಲ್ಲಿ ನೌಕರರ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಯಲಿದೆ.

ಸಭೆಯ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಶ್ರೀನಿವಾಸ್ ಪ್ರಕಟಣೆ ಹೊರಡಿಸಿದ್ದಾರೆ. ಜುಲೈ 23ರ ಮಂಗಳವಾರ ಸಂಜೆ 5 ಗಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆವರಣ, ಕಬ್ಬನ್ ಉದ್ಯಾನ, ಬೆಂಗಳೂರು ಇಲ್ಲಿ ಸಭೆ ನಡೆಯಲಿದೆ.
ಸಭೆಯ ವಿವರಗಳು: ಪ್ರಕಟಣೆಯಲ್ಲಿ ಕರ್ನಾಟಕ ರಾಜ್ಯದ ಸಮಸ್ತ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆಗಾಗಿ ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಇದುವರೆಗೂ ಅನುಷ್ಠಾನಗೊಳಿಸಿರುವುದಿಲ್ಲ ಎಂದು ಹೇಳಿದೆ.
ಎನ್.ಪಿ.ಎಸ್. ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು ಮತ್ತು ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವ ಪ್ರಮುಖ ಬೇಡಿಕೆಗಳ ಬಗ್ಗೆ ಮುಂದಿನ ಹೋರಾಟದ ರೂಪು-ರೇಷೆಗಳ ಕುರಿತು ಚರ್ಚಿಸಲು ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು-ತಾಲ್ಲೂಕು ಅಧ್ಯಕ್ಷರು- ಪದಾಧಿಕಾರಿಗಳು, ಎಲ್ಲಾ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ನಿಗಮ/ ಮಂಡಇಳಿ, ಪ್ರಾಧಿಕಾರ, ವಿಶ್ವವಿದ್ಯಾಲಯಗಳು, ಸ್ಥಳೀಯ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆ ಮತ್ತು ಅನುದಾನಿತ ಸಂಸ್ಥೆಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ರಾಜ್ಯ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದೆ.
ಈ ಸಭೆಯು ರಾಜ್ಯದ ಸರ್ಕಾರಿ ನೌಕರರು ಹಾಗೂ ಇತರೆ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಭಾಗವಾಗಿ ನಿರ್ಣಯ ಕೈಗೊಳ್ಳುವ ಅತ್ಯಂತ ಮಹತ್ವದ ಸಭೆಯಾಗಿರುವುದರಿಂದ ತಾವುಗಳು ತಪ್ಪದೆ ಈ ಸಭೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಿದೆ ಎಂದು ಮನವಿ ಮಾಡಲಾಗಿದೆ.
ಎರಡು ಹಂತದ ಹೋರಾಟ: ಕರ್ನಾಟಕದ ಸರ್ಕಾರಿ ನೌಕರರು 7ನೇ ವೇತನ ಆಯೋಗದ ವರದಿ ಜಾರಿಗೊಳಿಸಲು ಆಗ್ರಹಿಸಿ 2 ಹಂತದಲ್ಲಿ ಹೋರಾಟ ಮಾಡುತ್ತಿದ್ದಾರೆ. ಮೊದಲ ಹಂತದಲ್ಲಿ ಜನಪ್ರತಿನಿಧಿಗಳಿಗೆ ಮನವಿಗಳನ್ನು ನೀಡಿದ್ದಾರೆ.
ನೌಕರರು ಅನಿರ್ಧಿಷ್ಟಾವಧಿ ಮುಷ್ಕರದ ಕರೆಯನ್ನು ನೀಡಿದ್ದಾರೆ. ವರದಿಯ ಶಿಫಾರಸು ಜಾರಿ ಬಗ್ಗೆ ತೀರ್ಮಾನ ಕೈಗೊಳ್ಳದಿದ್ದರೆ ಜುಲೈ ಅಂತ್ಯ ಅಥವ ಆಗಸ್ಟ್ ಮೊದಲ ವಾರದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವ ನಿರೀಕ್ಷೆ ಇದೆ. ಈ ಕುರಿತು ತೀರ್ಮಾನಿಸಲು ಜುಲೈ 23ರಂದು ಸಭೆಯನ್ನು ಕರೆಯಲಾಗಿದೆ.
ಸರ್ಕಾರಿ ನೌಕರರು 2023ರ ಮಾರ್ಚ್‌ನಲ್ಲಿಯೂ 7ನೇ ವೇತನ ಆಯೋಗದ ಶಿಫಾರಸು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಸರ್ಕಾರ ನೌಕರರ ವೇತನವನ್ನು ಶೇ 17ರಷ್ಟು ಏರಿಕೆ ಮಾಡುವ ಘೋಷಣೆ ಮಾಡಿದ ಬಳಿಕ ಮುಷ್ಕರ ನಿಲ್ಲಿಸಿದ್ದರು. ಈಗ ಪುನಃ ಮುಷ್ಕರದ ಕರೆ ನೀಡಲಾಗಿದೆ.
ಕೆ. ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾರ್ಚ್ 16 ರಂದು ವರದಿ ನೀಡಿದೆ. ಮುಖ್ಯಮಂತ್ರಿಗಳು ವರದಿಯನ್ನು ಹಣಕಾಸು ಇಲಾಖೆಗೆ ನೀಡಿದ್ದಾರೆ. ಇಲಾಖೆ ಅಧಿಕಾರಿಗಳು ವರದಿಯನ್ನು ಹೇಗೆ ಜಾರಿಗೊಳಿಸಬಹುದು? ಎಂದು ಮುಖ್ಯಮಂತ್ರಿಗಳಿಗೆ ವರದಿ ನೀಡಿದ್ದಾರೆ.
ಆಯೋಗ ತನ್ನ ವರದಿಯಲ್ಲಿ ನೌಕರರ ಮೂಲ ವೇತನದ ಶೇಕಡ 27.5ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ಹಣಕಾಸು ಇಲಾಖೆ ಅಧಿಕಾರಿಗಳು ನೀಡಿರುವ ವರದಿ ಕುರಿತು ಸೋಮವಾರ ಸಂಜೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ. ಬಳಿಕ ಸರ್ಕಾರ ವರದಿ ಶಿಫಾರಸು ಜಾರಿಗೆ ಕುರಿತು ತೀರ್ಮಾನವನ್ನು ಕೈಗೊಳ್ಳಲಿದೆ.












Click it and Unblock the Notifications